
ಶಿವಮೊಗ್ಗ(ಅ.21) ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದಸರಾ ಕಳೆಗಟ್ಟಿದೆ. ಶಿವಮೊಗ್ಗದಲ್ಲಿ ಮೈಸೂರು ರೀತಿಯಲ್ಲೇ ದಸರಾ ಹಬ್ಬ ಆಚರಿಸಲಾಗುತ್ತದೆ. ಆದರೆ ಈ ಬಾರಿ ಅಂಬಾರಿ ಹೊತ್ತ ಆನೆ ದಿಕ್ಕಾಪಾಲಾಗಿ ಓಡಿದ ಪರಿಣಾಮ ಅವಘಡ ಸಂಭವಿಸಿದೆ. ಮೊಟ್ಟಮೊದಲ ಬಾರಿಗೆ ಚಾಮುಂಡೇಶ್ವರಿ ದೇಹ ದೇವಿಯ ವಿಗ್ರಹ ಹೊತ್ತಿದ್ದ ಸೋಮಣ್ಣ ಮೆರವಣಿಗೆಯಲ್ಲಿ ಬೆದರಿ ದಿಕ್ಕಾಪಾಲಾಗಿ ಓಡಿದೆ. ಆನೆ ಮೇಲಿದ್ದ ಅಂಬಾರಿ ಕೆಳಕ್ಕೆ ಬಿದ್ದರೆ, ಮಾವುತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾನೆ. ಇತ್ತ ಹಲವು ವಾಹನಗಳು ಜಖಂಗೊಂಡಿದೆ.
ಶಿವಮೊಗ್ಗದ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಶಾಸಕ ಚನ್ನಬಸಪ್ಪ ಶಿವಮೊಗ್ಗ ದಸರಾ ಅಂಬಾರಿಗೆ ಚಾಲನೆ ನೀಡಲಾಗಿತ್ತು. ಮೆರವಣಿಗೆಯಲ್ಲಿ ಸ್ವಲ್ಪ ದೂರ ಸಾಗಿದ ಅಂಬಾರಿ ಹೊತ್ತ ಆನೆ ಸೋಮಣ್ಣ ಭಯಗೊಂಡಿದೆ. ಒಂದೆಡೆ ಬ್ಯಾಂಡ್ ವಾದ್ಯ, ಮತ್ತೊಂದೆಡೆ ಕಿಕ್ಕಿರಿದು ಸೇರಿದ ಜನರನ್ನು ನೋಡಿ ಆನೆ ಬೆದರಿ ದಿಕ್ಕಪಾಲಾಗಿ ಓಡಿದೆ.
ಸೋಮಣ್ಣ ಆನೆ ಮೇಲೆ ದಸರಾ ಅಂಬಾರಿ ಕಟ್ಟಲಾಗಿತ್ತು. ಆದರೆ ದಿಕ್ಕಾಪಾಲಾಗಿ ಓಡುವ ವೇಳೆ ಅಂಬಾರಿ ಕೆಳಕ್ಕೆ ಬಿದ್ದಿದೆ. ಆನೆಯನ್ನು ನಿಯಂತ್ರಿಸಲು ಮಾವುತ ಹರಹಾಸ ಪಟ್ಟರೂ ಸಾಧ್ಯವಾಗಲಿಲ್ಲ. ಅಂಬಾರಿ ಕಳಚಿ ಬೀಳುತ್ತಿದ್ದಂತೆ ಆನ ಮೇಲಿದ್ದ ಮಾವುತ ಕೂಡ ಕೆಳಕ್ಕೆ ಬಿದ್ದಿದ್ದಾನೆ. ಇದರಿಂಕ ಮಾವುತನಿಗೂ ಗಾಯವಾಗಿದೆ.
ಈ ಬಾರಿ ಶಿವಮೊಗ್ಗ ದಸರಾ ಮೆರವಣಿಗೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಂಬಾರಿ ಹೊರುವ ಆನೆ ಬದಲಿಸಲಾಗಿತ್ತು. ಜೊತೆಗೆ ಹೆಣ್ಣಾನೆ ಕೂಡ ಇರಲಿಲ್ಲ. ಆರು ವರ್ಷದಿಂದ ಅಂಬಾರಿ ಹೊರುತ್ತಿದ್ದ ಕಿಂಗ್ ಸಾಗರ್ ಆನೆಯನ್ನು ಅಂಬಾರಿ ಹೊರುವ ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿತ್ತು. ಕಾಲು ನೋವಿನ ಕಾರಣದಿಂದ ಸಾಗರ್ ಆನೆ ಮೇಲೆ ಅಂಬಾರಿ ಹೊರಿಸಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಅರಣ್ಯ ಇಲಾಖೆ ನಿರ್ಧರಿಸಿತ್ತು. ಹೀಗಾಗಿ ಸಕ್ರಬೈಲು ಆನೆ ಶಿಬಿರದ ಸೋಮಣ್ಣ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಸೋಮಣ್ಣ ಆನೆ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಅಂಬಾರಿ ಹೊತ್ತ ಆನೆ ಭಯಗೊಂಡಿದೆ. ಇದರ ಪರಿಣಾಮ ದಿಕ್ಕಾಪಾಲಾಗಿದೆ ಓಡಿದೆ. ಮಾವುತ ಆನೆಯ ನಿಯಂತ್ರಿಸಲು ಪ್ರಯತ್ನ ಪಟ್ಟಿದ್ದಾನೆ. ಇತ್ತ ಸಿಬ್ಬಂದಿಗಳು ಆನೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಅಂಬಾರಿಯೂ ಕಳಚಿ ಬಿದ್ದಿದೆ.
ಶಿವಮೊಗ್ಗ ದಸರಾ ಅಂಬಾರಿ ನಾಲ್ಕನೇ ಬಾರಿ ಆನೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ.. 2019ರಲ್ಲಿ ಮೊದಲ ಬಾರಿಗೆ ಮೊಟಕಾಗಿತ್ತು. ಅಂಬಾರಿ ಹೊರಬೇಕಿದ್ದ ಸಾಗರ್ ಆನೆ ಅಸ್ವಸ್ಥಗೊಂಡಿತ್ತು. ಹಾಗಾಗಿ ಅಂಬಾರಿಯನ್ನು ಲಾರಿ ಮೇಲೆ ಮೆರವಣಿಗೆ ಮಾಡಲಾಗಿತ್ತು. ಇನ್ನು 2021ರಲ್ಲಿ ಕೋವಿಡ್ ಸೋಕಿಂ ಕಾರಣ ಆನೆಗಳಿಗೆ ತಾಲೀಮು ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆನೆ ಅಂಬಾರಿ ಹೊತ್ತಿರಲಿಲ್ಲ. 2023ರ ವಿಜಯದಶಮಿ ಹಿಂದಿನ ದಿನ ಕುಮ್ಕಿ ಆನೆ ನೇತ್ರಾವತಿ ಮರಿ ಹಾಕಿದ ಕಾರಣ ಆನೆ ಅಂಬಾರಿ ಇರಲಿಲ್ಲ. ಇದೀಗ ಸೋಮಣ್ಣ ಆನೆ ಭಯಗೊಂಡು ಪರಿಣಾಮ ಅಂಬಾರಿ ಕಳಚಿ ಬಿದ್ದ ಘಟನೆ ನಡೆದಿದೆ.