* ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಸೂಚನೆ
* ಕಟ್ಟಡ ಕಾರ್ಮಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಲಸಿಕೆ ಹಾಕಿಸಿಕೊಳ್ಳಬಹುದು
* ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ನೋಡಿಕೊಳ್ಳಬೇಕು
ವಿಜಯಪುರ(ಜೂ.09): ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 18ರಿಂದ 45 ವರ್ಷ ವಯೋಮಿತಿ ಹೊಂದಿರುವ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಬೇಕು. ಅದರಂತೆ 45 ವರ್ಷ ಮೇಲ್ಪಟ್ಟವರಿಗೂ ಒಂದು ವಾರದಲ್ಲಿ ಗುರುತಿಸಿ ಎರಡನೇ ಲಸಿಕೆ ದೊರಕಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಸೂಚಿಸಿದ್ದಾರೆ.
ನಗರದ ಜಿಪಂ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಮೊಬೈಲ್) ಲಸಿಕಾ ಟೀಮ್ ನೇಮಕ ಮಾಡಲಾಗಿದ್ದು, (ಮೊಬೈಲ್) ಲಸಿಕಾ ಟೀಮ್‌ಗಳು 45 ವರ್ಷ ಮೇಲ್ಪಟ್ಟಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು. ಕೋವ್ಯಾಕ್ಸಿನ್ ಎರಡನೇ ಲಸಿಕೆ ಮಾತ್ರ ಕೊಡಿಸಬೇಕು ಎಂದು ಹೇಳಿದರು.
ಸ್ಯಾಟಿಸ್ಟಿಕ್ ಟೀಮ್‌ದವರು 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ Annexure 3 &3 ಅರ್ಜಿ ನಮೂನೆಯಲ್ಲಿ ನೋಡಲ್ ಅಧಿಕಾರಿಗಳ ಸಹಿ ಇದ್ದ ಬಗ್ಗೆ ಖಾತ್ರಿಪಡಿಸಿಕೊಂಡು ಲಸಿಕೆ ಪಡೆಯಬಹುದು. ಅಂಗವಿಕಲರು ಅವರ ಜೊತೆಗೆ ಒಬ್ಬ ಸಹಾಯಕರು ಅವರ ಗುರುತಿನ ಚೀಟಿಯೊಂದಿಗೆ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದರು.
ವಿಜಯಪುರ: ಉಕ್ಕಿ ಹರಿಯುವ ಹಳ್ಳ ದಾಟಿ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು
ಅದರಂತೆ ಕಟ್ಟಡ ಕಾರ್ಮಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಲಸಿಕೆ ಹಾಕಿಸಿಕೊಳ್ಳಬಹುದು. ಒಂದೊಂದು ತಂಡ ಸುಮಾರು 100 ಜನರಿಗೆ ಲಸಿಕೆಗೆ ಕ್ರಮವಹಿಸಬೇಕು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಬಹುದಾಗಿದ್ದು, ಇದರಲ್ಲಿ ಕೋವಿಶೀಲ್ಡ್ ಪ್ರಥಮ ಹಾಗೂ 2ನೇ ಲಸಿಕೆ ಕೊಡಬಹುದು. ಕೋವ್ಯಾಕ್ಸಿನ್ ಎರಡನೇ ಲಸಿಕೆ ಮಾತ್ರ ಕೊಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 62 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು ಇದರಲ್ಲಿ 9 ಸಿ.ಎಚ್. ಸಿ ಇವೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಲಸಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮಾಡಬೇಕು. ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಅವರ ಮೇಲೆ ನಿಗಾ ವಹಿಸಬೇಕು ಎಂದರು.
ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ, ಎಡಿಸಿ ರಮೇಶ್ ಕಳಸದ, ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ, ಜಿಲ್ಲಾ ಆರ್.ಸಿ .ಹೆಚ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.