ಹೊಸ ಆಟೋಗಳಿಗೆ ಪರ್ಮಿಟ್ ಕೊಡೋದನ್ನ ನಿಲ್ಲಿಸಿ: ಜಿಲ್ಲಾಧಿಕಾರಿಗಳಿಗೆ ಚಾಲಕರಿಂದ ಮನವಿ

Published : Nov 14, 2026, 07:33 AM IST
Davanagere Auto Drivers

ಸಾರಾಂಶ

ದಾವಣಗೆರೆಯಲ್ಲಿ ಮಿತಿಮೀರಿದ ಆಟೋ ರಿಕ್ಷಾಗಳಿದ್ದರೂ ಹೊಸ ಪರ್ಮಿಟ್ ನೀಡುತ್ತಿರುವುದನ್ನು ಖಂಡಿಸಿ ಆಟೋ ಚಾಲಕರು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಚಾಲಕರ ಡಿಸ್‌ಪ್ಲೇ ಕಾರ್ಡ್ ಜಾರಿಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ದಾವಣಗೆರೆ: ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಮಿತಿಮೀರಿ ಆಟೋ ರಿಕ್ಷಾಗಳಿದ್ದರೂ ಮತ್ತೆ ಹೊಸದಾಗಿ ಆಟೋ ರಿಕ್ಷಾಗಳಿಗೆ ಹೊಸ ಪರ್ಮಿಟ್ ನೀಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕ ಚಾಲಕರ ಒಕ್ಕೂಟ ಹಾಗೂ ಸ್ಮಾರ್ಟ್ ಸಿಟಿ ಆಟೋ ಚಾಲಕ ಮತ್ತು ಮಾಲೀಕರ ಸಂಘಗಳ ನೇತೃತ್ವದಲ್ಲಿ ಶುಕ್ರವಾರ ಆಟೋ ಚಾಲಕರು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಸಾಂಕೇತಿಕವಾಗಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಉಭಯ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಆಟೋ ರಿಕ್ಷಾ ಚಾಲಕರು ತಮ್ಮ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ಆಟೋ ರಿಕ್ಷಾ ಪರವಾನಗಿ ನೀಡದಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರಗೆ ಮನವಿ ಅರ್ಪಿಸಿದರು.

ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ನಿರಂತರ ಮನವಿ

ಇದೇ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಬಿ.ಅಂಜುಕುಮಾರ, ಹೊಸ ಆಟೋ ರಿಕ್ಷಾಗಳಿಗೆ ಪರ್ಮಿಟ್ ನೀಡದಂತೆ ಅನೇಕ ವರ್ಷದಿಂದಲೂ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ನಿರಂತರ ಮನವಿ ಮಾಡುತ್ತಾ ಬಂದಿದ್ದರೂ, ಹೊಸದಾಗಿ ಪರ್ಮಿಟ್ ನೀಡಲಾಗುತ್ತಿದೆ. ದಾವಣಗೆರೆಯಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಆಟೋ ರಿಕ್ಷಾಗಳಿದ್ದು, ದಿನದಿನಕ್ಕೂ ಹೊಸ ಪರ್ಮಿಟ್ ಪಡೆದ ಆಟೋ ರಿಕ್ಷಾಗಳೂ ರಸ್ತೆಗಿಳಿಯುತ್ತಿವೆ ಎಂದರು.

ಈಗಿರುವ ಆಟೋ ರಿಕ್ಷಾಗಳ ಚಾಲಕರಿಗೆ ಬಾಡಿಗೆ ಇಲ್ಲದೇ ಜೀವನ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ಹೊಸ ಆಟೋ ರಿಕ್ಷಾಗಳಿಗೆ ಪರ್ಮಿಟ್ ನೀಡುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಆಟೋ ಚಾಲಕರಿಗೆ ಡ್ರೈವರ್ ಡಿಸ್‌ಪ್ಲೇ ಜಾರಿಗೊಳಿಸುವಂತೆ ಹಿಂದಿನಿಂದಲೂ ಮನವಿ ಮಾಡಿದರೂ ಸಂಬಂಧಿಸಿದ ಇಲಾಖೆ ಗಮನ ಹರಿಸುತ್ತಿಲ್ಲ. ದಾವಣಗೆರೆಯಲ್ಲಿ ಆಟೋ ಚಾಲಕರಿಗೆ ಡ್ರೈವರ್ ಡಿಸ್‌ಪ್ಲೇ ಕಡ್ಡಾಯವಿಲ್ಲದ ಕಾರಣ ಸಮಸ್ಯೆ ಉಲ್ಭಣಿಸುತ್ತಿದೆ ಎಂದು ದೂರಿದರು.

