ರಾತ್ರಿ ವೇಳೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಕೋತಿಯೊಂದು ಕೈ ರಕ್ತನಾಳವನ್ನೇ ಕಚ್ಚಿದ್ದು, ತೀವ್ರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ದಾವಣಗೆರೆ (ನ.13): ರಾಜ್ಯದಲ್ಲಿ ಹುಲಿ, ಚಿರತೆ, ಕಾಡಾನೆ, ಕರಡಿ ಹಾಗೂ ಹಾವು ಕಡಿತ ಸೇರಿದಂತೆ ಇತರೆ ಕಾಡು ಪ್ರಾಣಿಗಳ ದಾಳಿಗೆ ಮನುಷ್ಯರು ಸಾವನ್ನಪ್ಪಿದ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಎಲ್ಲೆಡೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಕೋತಿ ದಾಳಿಗೆ ವ್ಯಕ್ತಿ ಬಲಿಯಾಗಿರುವ ದುರ್ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಹೌದು, ನಾವು ನೀವೆಲ್ಲರೂ ಅತ್ಯಂತ ಸನಿಹದಿಂದ ನೋಡಿರುವ ಅದಕ್ಕೆ ಬಾಳೆಹಣ್ಣು, ಕಡ್ಲೆಪುರಿ, ಶೇಂಗಾ ಮತ್ತಿತರ ಆಹಾರಗಳನ್ನು ಕೊಟ್ಟು ಫೋಟೋ ತೆಗೆಸಿಕೊಳ್ಳುವ ಮಂಗನ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾನೆ. ಈ ದುರ್ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಹೊನ್ನಾಳಿ ತಾಲೂಕಿನ ಅರಕೆರೆ ಎಕೆ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಗುತ್ಯಪ್ಪ ಮಂಗನ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ಮಧ್ಯರಾತ್ರಿ ಬಹಿರ್ದೆಸೆಗೆ ಹೋದಾಗ ಗುತ್ಯಪ್ಪನ ಮೇಲೆ ಕೋತಿ ದಾಳಿ ಮಾಡಿ ಕಚ್ಚಿದೆ.
ಹೋಂಸ್ಟೇನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಕೋಣೆಯೊಳಗೆ ಎಳೆದೊಯ್ದು ಗ್ಯಾಂಗ್ ರೇಪ್: ವಿಡಿಯೋ ವೈರಲ್
ರಾತ್ರಿ ವೇಳೆ ಬಹಿರ್ದೆಸೆ ಮುಗಿಸಿ ವಾಪಸ್ ಬರುವಾಗ ಕೈ ರಟ್ಟೆ ಭಾಗದಲ್ಲಿನ ರಕ್ತನಾಳದ ನರವನ್ನೇ ಕಚ್ಚಿ ಹಾಕಿದೆ. ಇದರಿಂದ ತೀವ್ರ ಗಾಯಗೊಂಡ ವ್ಯಕ್ತಿ ಗುತ್ಯಪ್ಪ ಕೂಗಿಕೊಂಡು ಮನೆಯ ಬಳಿ ಓಡಿ ಬಂದಿದ್ದಾನೆ. ಆಗ ಆತನನ್ನು ಸ್ಥಳೀಯ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಂತ್ರಸ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಅರಣ್ಯ ಇಲಾಖೆಯ ಸಿಸಿಎಪ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪೊಲೀಸ್ ಇಲಾಖೆ ಸೇರಿದ ಮುದ್ದು ಮುದ್ದಾದ ಅತೀ ಕಿರಿಯ ಉದ್ಯೋಗಿಗಳ ಫೋಟೋ ಶೂಟ್.!
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಬಗ್ಗೆ ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳಿಂದ ಸ್ಥಳ ಮಹಜರ್ ಮಾಡಲಾಗಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಮತ್ತೊಂದೆಡೆ ಮಂಗನ ದಾಳಿಯಿಂದ ಗ್ರಾಮಸ್ಥರು ಭಯಭೀತಗೊಂಡಿದ್ದು, ಕೂಡಲೇ ದಾಳಿ ಮಾಡಿದ ಮಂಗನನ್ನು ಸೆರೆಹಿಡಿಯಲು ಆಗ್ರಹಿಸಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಒಂದು ತಂಡದಿಂದ ಮಂಗನ ಸೆರೆಗೆ ಶತಪ್ರಯತ್ನ ಮಾಡಲಾಗುತ್ತಿದೆ. ಮಂಗನ ಸೆರೆ ಹಿಡಿಯಲು ಬೋನು ಹಾಗೂ ಬಲೆ ಹಿಡಿದುಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದಾರೆ.