ಸಾಮಾಜಿಕ ಶೈಕ್ಷಣಿಕ ಹಾಗೂ ಅರ್ಥಿಕವಾಗಿ ಹಿಂದುಳಿದ ಕಾಡುಗೊಲ್ಲರನ್ನು ಎಸ್ಟಿಮೀಸಲಾತಿಗೆ ಒಳಪಡಿಸಿ ಎಂದು ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಗಂಗಾಧರ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪಾವಗಡ : ಸಾಮಾಜಿಕ ಶೈಕ್ಷಣಿಕ ಹಾಗೂ ಅರ್ಥಿಕವಾಗಿ ಹಿಂದುಳಿದ ಕಾಡುಗೊಲ್ಲರನ್ನು ಎಸ್ಟಿಮೀಸಲಾತಿಗೆ ಒಳಪಡಿಸಿ ಎಂದು ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಗಂಗಾಧರ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಾಡುಗೊಲ್ಲ ಸಂಘದ ವತಿಯಿಂದ ಭಾನುವಾರ ತಾಲೂಕಿನ ವೀರ್ಲಗೊಂಧಿ ಹಾಗೂ ಕಾರನಾಗನಹಟ್ಟಿಗ್ರಾಮಗಳಲ್ಲಿ ಆಯೋಜಿಸಿದ್ದ ಕಾಡುಗೊಲ್ಲರ ನಡೆ ಎಸ್ಟಿಮೀಸಲಾತಿ ಹೋರಾಟದ ಕಡೆಗೆ ಜಾಗೃತಿ ಅಭಿಯಾನ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
1931 ರ ಹಿಂದೆ ಸಂಸ್ಥಾನದಲ್ಲಿ ಕಾಡುಗೊಲ್ಲರ ಮಾಹಿತಿ ದಾಖಲೆಯಿತ್ತು. ನಂತರ 2018ರಲ್ಲಿ ಸಿದ್ದರಾಮಯ್ಯರ ಅವಧಿಯಲ್ಲಿಪಟ್ಟಿಗೆ ಸೇರಿಸಿದ್ದು ಬಿಟ್ಟರೇ ಆನಂತರ ಸಂಪೂರ್ಣವಾಗಿ ಕಾಡುಗೊಲ್ಲರು ನಿರ್ಲಕ್ಷ್ಯಕ್ಕೊಳಪಟ್ಟಿರುವುದು ದುರಂತ ಎಂದರು. ಕಂದಾಯ ಇಲಾಖೆಯಲ್ಲಿ ಅರ್ಜಿ ಹಾಕಿಸಿ ಜಾತಿ ದಾಖಲಾತಿ ಪಡೆಯಿರಿ. ಇಲ್ಲವಾದಲ್ಲಿ ಕಾಡುಗೊಲ್ಲರ ದಾಖಲೆ ಇಲ್ಲ ಎಂಬ ವರದಿ ಬಲವಾಗುತ್ತದೆ. ಎಸ್ಟಿಮೀಸಲಾತಿ ಸೇರ್ಪಡೆ ಹೋರಾಟಕ್ಕೆ ಕಾಡುಗೊಲ್ಲರು ಸಂಪೂರ್ಣ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ಕರಡಿಬುಳ್ಳಪ್ಪ ವೇದಿಕೆ ರಾಜ್ಯಾಧ್ಯಕ್ಷ ನಂದೀಶ್ ಮಾತನಾಡಿ ಕಾಡುಗೊಲ್ಲ ಬುಡಕಟ್ಟು ಸಮಾಜ ಸರ್ವತೋಭಿಮುಖವಾಗಿ ಅಭಿವೃದ್ಧಿಯಾಗಬೇಕಾದರೆ. ಮೊದಲು ಸಂಘಟಿತರಾಗಿ ಶಿಕ್ಷಣವಂತರಾಗಬೇಕು. ಕಾಡುಗೊಲ್ಲರ ಮೀಸಲಾತಿ ಬೇಡಿಕೆಯನ್ನ ಈಡೇರಿಸದಂತೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಕಾರ ಎತ್ತಿರುವುದು ಬೇಸರದ ಸಂಗಾತಿ. ಈ ಸಂಬಂಧ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದ ಎ.ನಾರಾಯಣಸ್ವಾಮಿ ಹೆಚ್ಚು ಗಮನಹರಿಸಿ ಸರ್ಕಾರಕ್ಕೆ ಎಚ್ಚರಿಸುವ ಮೂಲಕ ಕಾಡುಗೊಲ್ಲರಿಗೆ ನ್ಯಾಯ ಒದಗಿಸಬೇಕಿದೆ ಎಂದರು.
