ವಿಜಯಪುರ ಕೊರೋನಾ ಮುಕ್ತ ಎರಡನೇ ಜಿಲ್ಲೆಯತ್ತ ದಾಪುಗಾಲು| ಚಪ್ಪರಬಂದ, ಬಾರಾಕಮಾನ ಬಡಾವಣೆಗಳು ಹಾಗೂ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮ ಕಂಟೈನ್ಮೆಂಟ್ ಪ್ರದೇಶ| ಈ ಪ್ರದೇಶದಲ್ಲಿ ಕೊರೋನಾ ಸೋಂಕು ಹರಡಿಲ್ಲ| ಕಂಟೈನ್ಮೆಂಟ್ ಪ್ರದೇಶದಲ್ಲಿನ ಜನರಿಂದ ಇತರರಿಗೆ ಕೊರೋನಾ ಹರಡದಂತೆ ಕಟ್ಟುನಿಟ್ಟಿನ ಕ್ರಮ|
ರುದ್ರಪ್ಪ ಆಸಂಗಿ
ವಿಜಯಪುರ(ಮೇ.13): ಗುಮ್ಮಟನಗರಿ ವಿಜಯಪುರವೂ ಕೊರೋನಾ ಮುಕ್ತವಾಗುವುದೇ? ಎಂದು ವಿಜಯಪುರದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ನಗರದ ಚಪ್ಪರಬಂದ, ಬಾರಾಕಮಾನ ಬಡಾವಣೆಗಳು ಹಾಗೂ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮ ಕಂಟೈನ್ಮೆಂಟ್ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಕೊರೋನಾ ಸೋಂಕು ಹರಡಿಲ್ಲ. ಜಿಲ್ಲಾ ಆಡಳಿತ ಹಾಗೂ ಆರೋಗ್ಯ ಇಲಾಖೆ ವಿಶೇಷ ಪರಿಶ್ರಮದಿಂದಾಗಿ ಕೊರೋನಾ ವೈರಸ್ ಹರಡದಂತೆ ಹದ್ದುಬಸ್ತಿನಲ್ಲಿ ಇಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿನ ಜನರಿಂದ ಇತರರಿಗೆ ಕೊರೋನಾ ಹರಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.
undefined
ಹಾಗಾಗಿ ಕಂಟೈನ್ಮೆಂಟ್ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಹರಡುವಿಕೆಯಲ್ಲಿ ಇಳಿಕೆಯಾಗಿದೆ. ಇದುವರೆಗೆ 50 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 3 ಜನರು ಸಾವಿಗೀಡಾಗಿದ್ದಾರೆ. 34 ಜನರು ಗುಣಮುಖರಾಗಿದ್ದಾರೆ. 13 ಜನರು ಮಾತ್ರ ಸಕ್ರಿಯ ರೋಗಿಗಳಾಗಿದ್ದಾರೆ. ಅವರೆಲ್ಲರ ಆರೋಗ್ಯ ಸುಸ್ಥಿತಿಯಲ್ಲಿದೆ. ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಹಲವರ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೊಸದಾಗಿ ಪಾಸಿಟಿವ್ ಪ್ರಕರಣಗಳು ಬರುವ ಸಾಧ್ಯತೆ ಇಲ್ಲ. ಏಕೆಂದರೆ ವಿಜಯಪುರದ ಕಂಟೈನ್ಮೆಂಟ್ ಪ್ರದೇಶಗಳಾದ ಚಪ್ಪರಬಂದ ಹಾಗೂ ಬಾರಕಮಾನ ಮತ್ತು ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಪಾಸಿಟಿವ್ ಬಂದವರು ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಈ ಪ್ರದೇಶದಿಂದ ಹೊಸದಾಗಿ ಸೋಂಕು ತಗುಲಿದವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಹೊಸದಾಗಿ ಸೋಂಕಿತರು ಬರದಿದ್ದರೆ ಬರುವ ವಾರದಲ್ಲಿ ವಿಜಯಪುರ ಜಿಲ್ಲೆಯೂ ಕೊರೋನಾ ಮುಕ್ತವಾಗುವತ್ತ ಸಾಧ್ಯತೆಗಳ ಎಲ್ಲ ಛಾನ್ಸ್‌ಗಳಿವೆ.
ವಿಜಯಪುರದಲ್ಲಿ ಪತಿಯಿಂದ ಗರ್ಭಿಣಿ ಪತ್ನಿಗೂ ಕೊರೊನಾ..!
ಸೋಮವಾರವಷ್ಟೇ ಮುಂಬೈಯಿಂದ ಬಂದಿರುವ 13 ಜನ ತಬ್ಲೀಘಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಈ ಪೈಕಿ 9 ಜನರ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಇನ್ನುಳಿದ ನಾಲ್ವರ ವರದಿಗಳು ಬಹುತೇಕ ವರದಿಯ ಮೇಲೆ ಎಲ್ಲರ ದೃಷ್ಟಿನೆಟ್ಟಿದೆ.
ವಿಜಯಪುರ ಜಿಲ್ಲೆಯು ಕೊರೋನಾ ಮುಕ್ತವಾಗಬೇಕಾದರೆ ಜನರ ಸಹಕಾರವೂ ಮುಖ್ಯವಾಗಿದೆ. ಜನರು ಹೆಚ್ಚು ಮನೆಯಲ್ಲಿಯೇ ಇರಬೇಕು. ಅವಶ್ಯಕ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರ ಬರಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇದನ್ನು ಜಿಲ್ಲೆಯ ಜನರು ಸ್ವಯಂ ಪ್ರೇರಣೆಯಿಂದ ಮಾಡಿದರೆ ಖಂಡಿತವಾಗಿಯೂ ಕೊರೋನಾ ಹಿಮ್ಮೆಟ್ಟುತ್ತದೆ. ನಾವು ಗೆಲುವು ಸಾಧಿಸುತ್ತೇವೆ. ಇದರಿಂದಾಗಿ ಕೊರೋನಾ ಜಿಲ್ಲೆಯಿಂದ ಪಲಾಯನ ಮಾಡುತ್ತದೆ. ಆಗ ಜಿಲ್ಲೆಯ ಜನರು ಕಂಡ ಕನಸು ಕೊರೋನಾ ಮುಕ್ತ ಜಿಲ್ಲೆ ಎಂಬುವುದು ನನಸಾಗುವುದರಲ್ಲಿ ಸಂದೇಹವಿಲ್ಲ.
ಇದುವರೆಗೆ ಜಿಲ್ಲೆಯ ಜನರು ಕೊರೋನಾ ವಿರುದ್ಧದ ಹೋರಾಟದಲ್ಲಿ ಸಾಕಷ್ಟುಸಹಕಾರ ನೀಡಿದ್ದಾರೆ. ಹೊರ ರಾಜ್ಯ, ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಸಾಕಷ್ಟು ಜನರು ಬರುತ್ತಿದ್ದಾರೆ. ಅವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ಕಳ್ಳತನದಿಂದ ಜಿಲ್ಲೆಗೆ ಪ್ರವೇಶ ಮಾಡಿ ರಹಸ್ಯವಾಗಿ ಇರುವವರ ಬಗ್ಗೆ ಜನರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಜನರ ನಿರೀಕ್ಷಿತ ಸಹಕಾರ ದೊರೆತರೆ ವಿಜಯಪುರ ಜಿಲ್ಲೆಯೂ ಬಹು ಬೇಗನೆ ಕೊರೋನಾ ಮುಕ್ತವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಹೇಳಿದ್ದಾರೆ.