ಅತ್ಯಾಚಾರಕ್ಕೆ ಒಳಗಾಗಿ ಊರಿನಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ಯುವತಿಯ ಮಗುವಿಗೆ ಜಿಲ್ಲಾಧಿಕಾರಿಯೇ ನಾಮಕರಣ ಮಾಡಿ ಪುನರ್ವಸತಿ ಕಲ್ಪಿಸಿದ್ದಾರೆ.
ದಾವಣಗೆರೆ [ಫೆ.28]: ಶ್ರೀಕೃಷ್ಣ. ಶ್ರೀಕೃಷ್ಣ.. ಶ್ರೀಕೃಷ್ಣ...!
ಇದೇನು ಶ್ರೀಕೃಷ್ಣನ ಜಪ ಎಂದು ಪ್ರಶ್ನಿಸುತ್ತೀರಾ? ಇದು ಜಪವಲ್ಲ. ಮುದ್ದಾದ ಗಂಡು ಮಗುವೊಂದಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಮೂರು ಸಲ ಶ್ರೀಕೃಷ್ಣ ಎಂಬುದಾಗಿ ಕರೆಯುವ ಮೂಲಕ ನಾಮಕರಣ ಮಾಡಿದ್ದಷ್ಟೇ...
ಅದು ಅತ್ಯಾಚಾರಕ್ಕೊಳಗಾದ ಮೂಕ ಯುವತಿಗೆ ಜನಿಸಿದ ಮಗು. ದೌರ್ಜನ್ಯಕ್ಕೆ, ಶೋಷಣೆಗೊಳಗಾದ ಮುಗ್ದ ಯುವತಿ ಪರ ನಿಲ್ಲಬೇಕಿದ್ದ ಸಮಾಜವೇ ಆಕೆಯನ್ನು ಮೌಢ್ಯದಿಂದಾಗಿ ಹಟ್ಟಿಯಿಂದಲೇ ಬಹಿಷ್ಕರಿಸಿತ್ತು. ಕೂಸು ಹುಟ್ಟಿತಿಂಗಳುಗಳೇ ಕಳೆದರೂ ಮಗುವಿಗೆ ನಾಮಕರಣವೇ ಆಗಿರಲಿಲ್ಲ.
ಜಗಳೂರು ತಾ.ಅಣಬೂರು ಗೊಲ್ಲರಹಟ್ಟಿಗ್ರಾಮದ ಆಕೆ ಮಾತು ಬಾರದವಳು. ಆಕೆಯ ಮೂಕತನವನ್ನೇ ಯುವಕನೊಬ್ಬ ದುರ್ಬಳಕೆ ಮಾಡಿಕೊಂಡು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.
ಸಂಕಷ್ಟದ ಪರಿಸ್ಥಿತಿಯಲ್ಲಿ ಆಕೆಯ ಪರ ನಿಲ್ಲಬೇಕಾದವರು, ಆಶ್ರಯ ಕಲ್ಪಿಸಬೇಕಾದವರೇ ಮೌಢ್ಯ ಆಚರಣೆಗೆ ಬಲಿಯಾಗಿ ಊರ ಹೊರಗಿಟ್ಟರು. ಯುವತಿ ಮಗುವೊಂದಕ್ಕೆ ಜನ್ಮವನ್ನೂ ನೀಡಿದಳು. ತಿಂಗಳುಗಳೇ ಕಳೆದರೂ ನಾಮಕರಣ ಆಗಿರಲಿಲ್ಲ. ಈ ವಿಚಾರವು ಸುವರ್ಣ ನ್ಯೂಸ್‌ನ ಮೂಲಕ ಜಿಲ್ಲಾಡಳಿತದ ಗಮನಕ್ಕೂ ಬಂದಿತ್ತು.
ಬಿಗ್ 3 ಹೊತ್ತು ತಂದಿದೆ ಕರುನಾಡಿನ ತಾಯಿಯೊಬ್ಬಳ ಕರುಣಾಜನಕ ಕಥೆ...
ತಕ್ಷಣವೇ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು, ಅಣಬೂರು ಗೊಲ್ಲರಹಟ್ಟಿಗೆ ಭೇಟಿ ನೀಡಿ, ಯುವತಿಗೆ ಬಹಿಷ್ಕಾರ ಹಾಕಿದ್ದು ಅಕ್ಷಮ್ಯ ಅಪರಾಧ ಎಂದು ಎಚ್ಚರಿಸಿದರು. ಅಲ್ಲದೆ, ಆಕೆಗೆ ಕೂಸಿನ ಸಮೇತ ದಾವಣಗೆರೆ ಹೊರ ವಲಯದ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದರು.
