ರಾಮನಗರ: ನೀರಿಗೆ ತತ್ವಾರ: ವನ್ಯಜೀವಿಗಳ ಜೀವಕ್ಕೆ ಸಂಚಕಾರ

By Kannadaprabha NewsFirst Published Apr 17, 2024, 2:30 PM IST
Highlights

ಸುಡು ಬಿಸಿಲಿನ ತಾಪಮಾನದಿಂದಾಗಿ ಅರಣ್ಯ ಪ್ರದೇಶಗಳಲ್ಲಿನ ಕೆರೆ ಕಟ್ಟೆ, ಹಳ್ಳ ಗುಂಡಿಗಳೆಲ್ಲ ಬತ್ತಿ ಹೋಗಿದ್ದು, ದಾಹ ತೀರಿಸಿಕೊಳ್ಳಲು ನೀರು ಮತ್ತು ಆಹಾರ ಸಿಗದ ಕಾರಣ ವನ್ಯಜೀವಿಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ಎಂ.ಅಫ್ರೋಜ್ ಖಾನ್

  ರಾಮನಗರ :  ಸುಡು ಬಿಸಿಲಿನ ತಾಪಮಾನದಿಂದಾಗಿ ಅರಣ್ಯ ಪ್ರದೇಶಗಳಲ್ಲಿನ ಕೆರೆ ಕಟ್ಟೆ, ಹಳ್ಳ ಗುಂಡಿಗಳೆಲ್ಲ ಬತ್ತಿ ಹೋಗಿದ್ದು, ದಾಹ ತೀರಿಸಿಕೊಳ್ಳಲು ನೀರು ಮತ್ತು ಆಹಾರ ಸಿಗದ ಕಾರಣ ವನ್ಯಜೀವಿಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ರಾಮನಗರ ಜಿಲ್ಲೆಯು ರಾಮನಗರ ಪ್ರಾದೇಶಿಕ ವಿಭಾಗ, ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಧಾಮ ವಿಭಾಗದೊಂದಿಗೆ ಅರಣ್ಯದ ಗಡಿ ಹಂಚಿಕೊಂಡಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಡು ಈಗ ಬಿಸಿಲಿನ ರಭಸಕ್ಕೆ ಸಂಪೂರ್ಣ ಒಣಗಿ ಹೋಗಿದ್ದು, ರಣ ರಣ ಎನ್ನುತ್ತಿದೆ. ಈ ಭಾಗದ ಗಳಲ್ಲಿ ವನ್ಯಜೀವಿಗಳಿಗೆ ಮೇವು ಸಿಗುತ್ತಿಲ್ಲ. ಕೆರೆ- ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಹೀಗಾಗಿಯೇ ಕಾಡಾನೆಗಳು ಮಾತ್ರವಲ್ಲ, ಎಲ್ಲ ವನ್ಯಜೀವಿಗಳು ಹಸಿವು ಮತ್ತು ದಾಹ ನೀಗಿಸಿಕೊಳ್ಳಲು ನಾಡಿನತ್ತ ಧಾವಿಸಿ ಬರುತ್ತಿವೆ. ಇದರಿಂದಾಗಿ ಕಾಡಂಚಿನ ಗ್ರಾಮಗಳ ಜನರು ಜೀವ ಭಯದಲ್ಲಿದ್ದಾರೆ.

ಜೀವಿಗಳ ಸ್ಥಿತಿ ಶೋಚನೀಯ:

ಅರಣ್ಯ ಪ್ರದೇಶ ಗುಡ್ಡಗಾಡುಗಳಲ್ಲಿ ಮಳೆ ಇಲ್ಲದೆ ನೀರು ಎಲ್ಲಿಯೂ ಸಂಗ್ರಹವಾಗುವುದಿಲ್ಲ. ಪ್ರಾಣಿ, ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುತ್ತಿವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ತೀವ್ರಗೊಳ್ಳುತ್ತಿದೆ. ಕೆರೆ- ಕಟ್ಟೆಗಳಲ್ಲಿ ನೀರು ನಿಲ್ಲುವಷ್ಟು ಮುಂಗಾರು-ಹಿಂಗಾರು ಮಳೆ ಬಂದಿಲ್ಲ.

