ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ: ಬಸ್‌ ಸಂಚಾರ ಬಂದ್‌, ಮಂಡ್ಯದಲ್ಲಿ ಆಟೋಗಳಿಗೆ ಡಿಮ್ಯಾಂಡ್‌...!

By Kannadaprabha NewsFirst Published Mar 13, 2023, 2:00 AM IST
Highlights

ಮಂಡ್ಯ ನಗರದಲ್ಲಿ ನಿಗದಿಯಾಗಿದ್ದ ಮದುವೆಗಳಿಗೆ ಜನರಿಲ್ಲದೆ ಪೇಚಾಟ, ಹಬ್ಬ, ಬೀಗರ ಔತಣ, ಮದುವೆಗಳಿಗೆ ತೆರಳುವವರ ಪರದಾಟ. 

ಮಂಡ್ಯ(ಮಾ.13): ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್‌ ಶೋ ಹಿನ್ನೆಲೆಯಲ್ಲಿ ನಗರದಿಂದ ಬಸ್‌ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದರಿಂದ ಹೊರಗಿನಿಂದ ಬಂದವರು ದೂರದ ಊರುಗಳಿಗೆ ತೆರಳುವುದಕ್ಕೆ ಪರದಾಡಿದರು.
ಮದುವೆ, ಬೀಗರ ಔತಣ, ಗೃಹಪ್ರವೇಶ, ಹಬ್ಬ ಸೇರಿದಂತೆ ಇನ್ನಿತರೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳಲು ರೈಲುಗಳಲ್ಲಿ ನೂರಾರು ಜನರು ಮಂಡ್ಯಕ್ಕೆ ಆಗಮಿಸಿದರು. ಅವರೆಲ್ಲರೂ ಬಸ್‌ಗಳಿಲ್ಲದಿರುವುದನ್ನು ಕಂಡು ಪೇಚಿಗೆ ಸಿಲುಕಿದರು. ಬನ್ನೂರು, ಚಾಮರಾಜನಗರ, ನಂಜನಗೂಡು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಲು ಸಾಧ್ಯವಾಗದೆ ಸಂಬಂಧಿಕರಿಗೆ, ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸುತ್ತಿದ್ದರು.

ಬಸ್‌ಗಳಿಲ್ಲದ ಕಾರಣ ಆಟೋದವರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಬನ್ನೂರು, ಕಿರುಗಾವಲು, ಕೊತ್ತತ್ತಿ, ಕೊಡಿಯಾಲ, ಅರಕೆರೆ ಸೇರಿದಂತೆ ಇತರೆ ಕಡೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಸಿದ್ಧರಾಗಿ ನಿಂತಿದ್ದರು. ಸಾಮಾನ್ಯ ದಿನಗಳಲ್ಲಿ ಪಡೆಯುತ್ತಿದ್ದ ಹಣಕ್ಕಿಂತ ದುಪ್ಪಟ್ಟು ಹಣ ಪಡೆದು ಅವರನ್ನು ಕರೆಯುತ್ತಿದ್ದರು.

Latest Videos

ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದ ದಿನವೇ ಅಪಘಾತ, ಮೂವರಿಗೆ ಗಾಯ!

ಮದುವೆ ನಿಗದಿಪಡಿಸಿದ್ದವರ ಸಂಕಟ:

ಮೋದಿಯವರ ನಗರ ಭೇಟಿ ಒಂದು ತಿಂಗಳ ಹಿಂದೆಯೇ ನಿಗದಿಯಾಗಿದ್ದರೂ ಅದಕ್ಕಿಂತಲೂ ಮುಂಚಿತವಾಗಿ ಮದುವೆಗೆ ಸಾರ್ವಜನಿಕರು ಕಲ್ಯಾಣ ಮಂಟಪಗಳನ್ನು ಬುಕ್‌ ಮಾಡಿದ್ದರು. ಆ ಸಮಯದಲ್ಲಿ ಅವರಿಗೆ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಬಗ್ಗೆ ಅಥವಾ ಬಸ್‌ಗಳ ಸಂಚಾರ ನಿಷೇಧವಾಗುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದರಿಂದ ಮದುವೆಗಾಗಿ ಕಲ್ಯಾಣ ಮಂಟಪಗಳನ್ನು ಬುಕ್‌ ಮಾಡಿದ್ದವರು ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಜನರಿಲ್ಲದೆ ಭಣ ಭಣ:

ಅದರಂತೆ ಮಂಡ್ಯದ ಕನಕಭವನ ಸೇರಿದಂತೆ ಕೆಲವು ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ನಡೆದಿದ್ದವು. ಭದ್ರತೆಯ ಕಾರಣ ಕಳೆದ ಮೂರು-ನಾಲ್ಕು ದಿನಗಳಿಂದ ಸಂಚಾರ ವ್ಯವಸ್ಥೆಯಲ್ಲಿ ಪೊಲೀಸ್‌ ಇಲಾಖೆ ಹಲವಾರು ಬದಲಾವಣೆಗಳನ್ನು ತಂದಿದ್ದರಿಂದ ಜನರು ಮದುವೆ ಸೇರಿ ಇನ್ನಿತರೆ ಶುಭ ಕಾರ್ಯವನ್ನು ಮುಂದಕ್ಕೂ ಹಾಕಲಾಗದೆ, ರದ್ದುಪಡಿಸಲೂ ಆಗದೆ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದರು. ಈ ಮದುವೆ ಸಮಾರಂಭಗಳಿಗೆ ಹೊರಗಿನಿಂದ ಜನರು ಬರುವುದಕ್ಕೆ ಸಾಧ್ಯವಾಗದೆ ಕಲ್ಯಾಣ ಮಂಟಪಗಳು ಜನರಿಲ್ಲದೆ ಭಣಗುಡುತ್ತಿದ್ದವು. ಕೆಲವರು ಈ ಮುನ್ನ ನಿಗದಿಪಡಿಸಿದ್ದ ಬೀಗರ ಔತಣ ಕೂಟಗಳನ್ನು ಮುಂದೂಡಿದ್ದು ಬೇರೆ ದಿನಾಂಕಗಳನ್ನು ಗೊತ್ತು ಪಡಿಸಿಕೊಂಡಿದ್ದಾರೆ.

ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯವರೆಗೂ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆನಂತರ ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರಿಂದ ಯಥಾಸ್ಥಿತಿ ಮರುಕಳಿಸಿತು.

click me!