ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ಘೋಷಿಸಬೇಕು : ಆಗ್ರಹ

By Kannadaprabha News  |  First Published Oct 1, 2023, 11:20 AM IST

ಕಲತ್ಪರು ನಾಡಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿಗೆ ಕ್ವಿಂಟಾಲ್‌ಗೆ 20 ಸಾವಿರ ರು. ಬೆಂಬಲ ಬೆಲೆ ಘೋಷಿಸಬೇಕು ಹಾಗೂ ರಾಜ್ಯ ಸರಕಾರ 5 ಸಾವಿರ ಪ್ರೋತ್ಸಾಹ ಧನ ವಿತರಿಸಬೇಕೆಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರು ನಗರಕ್ಕೆ ಆಗಮಿಸಿದೆ. ರೈತ ಸಂಘಟನೆಯ ಕಾರ್ಯಕರ್ತರು ಪಾದಯಾತ್ರೆಗೆ ಅದ್ಧೂರಿಯ ಸ್ವಾಗತ ಕೋರಿ, ಬೀಳ್ಕೊಟ್ಟರು.


 ತುಮಕೂರು :  ಕಲತ್ಪರು ನಾಡಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿಗೆ ಕ್ವಿಂಟಾಲ್‌ಗೆ 20 ಸಾವಿರ ರು. ಬೆಂಬಲ ಬೆಲೆ ಘೋಷಿಸಬೇಕು ಹಾಗೂ ರಾಜ್ಯ ಸರಕಾರ 5 ಸಾವಿರ ಪ್ರೋತ್ಸಾಹ ಧನ ವಿತರಿಸಬೇಕೆಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರು ನಗರಕ್ಕೆ ಆಗಮಿಸಿದೆ. ರೈತ ಸಂಘಟನೆಯ ಕಾರ್ಯಕರ್ತರು ಪಾದಯಾತ್ರೆಗೆ ಅದ್ಧೂರಿಯ ಸ್ವಾಗತ ಕೋರಿ, ಬೀಳ್ಕೊಟ್ಟರು.

ಹೆಗ್ಗರೆಯ ಕಲ್ಯಾಣಮಂಟಪವೊಂದರಲ್ಲಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳು, ಪಾದಯಾತ್ರೆ ಆರಂಭಿಸಿ, ಮಧ್ಯಾಹ್ನ 12:30ಕ್ಕೆ ತುಮಕೂರು ನಗರ ತಲುಪಿದ್ದು, ನಗರದ ಟೌನ್‌ಹಾಲ್ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸರಕಾರದ ಕ್ರಮವನ್ನು ಖಂಡಿಸಿದರು,

Latest Videos

undefined

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕೇಂದ್ರ ಸರಕಾರದ ನೀತಿಯಿಂದಾಗಿ ಕ್ವಿಂಟಾಲ್ ಕೊಬ್ಬರಿ ಬೆಲೆ 7500-8 ಸಾವಿರಕ್ಕೆ ಕುಸಿದಿದೆ. ಸರಕಾರವೇ ಘೋಷಿಸಿದ ಬೆಂಬಲ ಬೆಲೆ 11750 ರು. ಕಡಿಮೆ ಇದ್ದರೂ ರೈತರ ನೆರವಿಗೆ ಸರಕಾರ ಬರುತ್ತಿಲ್ಲ. ಚುನಾವಣಾ ಪೂರ್ವದಲ್ಲಿ ಹೋರಾಟಗಾರರಿಗೆ ಕ್ವಿಂಟಾಲ್ ಕೊಬ್ಬರಿಗೆ 15000 ರು. ನೀಡುವ ಭರವಸೆ ನೀಡಿದ್ದ ಇಂದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕ್ವಿಂಟಾಲ್ ಕೊಬ್ಬರಿಗೆ 1250 ರು. ಪ್ರೋತ್ಸಾಹ ಧನ ಘೋಷಿಸಿ, ಕೈತೊಳೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ರೈತವಿರೋಧಿ ನೀತಿಗಳನ್ನು ಖಂಡಿಸಿ, ಕಳೆದ ಸೆಪ್ಟಂಬರ್ ೨೬ರಂದು ಅರಸೀಕೆರೆಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದುವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಪಾದಯಾತ್ರೆಗಳನ್ನು ಸಂಪರ್ಕಿಸಿಲ್ಲ. ಸರಕಾರದ ಈ ನಿರ್ಲಕ್ಷ ಭಾವನೆಯನ್ನು ಖಂಡಿಸಿ, ಇಂದು ಹೆದ್ದಾರಿ ತಡೆದು, ಹೆದ್ದಾರಿಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ. ಅಕ್ಟೋಬರ್ 4 ರಂದು ಬೆಂಗಳೂರು ತಲುಪಲಿರುವ ಕೊಬ್ಬರಿ ರೈತರ ಪಾದಯಾತ್ರೆ, ವಿಧಾನಸೌಧ ಮುತ್ತಿಗೆ ಹಾಕಲಿದೆ ಎಂದರು.

ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಕೊಬ್ಬರಿ ಬೆಳೆಯುವ ಪ್ರದೇಶಗಳಲ್ಲಿ ತುಮಕೂರು ಅತ್ಯಂತ ಪ್ರಮುಖವಾದುದ್ದು, 2.50 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕೊಬ್ಬರಿ ಬೆಳೆಯುತ್ತಾರೆ. ತೋಟಗಾರಿಕಾ ಇಲಾಖೆಯೇ ನೀಡಿದ ಮಾಹಿತಿಯಂತೆ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು 16760 ರು. ಖರ್ಚಾಗುತ್ತದೆ. ಆದರೆ, ಸರಕಾರ 11,750 ರ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಕೇವಲ 7500- 8000 ಸಾವಿರಕ್ಕೆ ಮಾತ್ರ ಕೊಂಡುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 11 ಜನ ಶಾಸಕರು, ಮೂವರು ಸಂಸದರಿದ್ದರೂ ಒಬ್ಬರೂ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಪಾದಯಾತ್ರೆ ಬೆಂಗಳೂರು ತಲುಪುವುದರ ಒಳಗೆ ಸರಕಾರದೊಂದಿಗೆ ಮಾತನಾಡಿ, ಕೊಬ್ಬರಿಗೆ ಕನಿಷ್ಠ 25000 ಸಾವಿರ ರು.ಬೆಂಬಲ ಬೆಲೆ ಘೋಷಿಸಬೇಕೆಂಬುದು ಆಗ್ರಹವಾಗಿದೆ ಎಂದರು.

ಪಾದಯಾತ್ರೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಉಪಾಧ್ಯಕ್ಷ ಬಸವನಹಳ್ಳಿ ಭೈರೇಗೌಡ, ತಿಪಟೂರಿನ ಶಾಂತಕುಮಾರ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧನಂಜಯ್ ಆರಾಧ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

click me!