ದಿನದಿಂದ ದಿನಕ್ಕೆ ಆಟೋ ಚಾಲಕರ ಸಂಖ್ಯೆ ಹೆಚ್ಚಳ

ವಿವಿಧ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದು, ಸಂಚಾರಿ ನಿಯಮಗಳ ಅರಿವಿಲ್ಲದೇ ಜಿಲ್ಲಾ ಕೇಂದ್ರದಲ್ಲಿ ಆಟೋ ಚಲಾಯಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ನೈಜ ಆಟೋ ರಿಕ್ಷಾ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣವೇ ಆಟೋ ಚಾಲಕರಿಗೆ ಡಿಸ್‌ಪ್ಲೇ ಕಾರ್ಡ್ ಜಾರಿಗೊಳಿಸಲಿ. ಹೊಸ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು. ತಿಂಗಳಿಗೊಂದರಂತೆ ಈಗಾಲೇ ನಾಲ್ಕು ಮನವಿ ನೀಡಿದ್ದರೂ ಆಡಳಿತ ಯಂತ್ರ ಸ್ಪಂದಿಸಿಲ್ಲ ಎಂದು ದೂರಿದರು.

ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಧರಣಿ ನಡೆಸುವ ಎಚ್ಚರಿಕೆ

ಆಟೋ ರಿಕ್ಷಾ ಚಾಲಕರು ಇಂದು ಸಂಪಾದನೆ ಇಲ್ಲದೇ, ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ನಮ್ಮ ಸಂಕಷ್ಟ, ಸಮಸ್ಯೆ ಬಗ್ಗೆ ಜಿಲ್ಲಾಡಳಿತ, ಸರ್ಕಾರದ ಗಮನ ಸೆಳೆಯಲು ನಮ್ಮ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಮನವಿ ಸಲ್ಲಿಸುತ್ತಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆಯೆಂಬುದನ್ನು ಜಿಲ್ಲಾಡಳಿತ ಅರಿಯಲಿ. ಹೊಸ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ನಿಲ್ಲಿಸಲಿ. ಪ್ರಾಮಾಣಿಕ ಆಟೋ ಚಾಲಕರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲು ಚಾಲಕರ ಡಿಸ್‌ಪ್ಲೇ ಜಾರಿಗೊಳಿಸಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಬಳಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಧರಣಿ ನಡೆಸುವುದಾಗಿ ಪಿ.ಬಿ.ಅಂಜುಕುಮಾರ ಎಚ್ಚರಿಸಿದರು.

ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್‌.ಅರವಿಂದಾಕ್ಷ, ಪ್ರಧಾನ ಕಾರ್ಯದರ್ಶಿ ಜಿ.ರಾಘವೇಂದ್ರ, ಉಪಾಧ್ಯಕ್ಷ ವೀರೇಶ, ಕಾರ್ಯದರ್ಶಿ ಟಿ.ಎಂ.ಮಂಜುನಾಥ, ಸ್ಮಾರ್ಟ್ ಸಿಟಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಚ್.ಅಣ್ಣಪ್ಪ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಕೊಟ್ರೇಶ, ಖಜಾಂಚಿ ಎಚ್.ಆರ್.ರಾಘವೇಂದ್ರ, ವಿಜಯ ಇತರರು ಇದ್ದರು.

ದಾವಣಗೆರೆಯಲ್ಲಿ ಶುಕ್ರವಾರ ಕರ್ನಾಟಕ ಚಾಲಕರ ಒಕ್ಕೂಟ, ಸ್ಮಾರ್ಟ್ ಸಿಟಿ ಆಟೋ ಚಾಲಕ ಮತ್ತು ಮಾಲೀಕರ ಸಂಘದಿಂದ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

PREV
Read more Articles on
click me!

Recommended Stories

10 ಮಕ್ಕಳಲ್ಲಿ 9 ಹೆಣ್ಣು, ಒಬ್ಬನೇ ಗಂಡು ಮಗ! ಕುಡಿ ಬೇಡ ಮಗನೇ ಎಂದಿದ್ದಕ್ಕೆ ಏನ್ ಮಾಡ್ದ ನೋಡಿ ಪಾಪಿ ಮಗ!
ಮಗಳಿಗೆ ಮೋದಿ ತೋರಿಸಲು, ತಲೆ ಮೇಲೆ ನಿಲ್ಲಿಸಿಕೊಂಡ ಅಪ್ಪ! ಈ ದಿನದ ಬೆಂಗಳೂರಿನ ಬೆಸ್ಟ್ ವಿಡಿಯೋ!