ಇದರಿಂದ ಹಳ್ಳ- ಕೊಳ್ಳ, ಗುಂಡಿಗಳಲ್ಲಿ ಎಲ್ಲಿಯೂ ನೀರು ನಿಂತಿಲ್ಲ. ನೀರಿಲ್ಲದೆ ಪ್ರಾಣಿ, ಪಕ್ಷಿಗಳು ನೀರನ್ನು ಹುಡುಕಿಕೊಂಡು ನಗರ ಪ್ರದೇಶಗಳತ್ತ ಬರುತ್ತಿವೆ. ನಗರದಲ್ಲೂ ನೀರಿನ ಸಮಸ್ಯೆ ಇದ್ದು, ಇನ್ನು ಪ್ರಾಣಿ- ಪಕ್ಷಿಗಳ ಸ್ಥಿತಿಯೂ ಶೋಚನೀಯವಾಗಿದೆ.

ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಪರೂಪವಾದ ಪ್ರಾಣಿ- ಪಕ್ಷಿಗಳಿವೆ. ಪ್ರಾಣಿ- ಪಕ್ಷಿಗಳು ವಾಸಿಸುವ ಜಾಗ ಇಂದು ಬಯಲು ಪ್ರದೇಶವಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿ- ಪಕ್ಷಿಗಳ ವಾಸಸ್ಥಾನಕ್ಕೆ ಜಾಗವಿಲ್ಲದೆ ನಾಡಿನತ್ತ ಆಗಮಿಸುತ್ತಿವೆ. ಪ್ರಕೃತಿಯಲ್ಲಿದ್ದ ಅನೇಕ ಪಕ್ಷಿಗಳು, ಪ್ರಾಣಿ ಸಂಕುಲಗಳು ವಿನಾಶದ ಅಂಚಿನತ್ತ ಬಂದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಕಾಡಿನಲ್ಲಿರುವ ಕೆರೆ- ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ತುಂಬುತ್ತಿಲ್ಲ. ಶೇಖರಣೆಯಾಗುವ ಅಲ್ಪಸ್ವಲ್ಪ ನೀರು ಬಹಳ ಬೇಗನೇ ಖಾಲಿಯಾಗಿ ಕಾಡುಪ್ರಾಣಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದಿರುವ ಕಾರಣ ನೀರಿಲ್ಲದೆ ಪ್ರಾಣಿಗಳು ಮೃತಪಡುತ್ತಿವೆ.

ಜನರ ದಣಿವು ನಿವಾರಣೆಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗುತ್ತದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತದೆ. ನೀರು ಸಿಗದಿದ್ದರೆ ಟ್ಯಾಂಕರ್‌ ಮೂಲಕವಾದರೂ ಸರಬರಾಜು ಮಾಡಿ ಜನರ ದಾಹ ನೀಗಿಸಲಾಗುತ್ತದೆ. ಇಂಥಹ ಸಂದರ್ಭದಲ್ಲಿ ಸರಕಾರ ಬರಗಾಲದ ವಿಶೇಷ ಅನುದಾನ ಬಿಡುಗಡೆ ಮಾಡುತ್ತದೆ.

ಆದರೆ, ಕಾಡು ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಯಾವ ಯೋಜನೆಯನ್ನೂ ಕೈಗೆತ್ತಿಕೊಳ್ಳದಿರುವುದು ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ಮಾನವಿಯತೆಯನ್ನು ಪ್ರಶ್ನಿಸುತ್ತದೆ.