ಮೂಕ ಯುವತಿ ಮೊಗದಲ್ಲಿ ಮಾತ್ರ ಗುರುವಾರ ನಿಜಕ್ಕೂ ಆನಂದಭಾಷ್ಪ ಸುರಿಯುತ್ತಲೇ ಇತ್ತು. ತನ್ನವರು ಯಾರೂ ಇಲ್ಲ ಎಂಬ ಮೂಕರೋಧನೆಯಲ್ಲಿದ್ದ ಆಕೆಯ ಜೊತೆಗೆ ಇಡೀ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯೇ ಇದೆಯೆಂಬುದನ್ನು ಸ್ವತಃ ಉಭಯ ಇಲಾಖೆ ಮುಖ್ಯಸ್ಥರೇ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ ಹೆಣ್ಣು ಮಕ್ಕಳು ಮಾಡುವ ಸಂಪ್ರದಾಯ, ಆಚರಣೆಯಂತೆ ತೊಟ್ಟಿಲು ಕಾರ್ಯ ನೆರವೇರಿಸಿದರು. ಮಹಿಳಾ ಅಧಿಕಾರಿ, ಸಿಬ್ಬಂದಿ ನಾಮಕರಣ ಶಾಸ್ತ್ರದ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು. ಕೊನೆಗೆ ಮುದ್ದಾದ ಮಗುವಿಗೆ ಶ್ರೀಕೃಷ್ಣ..ಶ್ರೀಕೃಷ್ಣ...ಶ್ರೀಕೃಷ್ಣ.... ಎಂದು ಸಂಬೋಧಿಸುವ ಮೂಲಕ ಡಿಸಿ ಬೀಳಗಿ ನಾಮಕರಣ ಶಾಸ್ತ್ರ ಪೂರ್ಣಗೊಳಿಸಿದರು.
ನೊಂದಾಕೆಗೆ ನ್ಯಾಯ, ಕೂಸಿಗೆ ತಂದೆ ಸಿಕ್ಕಾನೆಯೇ?
ದಾವಣಗೆರೆ: ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಮೂಲದ ಮೂಕ ಯುವತಿ ಮೇಲೆ 1 ವರ್ಷದ ಹಿಂದೆ ಅದೇ ಹಟ್ಟಿಯ ಯುವಕನೊಬ್ಬ ಅತ್ಯಾಚಾರ ಎಸಗಿದ್ದ. ಯುವತಿ ತನ್ನ ಮೇಲೆ ಅತ್ಯಾಚಾರ ಎಸಗಿದವನ ಬಗ್ಗೆ ಸಾಕಷ್ಟುಸಂಜ್ಞೆ ಮೂಲಕ ತೋರಿಸಿದರೂ ಕಿವಿಗೊಡದ ಪೊಲೀಸ್ ಇಲಾಖೆ, ಸಂಬಂಧಿಸಿದ ಅಧಿಕಾರಿಗಳು, ಗ್ರಾಮದ ಕೆಲವು ಮುಖ್ಯಸ್ಥರಿಂದಾಗಿ ಆಕೆಗೆ ನ್ಯಾಯ ಸಿಗಲಿಲ್ಲ. ನಂತರ ಆಕೆಯು ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ದಳು. ಆಕೆ ಗರ್ಭಿಣಿಯಾದ ವಿಷಯ ತಿಳಿದ ಹಟ್ಟಿಜನರೂ ಆಕೆಗೆ ಬಹಿಷ್ಕಾರ ಹಾಕಿದರು. ಕೊನೆಗೆ ತಾಯಿ ಜೊತೆಗೆ ವಾಸವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಳು. ನೋಡ ನೋಡುತ್ತಿದ್ದಂತೆಯೇ ಕೂಸಿಗೆ 8 ತಿಂಗಳಾಯಿತು.
ಇದು ಸಮಾಜದ ಯುವ ಮುಖಂಡರ ಮೂಲಕ ಸುವರ್ಣ ನ್ಯೂಸ್-ಕನ್ನಡಪ್ರಭದ ಗಮನಕ್ಕೂ ಬಂದಿತು. ಯುವತಿ ತನ್ನ 8 ತಿಂಗಳ ಕೂಸಿನ ಸಮೇತ ಹಟ್ಟಿಹೊರಗೆ ಗುಡಿಸಲಲ್ಲಿ ಬಾಳುತ್ತಿರುವ ಬಗ್ಗೆ ಯಾದವ ಸಮಾಜದ ಯುವ ಮುಖಂಡ, ಜಿಲ್ಲಾ ಯಾದವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪ್ರವೀಣಕುಮಾರ ನೀಡಿದ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿ ಬೀಳಗಿ, ಎಸ್ಪಿ ಹನುಮಂತರಾಯ, ಜಿಪಂ ಸಿಇಒ ಪದ್ಮಾ ಬಸವಂತಪ್ಪ ಜಗಳೂರು ತಾ.ಅಣಬೂರು ಗೊಲ್ಲರಹಟ್ಟಿಗೆ ಭೇಟಿ ನೀಡಿ ಆಸರೆ ವ್ಯವಸ್ಥೆ ಮಾಡಿದ್ದರು. ಇಂದು ಮಗುವಿಗೆ ನಾಮಕರಣ ಶಾಸ್ತ್ರವೂ ಆಯಿತು.