ರಾಷ್ಟ್ರೀಯ ಪಂಚಾಯತ್ ಪುರಸ್ಕಾರವಾದ ದೀನ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ಪಡೆದುಕೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಎಲ್ಲರ ಗಮನ ಸೆಳೆದಿದೆ.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಡಿ.13): ಗ್ರಾಮ ಪಂಚಾಯಿತಿ ಅಂದರೆ ಅದು ಸ್ಥಳೀಯ ಸರ್ಕಾರ. ಅದರ ಮೂಲಕವೇ ಗ್ರಾಮಗಳ ಅಭಿವೃದ್ಧಿ ಕೆಲಸಗಳು ಆಗುವುದು. ಆದರೆ ಗ್ರಾಮಗಳ ಮಟ್ಟದಲ್ಲಿ ಬಡವರೇ ಇಲ್ಲದಂತೆ ಅಭಿವೃದ್ಧಿ ಮಾಡಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ.
ಹೌದು, ರಾಷ್ಟ್ರೀಯ ಪಂಚಾಯತ್ ಪುರಸ್ಕಾರವಾದ ದೀನ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ಪಡೆದುಕೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಎಲ್ಲರ ಗಮನ ಸೆಳೆದಿದೆ. ಪಂಚಾಯಿತಿಯನ್ನು ಬಡತನ ಮುಕ್ತ ಹಾಗೂ ಪರಿಸರ ಪೂರಕ ಅಭಿವೃದ್ಧಿ ಮಾಡಿದ್ದಕ್ಕಾಗಿ 22 -2023 ನೇ ಸಾಲಿನ ಪ್ರಶಸ್ತಿಯನ್ನು ಪಂಚಾಯಿತಿ ತನ್ನದಾಗಿಸಿಕೊಂಡಿದೆ. ಆ ಮೂಲಕ ಬರೋಬ್ಬರಿ ಒಂದು ಕೋಟಿ ನಗದು ಬಹುಮಾನವನ್ನು ಪಂಚಾಯಿತಿ ಗಳಿಸಿದೆ. ಈ ಬಹುಮಾನ ಗಳಿಸುವುದಕ್ಕೆ ಪಂಚಾಯಿತಿ ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಬಂದಿದೆ.
ವೀರ ಸೇನಾನಿಗಳಿಗೆ ಅಪಮಾನ ಖಂಡಿಸಿ ಕೊಡಗು ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಸಾವರ್ಜನಿಕರ ಪರದಾಟ
undefined
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಲೂರು, ಕಡಮಕಲ್ಲು, ಮುಟ್ಲು, ಒಣಚಲು, 2 ಮೊಣ್ಣಂಗೇರಿ, ಹಮ್ಮಿಯಾಲ ಮತ್ತು ಗಾಳಿಬೀಡು ಗ್ರಾಮಗಳು ಬರುತ್ತವೆ. ಬರೋಬ್ಬರಿ 105 ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಅತೀ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಈ ವ್ಯಾಪ್ತಿಯಲ್ಲಿ ಒಂದು ಸಾವಿರ ಕುಟುಂಬಗಳ 3802 ಜನ ಸಂಖ್ಯೆ ಇದೆ. ಆದರೆ ಈ ಕುಟುಂಬಗಳಿಗೆ ಯಾರಿಗೂ ಮನೆಗಳೇ ಇಲ್ಲ ಎನ್ನುವ ಸ್ಥಿತಿ ಇಲ್ಲ. ಇಷ್ಟು ಕುಟುಂಬಗಳಿಗೂ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡುತ್ತದೆ ಆದರೂ ಯಾವ ಕುಟುಂಬಗಳಿಗೂ ಕುಡಿಯುವ ನೀರಿನ ಶುಲ್ಕ ಹಾಕುವುದಿಲ್ಲ. ಅಂದರೆ ಎಲ್ಲಾ ಕುಟುಂಬಗಳಿಗೂ ಬೆಟ್ಟಗುಡ್ಡಗಳಿಂದ ಹರಿಯುವ ಸ್ವಾಭಾವಿಕ ನೀರನ್ನು ಪೈಪುಗಳ ಮೂಲಕ ಮನೆಮನೆಗೆ ಪೂರೈಕೆ ಮಾಡಲಾಗುತ್ತಿದೆ. ಅವುಗಳಲ್ಲಿ 