ಮಾಜಿ ಸಚಿವ ರೇಣುಕಾಚಾರ್ಯ, ಪುತ್ರನಿಗೆ ಕೊಲೆ ಬೆದರಿಕೆ..!

By Kannadaprabha News  |  First Published Jun 4, 2024, 10:50 AM IST

ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮೊಬೈಲ್‌ಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ಅನಾಮಿಕ ವ್ಯಕ್ತಿಗಳು ಸೋಮವಾರ ರಾತ್ರಿ ಒಳಗಾಗಿ ನಿನಗೆ ಹಾಗೂ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರೇಣುಕಾಚಾರ್ಯ ಕುಟುಂಬ ಆತಂಕಕ್ಕೆ ಒಳಗಾಗಿದೆ.


ದಾವಣಗೆರೆ(ಜೂ.04): ಜಿಲ್ಲೆಯ ಹೊನ್ನಾಳಿ ಕ್ಷೇತ್ರ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಪುತ್ರನಿಗೆ ಎರಡು ಪ್ರತ್ಯೇಕ ನಂಬರ್‌ಗಳಿಂದ ಪ್ರಾಣ ಬೆದರಿಕೆ ಕರೆಗಳು ಬಂದ ಘಟನೆ ಸೋಮವಾರ ವರದಿಯಾಗಿದೆ.
ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮೊಬೈಲ್‌ಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ಅನಾಮಿಕ ವ್ಯಕ್ತಿಗಳು ಸೋಮವಾರ ರಾತ್ರಿ ಒಳಗಾಗಿ ನಿನಗೆ ಹಾಗೂ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರೇಣುಕಾಚಾರ್ಯ ಕುಟುಂಬ ಆತಂಕಕ್ಕೆ ಒಳಗಾಗಿದೆ.

ತಮಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೇಣುಕಾಚಾರ್ಯ ಸೋಮವಾರ ಮಧ್ಯಾಹ್ನ ಬೆಂಬಲಿಗರೊಂದಿಗೆ ಹೊನ್ನಾಳಿ ಪೊಲೀಸ್ ಠಾಣೆಗೆ ತೆರಳಿ, ತಮಗೆ ಕರೆ ಬಂದ ಮೊಬೈಲ್‌ ನಂಬರ್‌ಗಳ ಸಮೇತ ಸಂಜೆ ದೂರು ದಾಖಲು ಮಾಡಿದ್ದಾರೆ.

Tap to resize

Latest Videos

ಆಸ್ತಿ, ಕಾಮಗಾರಿ ಬಿಲ್ ವಿಳಂಬಕ್ಕೆ ನೊಂದು ಗುತ್ತಿಗೆದಾರ ಆತ್ಮಹತ್ಯೆ

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹೊನ್ನಾಳಿ, ನ್ಯಾಮತಿಯಲ್ಲಿ ತಾವು ವಿಧಾನ ಪರಿಷತ್ತು ಚುನಾವಣೆಯಲ್ಲಿ ಸೋಮವಾರ ಬೆಳಗ್ಗೆಯಿಂದ ತೊಡಗಿಕೊಂಡಿದ್ದೆ. ಮಧ್ಯಾಹ್ನ 12.52ಕ್ಕೆ ನ್ಯಾಮತಿಗೆ ಹೋಗಿದ್ದಾಗ ನನಗೆ ಅಂತಾರಾಷ್ಟ್ರೀಯ ಕರೆ ಬಂದಿತು. ಮಿಸ್ಡ್ ಕಾಲ್ ಆಗಿದ್ದರಿಂದ ನಾನು ಕರೆ ಸ್ವೀಕರಿಸಲಿಲ್ಲ. ಮತ್ತೆ 12.53ಕ್ಕೆ ಕರೆ ಬಂದಿತು. ಆಗ ಕನ್ನಡದಲ್ಲೇ ಮಾತನಾಡಿದ ಅಪರಿಚಿತ ವ್ಯಕ್ತಿಯು "ಇವತ್ತೇ ನಿನಗೆ ಕೊನೆಯ ದಿನ. ನಿನ್ನ ಮಗನಿಗೂ ಮುಗಿಸುತ್ತೇನೆ" ಎಂಬುದಾಗಿ ಬೆದರಿಕೆ ಹಾಕಿದ ಎಂದು ದೂರಿದರು. ಅನಂತರ "ಯಾರೋ ನೀನು..?" ಎಂಬುದಾಗಿ ನಾನು ಪ್ರಶ್ನಿಸಿದೆ. ತಕ್ಷಣ ಅಪರಿಚಿತ ವ್ಯಕ್ತಿಯು ಕರೆ ಕಟ್ ಮಾಡಿದ್ದಾನೆ ಎಂದರು.

