
ದಾವಣಗೆರೆ(ಆ.30) ಸಿಬ್ಬಂದಿ ಕಿರುಕುಳ, ಸಾಲ, ಪ್ರಮೋಶನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೊಂದ ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬರ ಸೆಲ್ಫೀ ವಿಡಿಯೋ ಮಾಡಿ ನಾಪತ್ತೆಯಾದ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ನಡೆದಿದೆ.
ಅರ್‌ಡಿ ಮೋಹನ್ ಕುಮಾರ್(37) ನಾಪತ್ತೆಯಾಗಿರುವ ವ್ಯಕ್ತ. ಬೈಕ್ ಸಮೇತ ತುಂಗಾ ಕಾಲುವೆಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿ ತನ್ನ ನಿರ್ಧಾರಕ್ಕೆ ಮುನ್ನ ಸೇಲ್ಫಿ ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ, ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ, ನನಗೆ ಸಾಲವಿದೆ. ಸಾಲ ಮಾಡಿ ಕೊಟ್ರೇಶ್ ಎಂಬುವರ ಬಳಿ ಮಾರ್ಕ್ಸ್ ಕಾರ್ಡ್ ಮಾಡಿಕೊಂಡಿದ್ದೇನೆ. ಪ್ರಮೋಶನ್ ಬರಲಿಲ್ಲ. ಇತ್ತ ಸಾಲ ಸಿಕ್ಕಾಪಟ್ಟೆ ಆಗಿದೆ. ನನ್ನ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿ ಕಾರಣ. ನನ್ನ ಸಹ ಸಿಬ್ಬಂದಿಗಳಾದ ತಿಪ್ಪೇಶ್, ಮಾರ್ಕ್ಸ್ ಕಾರ್ಡ್ ಮಾಡಿಕೊಡುವ ಕೊಟ್ರೇಶ್ ಕಾರಣ. ನನ್ನಿಂದ ಹೀಗಾಗಿ ನೊಂದು ಸಾಯುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿಗಳೇ ಕಾರಣ. ಲಂಚ ಪಡೆದು ಎಲ್ಲರೂ ಸೇರಿ ಮೋಸ ಮಾಡಿದರು ಎಂದು ವಿಡಿಯೋದಲ್ಲಿ ಮೋಹನ್ ಕಣ್ಣೀರು ಹಾಕುತ್ತಾ ನನಗೆ ನ್ಯಾಯ ಕೊಡಿಸಬೇಕು ಅಂತಾ ಎಂಪಿ ರೇಣುಕಾಚಾರ್ಯ ಅವರಿಗೆ ಮೋಹನ್ ಮನವಿ ಮಾಡಿದ್ದಾನೆ.
ಶೋಧ ಕಾರ್ಯಾಚರಣೆ ವೇಳೆ ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಮೋಹನ್ ಬಳಸುತ್ತಿದ್ದ ಬೈಕ್ ಪತ್ತೆಯಾಗಿರುವುದರಿಂದ ಬೈಕ್ ಸಮೇತ ತುಂಗಾ ಕಾಲುವೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೋಧಕಾರ್ಯ ಮುಂದುವರಿದಿದೆ.
ಎಂಪಿ ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.