ಕೋವಿಡ್ ಪ್ರಕರಣಗಳ ಪತ್ತೆ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ|ಮುಂದಿನ ದಿನಗಳಲ್ಲಿ ನಾವೆಲ್ಲ ಕೊರೋನಾದೊಂದಿಗೆ ಬದುಕಬೇಕಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಬದುಕುವುದನ್ನು ಕಲಿಯಬೇಕಿದೆ: ಎಸ್‌ಪಿ ಸಿ.ಕೆ. ಬಾಬಾ|
ಬಳ್ಳಾರಿ(ಜೂ.10): ಜಿಂದಾಲ್ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಂದಾಲ್‌ಗೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ಸಿ.ಕೆ. ಬಾಬಾ ಮತ್ತು ಜಿಪಂ ಸಿಇಒ ಕೆ. ನಿತೀಶ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಎರಡು ದಿನಗಳ ಹಿಂದೆ ಭೇಟಿ ನೀಡಿ ಕೊರೋನಾ ಹರಡದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿತು. ಕೆಲ ಅಗತ್ಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಪ್ರತಿನಿತ್ಯ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಮಾಸ್ಕ್ ಕಡ್ಡಾಯ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಿಕೆ, ಸಿಬ್ಬಂದಿ ಕಡಿತ ಸೇರಿದಂತೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.
undefined
ಬಳ್ಳಾರಿ: ಜಿಂದಾಲ್‌ನ ಮತ್ತಿಬ್ಬರು ನೌಕರರಿಗೆ ಕೊರೋನಾ ಸೋಂಕು
ಜ್ವರ, ಕೆಮ್ಮು, ನೆಗಡಿ, ಶೀತದಂತ ಲಕ್ಷಣಗಳಿರುವ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರ ಮೂಗು ಮತ್ತು ಗಂಟಲು ದ್ರವ್ಯವನ್ನು ಸಂಗ್ರಹಿಸಿ ವಿಮ್ಸ್ ವೈರಾಣು ಲ್ಯಾಬ್‌ಗೆ ಕಳುಹಿಸಬೇಕು. ತೀವ್ರ ಉಸಿರಾಟದ ಸಮಸ್ಯೆ ಇರುವಂತರಿದ್ದಲ್ಲಿ ಅವರ ಸ್ಕ್ಯಾಬ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು ಮತ್ತು ಸಮಗ್ರ ವಿವರವಾದ ವರದಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು ಎಂದರು.
ಜೆಎಸ್‌ಡಬ್ಲ್ಯೂ ಹಿರಿಯ ಉಪಾಧ್ಯಕ್ಷ(ಮಾನವ ಸಂಪನ್ಮೂಲ) ವಿಜಯ್ ಸಿನ್ಹಾ, ಕೊರೋನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಂದಾಲ್ ಸಂಸ್ಥೆಯಲ್ಲಿ ಇದು ವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿವರಣೆ ನೀಡಿದರು.
ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಮತ್ತು ಸಂಸ್ಥೆಯಲ್ಲಿನ ಉದ್ಯೋಗಿಗಳು, ಮತ್ತವರ ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ಸಲುವಾಗಿ 24*7 ಕೊರೋನಾ ಕಾರ್ನರ್ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಕೋವಿಡ್‌ಗೆ ಸಂಬಂಧಿಸಿದ ಗೊಂದಲಗಳನ್ನು ಅಲ್ಲಿರುವ ಸ್ವಯಂಸೇವಕರು ಪರಿಹರಿಸಲಿದ್ದಾರೆ ಎಂದರು.
ಜಿಂದಾಲ್ ಉಪವ್ಯವಸ್ಥಾಪಕ ನಿರ್ದೇಶಕ ವಿನೋದ್ ನೋವೆಲ್ ಮಾತನಾಡಿ, ಜಿಲ್ಲಾಡಳಿತದ ತಂಡ ಜಿಂದಾಲ್‌ನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದ್ದು, ಅನೇಕ-ಸಲಹೆಗಳನ್ನು ತಿಳಿಸಿಕೊಟ್ಟಿದ್ದು ಸ್ವಾಗತಾರ್ಹ ಎಂದರು.
ಎಸ್‌ಪಿ ಸಿ.ಕೆ. ಬಾಬಾ ಮಾತನಾಡಿ, ಮುಂದಿನ ದಿನಗಳಲ್ಲಿ ನಾವೆಲ್ಲ ಕೊರೋನಾದೊಂದಿಗೆ ಬದುಕಬೇಕಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಬದುಕುವುದನ್ನು ಕಲಿಯಬೇಕಿದೆ ಎಂದರು.
ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಅಧ್ಯಕ್ಷ ಪಿ. ರಾಜಶೇಖರ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ರಶ್ಮೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಜನಾರ್ದನ್, ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು. ಮಂಜುನಾಥ ಪ್ರಭು ಸ್ವಾಗತಿಸಿದರು.