
ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಅತ್ತೆ ಹಾಗೂ ಅಳಿಯ ಎಸ್ಕೇಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ ಮೇ 2ರಂದು ನಾಪತ್ತೆಯಾಗಿದ್ದ ಅತ್ತೆ ಶಾಂತಾ ಎಂಬವರು ಇದೀಗ ಮುದ್ದೇನಹಳ್ಳಿಗೆ ವಾಪಸ್ ಬಂದಿದ್ದು, ಅಲ್ಲಿ ಎಂದಿನಂತೆ ವಾಸ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಶಾಂತಾರ ಪತಿ ನಾಗರಾಜ್, ತನ್ನ ಪತ್ನಿ ಕಾಣೆಯಾಗಿದ್ದಾರೆಂದು ಮೇ 2ರಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಎರಡು ದಿನಗಳ ಹಿಂದೆ ಶಾಂತಾ ಮನೆಯತ್ತ ಮರಳಿದ ಹಿನ್ನೆಲೆಯಲ್ಲಿ, ಶಾಂತಾರ ನಾಪತ್ತೆ ಪ್ರಕರಣವನ್ನು ಪೊಲೀಸರು ಕ್ಲೋಸ್ ಮಾಡಿದ್ದಾರೆ. ಇದೇ ವೇಳೆ, ಅಳಿಯ ಗಣೇಶ್ ಎಂಬ ಯುವಕನ ಪತ್ತೆಗೆ ಸಂಬಂಧಿಸಿದ ಮಾಹಿತಿ ಪೊಲೀಸರಿಗೆ ಇನ್ನೂ ಲಭ್ಯವಾಗಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ. ಗಣೇಶನ ಪತ್ನಿ, ತನ್ನ ಪತಿ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದಾರೆ.
ಶಾಂತಾ ತಮ್ಮ ನಾಪತ್ತೆ ಬಗ್ಗೆ ವಿಡಿಯೋ ಬಿಡುಗಡೆ ಮಾಡಿ, “ನನ್ನ ಪತಿ ನಾಗರಾಜ್ ನನ್ನ ಹೆಸರಿನಲ್ಲಿ ಸಾಲ ಮಾಡಿಸಿ, ಆ ಸಾಲವನ್ನು ಹಿಂತಿರುಗಿಸದೆ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನನಗೆ ಹೊಡೆದು ಓಡಿಸಿ ನೆಂಟರ ಮನೆಯಲ್ಲಿ ಇರುವಂತೆ ಮಾಡಿ. ನಾನು ನಾಪತ್ತೆಯಾಗಿದ್ದೆ ಎಂದು ಮಾಧ್ಯಮಗಳಿಗೆ ಸುಳ್ಳು ಹೇಳಲಾಗಿದೆ. ಮನೆ ಕಟ್ಟಲು ಹಾಗೂ ಮದುವೆಗೆ ಸಾಲ ಮಾಡಲಾಗಿತ್ತು. ಆದರೆ ಸಾಲಗಾರರು ಹಣ ಕೇಳಿದಾಗ ನನ್ನ ಪತಿ ಸ್ಪಂದಿಸುತ್ತಿಲ್ಲ. ನನಗೆ ಗಣೇಶ್ ನ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಅವ ಎಲ್ಲಿ ಹೋಗಿದ್ದಾನೆ ನನಗೆ ಗೊತ್ತಿಲ್ಲ. ನಾನು ಎಲ್ಲಿ ಹೋಗಿದ್ದೇನೆ ಅವನಿಗೆ ಗೊತ್ತಿಲ್ಲ. ಈಗ ನಮ್ಮಿಬ್ಬರ ಮಧ್ಯೆ ಸಂಬಂಧ ಕಟ್ಟುತ್ತಿದ್ದಾರೆ. ಮಲ ತಾಯಿ ಅನ್ನುತ್ತಿದ್ದಾರೆ. ನಾನು ಮಗಳಿಂದ ಹೆಚ್ಚಾಗಿ ಅವಳನ್ನು ಊಟ ಹಾಕಿ ನೋಡಿಕೊಂಡಿದ್ದೇನೆ. ಆದರೆ ನಮ್ಮಿಬ್ಬರಲ್ಲಿ ಸಂಬಂಧ ಇದೆ ಎಂದು ಕಟ್ಟು ಕಥೆ ಹೇಳಿ ಈಗ ನನ್ನ ಮರ್ಯಾದೆ ತೆಗೆದರು. ಇಬ್ಬರು ನನ್ನನ್ನು ಹೊಡೆದು ಹೊರಗೆ ಹಾಕಿದ್ದಾರೆ. ಮೊದಲ ಪತ್ನಿಯಿಂದ ವಿಚ್ಚೇದನ ಪಡೆದ ನಂತರ ನಾನು ನಾಗರಾಜ್ ಗೆ ಮೂರನೇ ಪತ್ನಿ ಆಗಿದ್ದೇನೆ. ಈಗ ದೊಡ್ಡ ಅವಾಂತರ ಮಾಡಿ ಕಥೆ ಕಟ್ಟಿದ್ದಾರೆ. ನಾನು ಇದೇ ಊರಲ್ಲೇ ಇದ್ದೆ. ಇರೋ ಹೆಂಡತಿ ಜೊತೆಗೆ ಮನೆ ಬೀಗ ಹಾಕಿ ಮಜಾ ಮಾಡಿಕೊಂಡಿದ್ದಾರೆ. ಊರಿನವರೆಲ್ಲ ಬಲವಂತ ಮಾಡಿ ನ್ಯಾಯ ಕೊಡಿಸುತ್ತೇವೆ ಎಂದು ಕರೆದಿದ್ದರು. ಜೀವ ಭಯಕ್ಕೆ ಹೆದರಿಕೊಂಡು ಹೋಗಿದ್ದೆ ಹೊರತು ಬೇರೆನೂ ಅಲ್ಲ. ಅವಳು ಡಿವೋರ್ಸ್ ಆಗಿರುವ ಹೆಂಡತಿ ಆಸ್ತಿ ಮತ್ತು ಮನೆಗೋಸ್ಕರ ಈಗ ನನ್ನನ್ನು ಕಟ್ಟು ಕಥೆ ಕಟ್ಟಿ ಹೀಗೆ ಮಾಡಿದ್ದಾರೆ. ಪರಾರಿ ಆಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವನು ಅವರ ತಂಗಿ ಮಗ. ಇಬ್ಬರೂ ಚೆನ್ನಾಗಿದ್ದರು ಹಾಗೆ ಮದುವೆ ಮಾಡಿಕೊಂಡಿದ್ದ. ನನ್ನನ್ನು ಮನೆಯಿಂದ ಹೊರಗೆ ಹಾಕಲು ತಂತ್ರ ಮಾಡಿ ಈ ರೀತಿ ಮಾಡಿದ್ದಾರೆಂದು ಎಂದು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ, ಶಾಂತಾ ಮೇಲೆ ಲಕ್ಷಾಂತರ ರೂಪಾಯಿ ಸಾಲ ವಂಚನೆ ಆರೋಪ ಕೇಳಿಬಂದಿದೆ. ಶಾಂತಾರ ಮೇಲೆ ಸುಮಾರು 15ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದುಕೊಂಡಿದ್ದು, ಆ ಹಣವನ್ನು ಹಿಂತಿರುಗಿಸದ ಕಾರಣ ಗ್ರಾಮದಲ್ಲಿನ ಮಹಿಳೆಯರು ಕಂಗಾಲಾಗಿದ್ದಾರೆ. ತಮ್ಮ ಹಣ ಮರಳಿಸಬೇಕೆಂದು ಪೊಲೀಸ್ ಠಾಣೆಗೆ ಅಲೆಯಿತ್ತಿದ್ದಾರೆ.