
ಹಾವೇರಿ(ಏ.25): ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆ ರಂಜಾನ್ ಹಬ್ಬದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಮೇ. 3ವರೆಗೆ ಪಾಲಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದ್ದಾರೆ.
ರಂಜಾನ್ ಮಾಸಾಚರಣೆಯಲ್ಲಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರತಿ ದಿನದ 5 ಬಾರಿ ನಮಾಜಿನ ಜೊತೆ ಶುಕ್ರವಾರದ ಮತ್ತು ತರಾವೆ ನಮಾಜನ್ನು ಸಹ ಮಸೀದಿ, ದರ್ಗಾಗಳಲ್ಲಿ ಮಾಡುವಂತಿಲ್ಲ. ಧ್ವನಿವರ್ಧಕಗಳ ಮೂಲಕ ಮಸೀದಿಗಳ ಮೇಲ್ವಿಚಾರಕರು ಪ್ರಾರ್ಥನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತಿಲ್ಲ. ಕಡಿಮೆ ಧ್ವನಿಯಲ್ಲಿ ಅಜಾನ್ ಕೂಗುವುದು ಮತ್ತು ಮೌಜ್ಜನ್ ಅಥವಾ ಮಸೀದಿಯ ಪೇಶ್ ಇಮಾಮ್ ಎಂದಿನಂತೆ ರಂಜಾನ್ ತಿಂಗಳಲ್ಲಿ ಉಪವಾಸದ(ರೋಜಾ) ಕುರಿತು ಆರಂಭ(ಸಹರಿ) ಮತ್ತು ಮುಕ್ತಾಯಗೊಳ್ಳುವ ಇಫ್ತಾರ ಬಗ್ಗೆ ಮಾತ್ರ ಹೇಳುವುದು ಹಾಗೂ ಯಾವುದೇ ರೀತಿಯ ಸಾರ್ವಜನಿಕ ಪ್ರವಚನ ನೀಡುವಂತಿಲ್ಲ ಹಾಗೂ ನಮಾಜ್ ಹಾಗೂ ತರಾವೆಯನ್ನು ಮಸೀದಿಗಳಲ್ಲಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಕರಾವಳಿಯಲ್ಲಿ ಇಂದು, ಉಳಿದೆಡೆ ನಾಳೆಯಿಂದ ಪವಿತ್ರ ರಂಜಾನ್ ಆಚರಣೆ
ಇಫ್ತಿಯಾರ್ ಕೂಟ ಮತ್ತು ಸಾಮೂಹಿಕ ಭೋಜನ ಕೂಟವನ್ನು ಆಯೋಜಿಸುವಂತಿಲ್ಲ. ಮಸೀದಿ ಮೊಹಲ್ಲಾಗಳಲ್ಲಿ ಯಾವುದೇ ರೀತಿಯ ತಂಪು ಪಾನೀಯ, ಜ್ಯೂಸ್, ಗಂಜಿ ವಿತರಿಸುವಂತಿಲ್ಲ. ಮಸೀದಿ ಮತ್ತು ದರ್ಗಾದ ಸುತ್ತಮುತ್ತ ಯಾವುದೇ ಉಪಹಾರದ ಅಂಗಡಿಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ರಂಜಾನ್ ಮಾಹೆಯ ನಮಾಜ್ ಹೆಸರಿನಲ್ಲಿ ಗುಂಪು ಸೇರುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.