Mother Daughter Reunite : 22 ವರ್ಷ ಬಳಿಕ ಅಮ್ಮನ ಮಡಿಲು ಸೇರಿದ ಮಗಳು

By Kannadaprabha News  |  First Published Jan 5, 2022, 11:33 AM IST
  •  22 ವರ್ಷ ಬಳಿಕ ಅಮ್ಮನ ಮಡಿಲು ಸೇರಿದ ಮಗಳು 
  •  ಮನೆ ಬಿಟ್ಟು ಹೋಗಿದ್ದಾಗ 9 ವರ್ಷ ವಯಸ್ಸು
  • ಮೂಡಿಗೆರೆ ತಾಲೂಕಿನಲ್ಲಿ ಹೃದಯಸ್ಪರ್ಶಿ ಘಟನೆ
     

 ಮೂಡಿಗೆರೆ (ಜ.05):  ಮನೆ ಬಿಟ್ಟು ಹೋಗಿ 22 ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗಳ. ಈ ಹೃದಯ ಸ್ಪರ್ಶಿ ಘಟನೆ ಮೂಡಿಗೆರೆ (Mudigere)  ತಾಲೂಕಿನಲ್ಲಿ ಮಂಗಳವಾರ ನಡೆದಿದೆ.  ಮನೆ ಬಿಟ್ಟು ಕೇರಳಕ್ಕೆ ಹೋಗುವಾಗ ವಯಸ್ಸು 9, ಈಗ 22 ವರ್ಷದ ಬಳಿಕ ಗಂಡ, ಇಬ್ಬರು ಮಕ್ಕಳೊಂದಿಗೆ (Children) ತಾಯಿಯನ್ನು (Mother) ಸೇರಿರುವ ಹಿಂದೆ ಕಥೆ ಇದೆ.

ಆಗಿದ್ದೇನು?:  9ನೇ ವಯಸ್ಸಿನಲ್ಲಿ ಮನೆಬಿಟ್ಟು ಟಿಂಬರ್‌ ಕೆಲಸದ ಆನೆಯ ಕೆಲಸಗಾರನ ಜೊತೆ ಕೇರಳಕ್ಕೆ (Kerala) ತೆರಳಿದ್ದ ಬಾಲಕಿ 22 ವರ್ಷದ ಬಳಿಕ ಮದುವೆಯಾಗಿ (Marriage) ಗಂಡನೊಂದಿಗೆ ತಂದೆ ತಾಯಿಯನ್ನು ಹುಡುಕಿಕೊಂಡು ಬಂದಿದ್ದಾಳೆ. ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಪೂರ್ಣೇಶ್‌ ಎಂಬುವರ ಕಾಫಿ ಎಸ್ಟೇಟಿನಲ್ಲಿ (Coffee ) ಕೂಲಿ ಕೆಲಸ ಮಾಡಿಕೊಂಡು ಕೂಲಿ ಲೈನ್‌ನಲ್ಲಿ ತಮಿಳುನಾಡು (Tamilnadu) ಮೂಲದ ಚೈತ್ರ ಮತ್ತು ಕಾಳಿ ಮುತ್ತು ವಾಸವಾಗಿದ್ದರು. ಈ ದಂಪತಿಗೆ 7 ಹೆಣ್ಣು, 4 ಗಂಡು ಒಟ್ಟು 11 ಮಕ್ಕಳು. ಕೇರಳಕ್ಕೆ ಹೋಗಿ ಇದೀಗ ತಾಯಿ ಮಡಿಲು ಸೇರಿದ ಅಂಜಲಿ 5ನೇ ಪುತ್ರಿ.

Tap to resize

Latest Videos

"

1999ರಲ್ಲಿ ಮುದ್ರೆಮನೆ ಪರಿಸರದಲ್ಲಿ  ಮರದ ದಿಮ್ಮಿಗಳನ್ನು ಎಳೆಯುತ್ತಿದ್ದ ಆನೆಯ ಕೆಲಸಗಾರನೊಂದಿಗೆ ಪರಿಚಯವಾಗಿ ಆತನೊಂದಿಗೆ ಕೇರಳದ (Kerala) ಕ್ಯಾಲಿಕೆಟ್‌ ಎಂಬಲ್ಲಿಗೆ ತನ್ನ ಪೋಷಕರಿಗೆ ತಿಳಿಸದೇ ಅಂಜಲಿ ತೆರಳಿದ್ದರು. ಕೇರಳಕ್ಕೆ ಕರೆದುಕೊಂಡು ಹೋದಾತ ಅಂಜಲಿ ಹೆಸರನ್ನು ಮಂಜು ಎಂದು ಬದಲಾಯಿಸಿದ್ದ. ಬಾಲಕಿಯನ್ನು 5 ವರ್ಷ ಮನೆಯಲ್ಲೇ ಇರಿಸಿಕೊಂಡ ಆತ ಬಳಿಕ ಕ್ಯಾಲಿಕೆಟ್‌ನ ಮುಕ್ಕಂ ಎಂಬಲ್ಲಿಯ ನೆಲ್ಮಣಿ ಶಾಜಿ ಎಂಬವರೊಂದಿಗೆ ಮದುವೆ ಮಾಡಿದ್ದಾನೆ. ಅಂಜಲಿ ಅವರಿಗೆ ಈಗ 2 ಹೆಣ್ಣು, 1 ಗಂಡು ಮಕ್ಕಳಿದೆ.

