ಆನ್ಲೈನ್ ಗೇಮ್ ಆಡುತ್ತಾ, ಒಂಟಿಯಾಗಿದ್ದ ಅಜ್ಜಿ ಮನೆಗೆ ಹೊಕ್ಕ ಎಂ.ಕಾಂ ಪದವೀಧರ; ಮುಂದಾಗಿದ್ದ ಪೈಶಾಚಿಕ ಕೃತ್ಯ!

Published : Feb 23, 2026, 08:11 PM IST
Davanagere M.Com Online Gamer

ಸಾರಾಂಶ

ದಾವಣಗೆರೆಯ ನ್ಯಾಮತಿ ತಾಲೂಕಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಭಾವಿಸಲಾಗಿದ್ದ ವೃದ್ಧೆಯ ಸಾವು ಕೊಲೆ ಎಂದು ಸಾಬೀತಾಗಿದೆ. ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ ಎಂ.ಕಾಂ ಪದವೀಧರ, ಚಿನ್ನಕ್ಕಾಗಿ ವೃದ್ಧೆಯನ್ನು ಕತ್ತು ಹಿಸುಕಿ ಕೊಂದಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ದಾವಣಗೆರೆ (ಫೆ.23): ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದ್ದ ವೃದ್ಧೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಈಗ ಭೀಕರ ತಿರುವು ಸಿಕ್ಕಿದೆ. ಹೃದಯಾಘಾತದಿಂದ ಸಾವು ಎಂದು ಭಾವಿಸಲಾಗಿದ್ದ ಪ್ರಕರಣವು, ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಲಿಯಾದ ಯುವಕನೊಬ್ಬ ನಡೆಸಿದ ಬರ್ಬರ ಹತ್ಯೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಆನ್‌ಲೈನ್ ಗೇಮ್ ಎಂಬ ಮೃತ್ಯುಪಾಶ:

ಎಂ.ಕಾಂ ಪದವೀಧರನಾಗಿದ್ದರೂ ಆನ್‌ಲೈನ್ ಗೇಮಿಂಗ್ ಎಂಬ ವ್ಯಸನಕ್ಕೆ ಬಿದ್ದಿದ್ದ 23 ವರ್ಷದ ಯುವಕ ಅಭಿಷೇಕ್, ತನ್ನ ಸಾಲ ತೀರಿಸಲು ದಾರಿಯಿಲ್ಲದೆ ಒಬ್ಬಂಟಿ ವೃದ್ಧೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ನಿವಾಸಿ.

ಘಟನೆಯ ಹಿನ್ನೆಲೆ:

ಆರುಂಡಿ ಗ್ರಾಮದ ನಿವಾಸಿ ಕಮಲಮ್ಮ (64) ಎಂಬವರು ಫೆಬ್ರವರಿ 2 ರಂದು ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಕಮಲಮ್ಮ, ನಾಲ್ವರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮೊದಲಿಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಭಾವಿಸಿದ್ದರು. ಆದರೆ, ಅಂತ್ಯಕ್ರಿಯೆಯ ತಯಾರಿಯ ವೇಳೆ ಅವರ ಮೈಮೇಲಿದ್ದ ಬಂಗಾರದ ಆಭರಣಗಳು ನಾಪತ್ತೆಯಾಗಿರುವುದು ಮಕ್ಕಳ ಗಮನಕ್ಕೆ ಬಂದಿದೆ. ಈ ಸಂಬಂಧ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೊಲೆಯ ಸ್ಕೆಚ್ ಹಾಕಿದ್ದು ಹೇಗೆ?

ಆರೋಪಿ ಅಭಿಷೇಕ್ ಆನ್‌ಲೈನ್ ಗೇಮ್‌ಗಳಿಂದಾಗಿ ಸುಮಾರು 17 ರಿಂದ 20 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟ ತಾಳಲಾರದೆ 6 ತಿಂಗಳ ಹಿಂದೆ ಊರು ಬಿಟ್ಟಿದ್ದ ಆತ, ವಿವಿಧ ಕಡೆ ಕೆಲಸ ಮಾಡುತ್ತಿದ್ದ. ಫೆಬ್ರವರಿ 1 ರಂದು ಆರುಂಡಿ ಗ್ರಾಮದಲ್ಲಿ ನಡೆದಿದ್ದ ಜಾತ್ರಾ ಮಹೋತ್ಸವದ ಮೆರವಣಿಗೆಯನ್ನು ನೋಡಲು ಬಂದಿದ್ದ ಈತ, ಹೆಚ್ಚಿನ ಚಿನ್ನಾಭರಣ ಧರಿಸಿದ್ದ ಕಮಲಮ್ಮ ಅವರನ್ನು ಗಮನಿಸಿದ್ದಾನೆ. ಅವರು ಒಬ್ಬರೇ ವಾಸವಿರುವುದನ್ನು ಖಚಿತಪಡಿಸಿಕೊಂಡು, ಅಂದೇ ರಾತ್ರಿ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ ಅವಿತು ಕುಳಿತಿದ್ದಾನೆ. ರಾತ್ರಿ ವೇಳೆ ಕಮಲಮ್ಮ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ, ಅವರ ಮೈಮೇಲಿದ್ದ ಎರಡು ಎಳೆ ಚಿನ್ನದ ಸರ, ಎರಡು ಬಳೆ ಹಾಗೂ ಕಿವಿಯೋಲೆಗಳನ್ನು ದೋಚಿ ಪರಾರಿಯಾಗಿದ್ದಾನೆ.

ಪೊಲೀಸರ ತನಿಖೆ ಮತ್ತು ಬಂಧನ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹೆಚ್.ಟಿ. ಶೇಖರ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ನ್ಯಾಮತಿ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳ (Technical Evidence) ಮೂಲಕ ಆರೋಪಿ ಅಭಿಷೇಕ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯು ಕದ್ದ ಚಿನ್ನವನ್ನು ಖಾಸಗಿ ಬ್ಯಾಂಕೊಂದರಲ್ಲಿ ಅಡವಿಟ್ಟು ಹಣ ಪಡೆದಿದ್ದ ಎನ್ನಲಾಗಿದೆ. ಬಂಧಿತನಿಂದ 76 ಗ್ರಾಂ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ನ್ಯಾಮತಿ ಪೊಲೀಸರ ತಂಡಕ್ಕೆ ಎಸ್‌ಪಿ ಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.

PREV
Read more Articles on
click me!

Recommended Stories

ಅಖಂಡ ಬಳ್ಳಾರಿ ಜಿಲ್ಲೆಗೆ ₹2372 ಕೋಟಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗ, ಅಭಿವೃದ್ಧಿಯ ಹೊಸ ಶಕೆ
ಎಣ್ಣೆ ಬೇಕು ಅಣ್ಣಾ, ಬಾರ್ ತೆಗೆಸು ಚಿನ್ನ; ಕಟ್ಟಡದ ಮೇಲೇರಿ ಪೊಲೀಸರಿಗೆ ಬಾಟ್ಲು ಕೇಳಿದ ಕುಡುಕ!