ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಕೋರಿ ತಾಲೂಕು ರೈತಸಂಘ, ಹಸಿರು ಸೇನೆ ಹಾಗೂ ಇತರೆ ಸಂಘಟನೆಗಳ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಬಂದ್ ಮಾಡಲಾಗಿತ್ತು.
ಚಿಕ್ಕನಾಯಕನಹಳ್ಳಿ : ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಕೋರಿ ತಾಲೂಕು ರೈತಸಂಘ, ಹಸಿರು ಸೇನೆ ಹಾಗೂ ಇತರೆ ಸಂಘಟನೆಗಳ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಬಂದ್ ಮಾಡಲಾಗಿತ್ತು.
ಪಟ್ಟಣದ ನೆಹರು ಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ಮೂಲಕ ಸಂಘದ ಪದಾಧಿಕಾರಿಗಳು ಆಗಮಿಸಿದರು. ರೈತಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, .18,000 ಕ್ಕೆ ಮಾರಾಟವಾಗುತ್ತಿದ್ದ ಕೊಬ್ಬರಿ ಕಳೆದ 8 ತಿಂಗಳುಗಳಿಂದ ಇಳಿಮುಖವಾಗಿ 7,500 ರು. ಗಳಿಗೆ ಕುಸಿದಿದೆ. ಕೇಂದ್ರ ಸರ್ಕಾರದ ಆದೇಶದಂತೆ ಕಳೆದ 2 ತಿಂಗಳುಗಳಿಂದ ಸುಮಾರು 4 ಸಾವಿರ ಕಡಿಮೆ ದರದಲ್ಲಿ ಕೊಬ್ಬರಿ ಖರೀದಿಯಾಗುತ್ತಿದ್ದು, ಕಳೆದೆರಡು ತಿಂಗಳಿಂದ ನಫೆಡ್‌ನಿಂದ ಕೊಬ್ಬರಿ ಖರೀದಿಸುತ್ತಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ 11,750 ರು. ನ್ಯಾಯ ಸಮ್ಮತ ಬೆಲೆಯಲ್ಲ. ರಾಜ್ಯದ ಹಿಂದಿನ ಕೃಷಿ ಬೆಲೆ ಆಯೋಗ ಕ್ವಿಂಟಲ್ ಕೊಬ್ಬರಿಗೆ 18,000 ರು.ರಂತೆ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ನುಸಿ ಪೀಡೆ ರೋಗ, ಕಾಂಡಕೊರಕ, ಅತಿವೃಷ್ಟಿ, ಅನಾವೃಷ್ಟಿಯಿಂದ ಕೊಬ್ಬರಿ ಇಳುವರಿ ಕುಂಠಿತವಾಗಿದ್ದು, ಇದರಿಂದ ರೈತರು ಅಪಾರ ನಷ್ಟಅನುಭವಿಸುತ್ತಿದ್ದು, ತೆಂಗು ಬೆಳೆಗಾರರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದ್ದು, ಸರ್ಕಾರ ಈ ಕೂಡಲೇ ಬೆಂಬಲ ಬೆಲೆಯನ್ನು 25,000 ರು. ಗಳಿಗೆ ಹೆಚ್ಚಿಸಬೇಕು. ಶಾಸಕರು, ಲೋಕಸಭಾ ಸದಸ್ಯರು ಈ ಬಗ್ಗೆ ಪ್ರಧಾನಮಂತ್ರಿಗಳನ್ನು ಸಂಪರ್ಕಿಸಿ ರೈತರ ಉಳಿವಿಗಾಗಿ ಅಗತ್ಯ ಮನವಿ ಸಲ್ಲಿಸುವುದು ತಪ್ಪಿದಲ್ಲಿ ಆ.15ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಠಾಧೀಶರು, ಪ್ರಗತಿಪರ ಸಂಘಟನೆಗಳು, ಮುಖಂಡರಾದ ಕೆಂಕೆರೆ ಸತೀಶ್, ತಾಲೂಕು ಅಧ್ಯಕ್ಷರಾದ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.