ದಾವಣಗೆರೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ವಿಜಯೋತ್ಸವ

By Kannadaprabha News  |  First Published Jul 24, 2019, 12:22 PM IST

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತವನ್ನು ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ದಾವಣಗೆರೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೀಗ ಬಿಜೆಪಿ ಅಧಿಕಾರಕ್ಕೆ ಬರಲು ಹಾದಿ ಸುಗಮವಾಗಿದ್ದು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.


ದಾವಣಗೆರೆ(ಜು.24): ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ರಾತ್ರಿ ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ನೇತೃತ್ವದಲ್ಲಿ ಪಕ್ಷದ ಯುವ ಮೋರ್ಚಾ, ಮಹಿಳಾ ಮೋರ್ಚಾ, ಎಸ್ಸಿ-ಎಸ್ಟಿಮೋರ್ಚಾ, ಒಬಿಸಿ ಮೋರ್ಚಾ ಮುಖಂಡರು, ಕಾರ್ಯಕರ್ತರು ಸೇರಿ ಎಲ್ಲರೂ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಬಿಜೆಪಿ, ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಅವರ ಪರ ಜಯ ಘೋಷ ಮೊಳಗಿಸಿದರು.

Tap to resize

Latest Videos

ಬಿಎಸ್‌ವೈ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಸಂಭ್ರಮ

ಯಶವಂತರಾವ್‌ ಜಾಧವ್‌ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ವಿಫಲವಾಗಿದೆ. ಬಿಜೆಪಿ ತನ್ನ ಶಕ್ತಿಯನ್ನು ವಿಧಾನಸಭೆಯಲ್ಲಿ ಪ್ರದರ್ಶಿಸಿದೆ. ನಮ್ಮ ಪಕ್ಷವು ಒಗ್ಗಟ್ಟಿನಿಂದ ವಿಶ್ವಾಸಮತ ಗಳಿಸಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವ ವಹಿಸಿಕೊಂಡು, ಅತ್ಯಂತ ಯಶಸ್ವಿಯಾಗಿ ಸದನದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸುಭದ್ರ ಸರ್ಕಾರ ನಿರ್ಮಾಣ:

ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ತನ್ನ ಗಟ್ಟಿನೆಲೆಯೆಂಬುದನ್ನು ಸಾಬೀತುಪಡಿಸಿದೆ. ಇನ್ನು 2 ದಿನಗಳಲ್ಲೇ ಮುಂದಿನ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಸುಭದ್ರ ಸರ್ಕಾರವನ್ನು ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ತಂದು, ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ಮಹಿಳಾ ಮೋರ್ಚಾ ಮುಖಂಡರು, ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎಚ್‌.ಸಿ.ಜಯಮ್ಮ, ಸಂಸದ ಸಿದ್ದೇಶ್ವರ ಪುತ್ರಿ ಜಿ.ಎಂ.ಅಶ್ವಿನಿ, ಚೇತನಾ ಬಾಯಿ, ಸವಿತಾ ರವಿಕುಮಾರ, ಭಾಗ್ಯ ಪಿಸಾಳೆ, ದೇವೀರಮ್ಮ, ಮುಕುಂದಪ್ಪ, ಪಿ.ಸಿ.ಶ್ರೀನಿವಾಸ, ಎಚ್‌.ಎನ್‌.ಶಿವಕುಮಾರ ಇದ್ದರು.

click me!