45 ಕುಟುಂಬಗಳಿಗೆ ಮಾತ್ರವೇ ಕೊಳವೆ ಬಾವಿಕೊರೆದು ಅದರಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ಈ ಕುಟುಂಬಗಳಿಗೆ ಮಾತ್ರವೇ ನೀರಿನ ಕರ ವಿಧಿಸಲಾಗುತ್ತದೆ. ಜೊತೆಗೆ ಗ್ರಾಮಗಳಿಗೆ ಬೀದಿ ದೀಪಕ್ಕಾಗಿ ನವೀನ ತಂತ್ರಜ್ಞಾನದ ಸೋಲಾರ್ ಲೈಟುಗಳನ್ನು ಅಳವಡಿಸಲಾಗಿದ್ದು, ಪಂಚಾಯಿತಿಗೆ ಇದರಿಂದಲೇ ವಾರ್ಷಿಕ ಲಕ್ಷಾಂತರ ರೂಪಾಯಿ ಹಣ ಉಳಿತಾಯವಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವೈಯಕ್ತಿಕವಾಗಿ ರೈತರು ಕಾಮಗಾರಿಗಳನ್ನು ಮಾಡಿಕೊಳ್ಳಲು ಅನುದಾನ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಹೆಸರಿನ 20 ಸ್ವಸಹಾಯ ಸಂಘಗಳನ್ನು ರಚನೆ ಮಾಡಲಾಗಿದ್ದು ಪ್ರತೀ ಸಂಘಕ್ಕೆ ವಾರ್ಷಿಕ ತಲಾ 1 ಲಕ್ಷ ಸಾಲ ನೀಡಿ ಅವರ ಆರ್ಥಿಕ ಚೈತನ್ಯಕ್ಕೆ ಪಂಚಾಯಿತಿ ಬೆನ್ನೆಲುಬಾಗಿ ನಿಂತಿದೆ.
ಕೊಡಗು: ಗುಂಡು ಹಾರಿಸಿ ನಿರ್ವಾಹಕನಿಗೆ ಕೊಲೆ ಬೆದರಿಕೆ, ಕೆಎಸ್ಆರ್‌ಟಿಸಿ ಚಾಲಕ ಅರೆಸ್ಟ್
ಯಾವುದೇ ಒಂದು ಮಗು ಶಾಲೆ ಅಥವಾ ಅಂಗನವಾಡಿಯಿಂದ ಹೊರಗುಳಿದಿಲ್ಲ. ಯಾವೊಂದು ಮಗುವೂ ಅನೀಮಿಯಾದಿಂದ ಬಳಲುತ್ತಿಲ್ಲ. ಇವೆಲ್ಲವೂ ಪಂಚಾಯಿತಿ ರಾಷ್ಟ್ರಮಟ್ಟದಲ್ಲಿ ಪಂಚಾಯತ್ ರಾಜ್ ಪುರಸ್ಕಾರವನ್ನು ತನ್ನ ಮುಡಿಗೇರಿಸಿಕೊಳ್ಳಲು ಕಾರಣವಾಗಿವೆ. ಗ್ರಾಮದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಚಪ್ಪಂಡಕೆರೆಯನ್ನು 30 ಲಕ್ಷ ರೂಪಾಯಿ ವೆಚ್ಚದಲ್ಲಿ ದ್ವೀಪದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿದ್ದು, ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗಿದೆ.
ದೇವಸ್ತೂರು ಅಂಗನವಾಡಿ, ಗಾಳಿಬೀಡು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನರೇಗಾ ಅಡಿಯಲ್ಲಿ ಅತ್ಯುತ್ತಮವಾದ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಹೀಗೆ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಿರುವ ಪಂಚಾಯಿತಿ ದೀನ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಮೊನ್ನೆಯಷ್ಟೇ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಿಡಿಓ ಶಶಿಕಿರಣ, ಅಧ್ಯಕ್ಷೆ ಉಷಾ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಬಹುಮಾನದ ಒಂದು ಕೋಟಿಯನ್ನು ಬಳಸಿಕೊಂಡು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ ಎನ್ನುತ್ತಾರೆ ಅಧ್ಯಕ್ಷೆ ಉಷಾ.