2ನೇ ಬಾರಿ ಘಟನೆ:

ಎರಡೂ ಕರೆಗಳ ಪೈಕಿ ಒಂದು ಕರೆಯನ್ನು ಮಲೇಷ್ಯಾದಿಂದ ಮಾಡಿದ್ದು ಎಂಬ ಮಾಹಿತಿ ಇದೆ. ಇನ್ನೊಂದು ಕರೆ ಎಲ್ಲಿಂದ ಬಂದಿದ್ದೆಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನ್ಯಾಮತಿ, ಹೊನ್ನಾಳಿ ಸಿಪಿಐಗಳ ಗಮನಕ್ಕೆ ಈ ವಿಚಾರ ತಂದಿದ್ದೇನೆ. ಈಗ್ಗೆ 2 ವರ್ಷಗಳ ಹಿಂದೆಯೂ ಬೆಂಗಳೂರಿನಲ್ಲಿದ್ದಾಗ ಇದೇ ರೀತಿಯ ಕರೆ ಬಂದಿತ್ತು. ಆಗ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಈಗ ಮತ್ತೆ ನ್ಯಾಮತಿ, ಹೊನ್ನಾಳಿಯ ಠಾಣೆಗೆ ದೂರು ನೀಡಲಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.

ಹಿಂದಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತವೇ ಇವೆ. 15-20 ವರ್ಷದಿಂದಲೂ ನನಗೆ ಬೆದರಿಕೆ ಇದ್ದೇ ಇದೆ. ಹಿಂದೆಲ್ಲಾ ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ನೇರಾ ನೇರವಾಗಿ ಅಟ್ಯಾಕ್ ಮಾಡಿದರು. ಶಾಮಿಯಾನಕ್ಕೆ ಬೆಂಕಿ ಹಾಕಿದರು. ವಾಹನಕ್ಕೆ ಧಕ್ಕೆ ಮಾಡಿದರು. ರಾಜಕಾರಣದಲ್ಲಿರುವ ನಾನು ಇಂತಹದ್ದಕ್ಕೆಲ್ಲಾ ಹೆದರಲ್ಲ, ಜಗ್ಗಲ್ಲ, ಬಗ್ಗಲ್ಲ. ಹೊನ್ನಾಳಿ, ನ್ಯಾಮತಿ ತಾಲೂಕಿನ ಜನತೆ ನನ್ನ ರಕ್ಷಣೆ ಮಾಡಿದ್ದಾರೆ. ಮುಖಂಡರು. ಕಾರ್ಯಕರ್ತರು ರಾತ್ರೋರಾತ್ರಿ ಬಂದು ನನ್ನ ರಕ್ಷಣೆಗೆ ನಿಂತಿದ್ದಾರೆ ಎಂದು ವಿವರಿಸಿದರು.

ಮಲೇಷ್ಯಾದಿಂದ ಕರೆ ಬಂದಿದ್ದು ಎಂಬುದಾಗಿ ಪೊಲೀಸರು ಹೇಳುತ್ತಿದ್ದಾರೆ. ಪೊಲೀಸರು ರಕ್ಷಣೆ ನೀಡುತ್ತೇವೆಂದಿದ್ದಾರೆ. ವಿಧಾನ ಪರಿಷತ್ತು ಚುನಾವಣೆ ಹಿನ್ನೆಲೆ ಇಡೀ ದಿನ ನಾನು ನ್ಯಾಮತಿ, ಕೊಡತಾಳ್, ಕುಂಕುವ, ಆರುಂಡಿ ಗ್ರಾಮಕ್ಕೆಲ್ಲಾ ಹೋಗಿ, ಸಂಜೆ ಹೊನ್ನಾಳಿಗೆ ಬಂದೆ. ಈಗ ಸಂಜೆ 4 ಗಂಟೆ ನಂತರ ಹೊನ್ನಾಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ. ಯಾರೋ ಅಪರಿಚತರು ಎಲ್ಲೋ ತಲೆಮರೆಸಿಕೊಂಡು ಕುಳಿತು, ಬೆದರಿಕೆ ಕರೆ ಮಾಡಿದರೆ ಹೆದರುವ ವ್ಯಕ್ತಿಯೂ ನಾನಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ, ರೈತ ವಿರೋಧಿ ಸರ್ಕಾರ: ಮಾಜಿ ಸಚಿವ ರೇಣುಕಾಚಾರ್ಯ

ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಕರೆ ಮಾಡಿ, ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ದಾವಣಗೆರೆ ಇಂಟಲಿಜೆನ್ಸಿ ಪೊಲೀಸ್ ಅಧಿಕಾರಿಗಳು ನನಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ. ಸೋಮವಾರ ಸಂಜೆ ಠಾಣೆಗೆ ತೆರಳಿ, ದೂರು ಸಹ ನೀಡಿದ್ದೇವೆ. ನನಗೆ ಹಾಗೂ ನನ್ನ ಮಗನನ್ನು ಇವತ್ತು ರಾತ್ರಿಯೇ ಕೊಲೆ ಮಾಡುವುದಾಗಿ ಅಪರಿಚಿತರು ಬೆದರಿಕೆ ಹಾಕಿದ್ದಾರೆ. ಇಂತಹದಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗೊಲ್ಲ ನಾನು ಎಂದು ಅವರು ಹೇಳಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂತಾರಾಷ್ಟ್ರೀಯ ಕರೆಯ ಜಾಡು ಹಿಡಿದು, ತನಿಖೆ ಕೈಗೊಳ್ಳಲಿದ್ದಾರೆ. ಪದೇಪದೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಬೆದರಿಕೆ ಕರೆ ಬರುತ್ತಿರುವುದು ಸ್ವತಃ ರೇಣುಕಾಚಾರ್ಯ ಆಕ್ರೋಶಕ್ಕೂ ಕಾರಣವಾಗಿದೆ. ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ತಿಳಿಸಿದ್ದಾರೆ. 

click me!