ಈಗ ತಂದೆ- ತಾಯಿಯನ್ನು (Mother  - Father ) ನೋಡಬೇಕು ಎನಿಸಿದೆ. ಅವರನ್ನು ನೋಡಲು ಮೂಡಿಗೆರೆಗೆ ಕರೆದುಕೊಂಡು ಹೋಗುವಂತೆ ಪತಿಯೊಂದಿಗೆ ಅಂಜಲಿ ಹೇಳಿದಾಗ ಆಕೆಯ ಗಂಡ (Husband)  ನೆಲ್ಮಣಿ ಶಾಜಿ ತನ್ನ ಮಂಗಳೂರಿನ (Mangaluru)  ಸ್ನೇಹಿತ ಮುಸ್ತಫಾ ಎಂಬುವವರನ್ನು ಸಂಪರ್ಕಿಸಿ ಮೂಡಿಗೆರೆ ತಾಲೂಕಿನ ಮುದ್ರೆಮನೆ ಎಸ್ಟೇಟಿನ ವಿಳಾಸ ಕೇಳಿದ್ದಾರೆ.

ಮುಸ್ತಫಾ ಅವರು ಮೂಡಿಗೆರೆ ಸಮಾಜ ಸೇವಕ ಫಿಶ್‌ ಮೋಣು ಅವರನ್ನು ಸಂಪರ್ಕಿಸಿ ವಿಳಾಸ ಪತ್ತೆಹಚ್ಚಿದ್ದಾರೆ. ಜ.3ರಂದು ದಂಪತಿ ಕ್ಯಾಲೆಕಟ್‌ನಿಂದ ಹೊರಟು ಜ.4ರ ಬೆಳಗ್ಗೆ ಮೂಡಿಗೆರೆ ಫಿಶ್‌ ಮೋಣು ಅವರನ್ನು ಭೇಟಿಯಾಗಿದ್ದಾರೆ. ಮುದ್ರೆಮನೆ ಎಸ್ಟೇಟ್‌ಗೆ (Estate)  ಸಂಪರ್ಕಿಸಿದಾಗ ಅಂಜಲಿ ಪೋಷಕರು ಅಲ್ಲಿರಲಿಲ್ಲ. ಬಳಿಕ ಲೋಕವಳ್ಳಿ ಗ್ರಾಮದ ಸ್ಟೀವನ್‌ ಸಿಕ್ವೆರಾ ಎಂಬುವರ ಕಾಫಿ (Coffee)  ತೋಟದಲ್ಲಿ ಅಂಜಲಿ ತಾಯಿ ಒಬ್ಬರೇ ಕೂಲಿ ಕೆಲಸ ಮಾಡಿ ಲೈನ್‌ನಲ್ಲಿ ವಾಸ ಇರುವುದನ್ನು ಪತ್ತೆಹಚ್ಚಿದ್ದಾರೆ.

ಅಂಜಲಿಯ ತಂದೆ ಕಾಳಿಮುತ್ತು 2017ರಲ್ಲಿ ಮೃತಪಟ್ಟಿದ್ದಾರೆ. ಚೈತ್ರ, ಕಾಳಿ ಮುತ್ತು ದಂಪತಿ ( ಎಲ್ಲ ಮಕ್ಕಳಿಗೆ ಮದುವೆಯಾಗಿ ಬೇರೆ ಬೇರೆ ಕಡೆ ವಾಸವಿದ್ದಾರೆ. ತೋಟದಲ್ಲಿ  ಕೆಲಸ ಮಾಡಿಕೊಂಡಿದ್ದ ತಾಯಿಯನ್ನು (Mother) ನೋಡಿದ ಪುತ್ರಿ ಅಳುತ್ತ ತಬ್ಬಿಕೊಂಡಾಗ ನೆರೆದಿದ್ದವರೆಲ್ಲಾ ಬೆರಗುಗೊಂಡಿದ್ದಾರೆ. ಒಂದು ದಿನ ತಾಯಿಯೊಂದಿಗಿದ್ದು (Mother) ತಾಯಿಯನ್ನು ಕರೆದುಕೊಂಡು ಕೇರಳಕ್ಕೆ ಹೋಗುವುದಾಗಿ ಅಂಜಲಿ ಪತ್ರಿಕೆಗೆ ತಿಳಿಸಿದ್ದಾರೆ.

ಈ ವೇಳೆ ಸಮಾಜ ಸೇವಕ ಫಿಶ್‌ ಮೋಣು, ಹಳೇ ಮೂಡಿಗೆರೆ (Mudigere) ಗ್ರಾ.ಪಂ.ಮಾಜಿ ಅಧ್ಯಕ್ಷ ಎಲ್‌.ಬಿ.ರಮೇಶ್‌, ದಾವುದ್‌ ಇದ್ದರು.

  •  22 ವರ್ಷ ಬಳಿಕ ಅಮ್ಮನ ಮಡಿಲು ಸೇರಿದ ಮಗಳು 
  •  ಮನೆ ಬಿಟ್ಟು ಹೋಗಿದ್ದಾಗ 9 ವರ್ಷ ವಯಸ್ಸು
  • ಮೂಡಿಗೆರೆ ತಾಲೂಕಿನಲ್ಲಿ ಹೃದಯಸ್ಪರ್ಶಿ ಘಟನೆ
click me!