2 ಆನೆ, 1 ನವಿಲು ಸಾವು

ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಯಲವನಾಥ ಬಳಿ 35 ವರ್ಷದ ಮಖ್ನಾ ಆನೆ ಹಾಗೂ ಬೆಟ್ಟಹಳ್ಳಿ ಸಮೀಪದ ಗರಳಾಪುರದ ಬಳಿ 14 ವರ್ಷದ ಗಂಡಾನೆ ನೀರಿಲ್ಲದೆ, ನಿತ್ರಾಣಗೊಂಡು ಮೃತಪಟ್ಟಿವೆ. ಮಖ್ನಾ ಆನೆ ಅನಾರೋಗ್ಯದಿಂದ ನಿತ್ರಾಣಗೊಂಡಿದ್ದರೆ, ಗಂಡಾನೆ ನೀರಿನಾಂಶ ಇರುವ ಆಹಾರ ಕೊರತೆಯಿಂದ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇಷ್ಟೇ ಅಲ್ಲದೆ, ರಾಮನಗರ ತಾಲೂಕು ಬನ್ನಿಕುಪ್ಪೆ ಗ್ರಾಮದಲ್ಲಿ ನೀರಿಲ್ಲದೆ ನವಿಲುಗಳು ಸಾವನ್ನಪ್ಪಿವೆ.

ರೈತನ ಬೆಳೆಗೆ ಕಾಡಾನೆ ದಾಳಿ

ಮೇವು, ನೀರನ್ನು ಹುಡುಕಿಕೊಂಡು ಬರುವ ಆನೆಗಳ ಹಿಂಡು ಬರಗಾಲದಲ್ಲಿ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಮಾಡುವುದರೊಂದಿಗೆ ಪಂಪ್‌ಸೆಟ್‌ಗಳನ್ನು ನಾಶಪಡಿಸುತ್ತಿವೆ. ಇದರಿಂದ ಕಾಡಂಚಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಸರ್ಕಾರ ನೀಡುವ ಮೂರು ಕಾಸು ಪರಿಹಾರಕ್ಕೆ ಕಾದುಕುಳಿತುಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಡು ಪ್ರಾಣಿಗಳ ದಾಹ ನೀಗಿಸಲು ಕಾಡಿನಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ. ಆನೆಗಳು ಜಮೀನುಗಳಿಗೆ ದಾಳಿ ನಡೆಸುವುದನ್ನು ತಡೆಯಲು ಕ್ರಮ ವಹಿಸಲಾಗಿದೆ. ಅಗತ್ಯ ಇರುವೆಡೆ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಟ್ಯಾಂಕರ್‌ಗಳ ಮೂಲಕ ಕಾಡಿನಲ್ಲಿರುವ ಚಿಕ್ಕಚಿಕ್ಕ ಹಳ್ಳಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಸಾರ್ವಜನಿಕರ ಆಕ್ರೋಶ

ಬೇಸಿಗೆ ಪ್ರಾರಂಭವಾದಾಗಿನಿಂದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆಗೆ ಸಾಕಷ್ಟುಪ್ರಮಾಣದ ಅರಣ್ಯ ನಾಶವಾಗಿದೆ. ಆಗಾಗ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಭಯಭೀತಗೊಳ್ಳುವ ಕಾಡು ಪ್ರಾಣಿಗಳು ನಾಡಿಗೆ ಬಂದು ಸಾವನ್ನಪ್ಪುತ್ತಿರುವುದರಿಂದ ಭಯಾನಕ ವಾತಾವರಣ ನಿರ್ಮಾಣವಾಗಿದೆ. ಕೆರೆ- ಕಟ್ಟೆಗಳೆಲ್ಲ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಎದುರಾಗುತ್ತಿರುವ ವಿಷಯ ಮನಗಂಡರೂ ಕೂಡ ವನ್ಯ ಜೀವಿಗಳ ರಕ್ಷಣೆ ದೃಷ್ಟಿಯಿಂದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆಗಾಗಿ ಬೋರವೆಲ್‌ ಅಥವಾ ಸಮರ್ಪಕ ಗುಂಡಿಗಳನ್ನು ತೆಗೆಸಿ ನೀರು ತುಂಬಿಸುವ ಕೆಲಸವಾಗಲಿ ಅರಣ್ಯ ಇಲಾಖೆಯಿಂದ ನಡೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

click me!