ತಾಲೂಕು ಕಾಡುಗೊಲ್ಲ ಘಟಕದ ಅಧ್ಯಕ್ಷ ಬೋರಣ್ಣ ಮಾತನಾಡಿ ಕಾಡುಗೊಲ್ಲರಿಗೆ ನ್ಯಾಯ ಸಿಗಬೇಕು. ಸಮಾಜ ಪ್ರಗತಿ ಕಾಣಬೇಕಿದ್ದು, ಮೂಲಭೂತ ಸೌಕರ್ಯ ಪಡೆಯಲು ಜಾಗೃತಗೊಳ್ಳಿ ಎಂದರು.
ಎಂಜಿನಿಯರ್ ಸಿದ್ದಪ್ಪ ಮಾತನಾಡಿ, ನ್ಯಾಯ ಕಲ್ಪಿಸುವ ಹಿನ್ನಲೆಯಲ್ಲಿ ಕಾಡುಗೊಲ್ಲರನ್ನ ಎಚ್ಚರಿಸುವಂತ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಕಾಡುಗೊಲ್ಲ ಬುಡಕಟ್ಟು ಸಮಾಜದಲ್ಲಿ ವಿಭಿನ್ನವಾದ ಸಾಂಪ್ರಾದಾಯಿಕ ಆಚರಣೆ,ಸಂಸ್ಕೃತಿ ಪ್ರತಿಬಿಂಬಿಸುವ ಪದ್ದತಿಗಳಾದ ಹರಣೆ ಶಾಸ್ತ್ರ,ಹಸೆ ಹಚ್ಚುವುದು, ಮಜ್ಜಿಗೆ ಕಡಿಯುವುದು, ಒಳ್ಳಕ್ಕಿ ಬೀಸುವ ಮೂಲಕ ಸಾಂಪ್ರದಾಯಿಕ ಆಚರಣೆಗಳ ಮಹತ್ವ ಕುರಿತು ಸ್ಥಳೀಯ ಮಹಿಳೆಯರು ಪ್ರದರ್ಶಿಸಿದ್ದು ಹೆಚ್ಚು ಗಮನಸೆಳೆಯಿತು. ಗ್ರಾಮದಲ್ಲಿ ಕುಲದೇವರ ಮೂರ್ತಿಯೊಂದಿಗೆ ಕುಣಿದು ಸಂಭ್ರಮಿಸುವ ಮೂಲಕ ಕಾಡುಗೊಲ್ಲರ ಹೋರಾಟಕ್ಕೆ ಜಯಸಿಗಲಿ ಎಂದು ಘೋಷಣೆ ಮೊಳಗಿಸಿದರು.
ಈ ವೇಳೆ ಹಿರಿಯ ಮುಖಂಡರಾದ ಮುಗದಾಳಬೆಟ್ಟದ ನರಸಿಂಹಪ್ಪ,ಮಾಜಿ ಜಿಪಂ ಸದಸ್ಯ ಪಾಪಣ್ಣ,ಎಚ್‌ಎಂಟಿ ರಮೇಶ್,ಕೆ.ಎ.ಎಸ್.ಶಿವಕುಮಾರ್, ಪ್ರಾಚಾರ್ಯ ಕೆ.ಎಸ್.ಈರಣ್ಣ ,ಮಧುಗಿರಿ ಉಪನೋಂಧಣಾಧಿಕಾರಿ ಇಲಾಖೆಯ ವೀರ್ಲಗೊಂಧಿ ನಾಗರಾಜು,ಕಾಡುಗೊಲ್ಲ ಕಸಬಾ ಹೋಬಳಿ ಅಧ್ಯಕ್ಷ ನಾಗೇಂದ್ರಪ್ಪ, ನಿಡಗಲ್ ಅಧ್ಯಕ್ಷ ನಾಗೇಂದ್ರ, ಭದ್ರೇಗೌಡರು,ಉಪನ್ಯಾಸಕರಾದ ಬೊಮ್ಮಣ್ಣ, ಓಬಳಾಪುರ ಆರ್.ದೊಡ್ಡಯ್ಯ, ಶಿಕ್ಷಕ ತಮ್ಮಣ್ಣ, ಮುಖಂಡರಾದ ಬೋರಣ್ಣ, ಕಾರನಾಗನಹಟ್ಟಿವೀರೇಶ್, ಭೂಮಾಪನ ಇಲಾಖೆಯ ಶಿವಣ್ಣ, ಕೆಂಚಮ್ಮನಹಳ್ಳಿ ಗೋಪಾಲ್, ಕೃಷ್ಣ ಮೂರ್ತಿ, ಶಿವಕುಮಾರ್, ತೇಜುಯಾದವ್ ಮತ್ತಿತರರು ಇದ್ದರು.