ದಸರಾ ಸಿಎಂ ಕಪ್‌ ಕ್ರೀಡಾಕೂಟ ಅವ್ಯವಸ್ಥೆ: ಕ್ರೀಡಾಪಟುಗಳು ಅನ್ನಕ್ಕೆ ಪರದಾಟ, ಖೋಖೋಗೆ ಬಂದಿದ್ದು ಒಂದೇ ತಂಡ!

Kannadaprabha News   | Kannada Prabha
Published : Sep 25, 2026, 08:16 AM IST
Huvinahadagali Dasara sports event

ಸಾರಾಂಶ

ಹೂವಿನಹಡಗಲಿಯಲ್ಲಿ ನಡೆದ ದಸರಾ ಸಿಎಂ ಕಪ್‌ ಕ್ರೀಡಾಕೂಟವು ತೀವ್ರ ಅವ್ಯವಸ್ಥೆಗಳಿಂದ ಕೂಡಿತ್ತು. ಕ್ರೀಡಾಪಟುಗಳಿಗೆ ಸರಿಯಾದ ಊಟ, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಪ್ರಚಾರದ ಕೊರತೆಯಿಂದಾಗಿ ಮಹಿಳಾ ಖೋಖೋ ಪಂದ್ಯಾವಳಿಗೆ ಬಂದಿದ್ದು ಕೇವಲ ಒಂದು ತಂಡ ಮಾತ್ರ!

ಹೂವಿನಹಡಗಲಿ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ದಸರಾ ಸಿಎಂ ಕಪ್‌ ಕ್ರೀಡಾಕೂಟವು ಹಲವು ಅವ್ಯವಸ್ಥೆಗಳ ಮಧ್ಯೆ ಜರುಗಿತು.

ಊಟಕ್ಕೆ ಪರದಾಡಿದ ಕ್ರೀಡಾಪಟುಗಳು

ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಕ್ರೀಡಾಪಟುಗಳಿಗೆ ಸಮರ್ಪಕವಾಗಿ ಊಟದ ವ್ಯವಸ್ಥೆ ಇರಲಿಲ್ಲ, ಅನ್ನಕ್ಕೆ ಕ್ರೀಡಾಪಟುಗಳು ಪರದಾಡಿದ ದೃಶ್ಯ ಸಾಮಾನ್ಯವಾಗಿತ್ತು. ಜತೆಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲದೇ, ಕೊಳವೆ ಬಾವಿಯ ನೀರನ್ನು ಟ್ಯಾಂಕರ್‌ನಲ್ಲಿ ಇರಿಸಲಾಗಿತ್ತು. ಕ್ರೀಡಾಪಟುಗಳು ವಿಧಿ ಇಲ್ಲದೇ ಅದೇ ಪ್ಲೋರೈಯುಕ್ತ ನೀರನ್ನು ಕುಡಿದರು. ಬುಧವಾರ ಬೆಳಗಿನಿಂದ ಬಹುತೇಕ ಗುಂಪು ಕ್ರೀಡೆಗಳು ಆರಂಭಗೊಂಡಿದ್ದವು, ಮಧ್ಯಾಹ್ನದ ಹೊತ್ತಿಗೆ ವೈಯಕ್ತಿಕ ಆಟಗಳು ಜರುಗಿದವು, ಸಂಜೆ ವೇಳೆಗೆ ಭಾರಿ ಮಳೆಯಿಂದ ಹಲವು ಕ್ರೀಡೆಗಳು ರದ್ದಾಗಿದ್ದವು, ಮತ್ತೆ ಗುರುವಾರ ಆರಂಭಿಸಲಾಗಿತ್ತು.

ಖೋಖೋ ಪಂದ್ಯಾವಳಿಗೆ ಆಟವಾಡಲು ಎದುರಾಳಿಯೇ ಇರಲಿಲ್ಲ!

ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಹೆಚ್ಚು ಪ್ರಚಾರವೇ ಇಲ್ಲದ ಕಾರಣ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಕನಸಿಗೆ ತಣ್ಣೀರು ಎರಚಿದಂತಾಗಿದೆ . ಜಿಲ್ಲಾಡಳಿತದಿಂದ ಸರಿಯಾಗಿ ಪ್ರಚಾರವೇ ಇಲ್ಲ ಎಂಬ ದೂರು ಕೇಳಿ ಬಂತು. ಆದರೂ ಕೆಲವು ಗುಂಪು ಕ್ರೀಡೆಗಳಲ್ಲಿ ಭಾಗವಹಿಸಲು ಯುವಕರು ಆಗಮಿಸಿದ್ದರು. ಕ್ರೀಡಾಕೂಟದ ಖೋಖೋ ಪಂದ್ಯಾವಳಿಗಳಿಗೆ ಮಹಿಳೆಯರ ವಿಭಾಗದಲ್ಲಿ ಏಕೈಕ ತಂಡ ಮಾತ್ರ ನೋಂದಣಿಯಾಗಿತ್ತು. ಇವರ ವಿರುದ್ಧ ಆಟವಾಡಲು ತಂಡ ಇಲ್ಲದೇ ನೇರವಾಗಿ ಜಿಲ್ಲಾ ಪದ್ಯಾವಳಿಗೆ ಆಯ್ಕೆಯಾಯಿತು.

ಬಯಲಲ್ಲೇ ಬಟ್ಟೆ ಬದಲಾಯಿಸಿದ ಕ್ರೀಡಾಪಟುಗಳು

ಕ್ರೀಡಾಪಟುಗಳು ಕ್ರೀಡೆಗೆ ಸಿದ್ದರಾಗಲು ಬಯಲಲ್ಲೇ ಬಟ್ಟೆ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯ ಎದುರಾಗಿತ್ತು. ಜತೆಗೆ ಶೌಚಾಲಯ ವ್ಯವಸ್ಥೆ ಕೂಡಾ ಇರಲಿಲ್ಲ.

ವಿವಿಧ ಕಡೆಗಳಿಂದ ವಾಲಿಬಾಲ್ 19 ತಂಡ, ಪುರುಷರ ಖೋಖೋ 9 ತಂಡ, ಕಬ್ಬಡಿ 7 ತಂಡ, ಥ್ರೋಬಾಲ್ 7 ತಂಡಗಳು ಭಾಗವಹಿಸಿದ್ದವು.

ಸಂಪರ್ಕಕ್ಕೆ ಸಿಗದ ಅಧಿಕಾರಿಗಳು

ದಸರಾ ಕ್ರೀಡಾಕೂಟದ ಅವ್ಯವಸ್ಥೆ ಕುರಿತು ಅಧಿಕಾರಿಗಳೇ ಸಂಪರ್ಕಕ್ಕೆ ಸಿಗಲಿಲ್ಲ, ಯುವ ಜನ ಸೇವಾ ಕ್ರೀಡಾ ಇಲಾಖೆಯಲ್ಲಿ ಈಜು ತರಬೇತಿದಾರ ರಾಮು ಕೊಟಗಿ ಇವರನ್ನು ಕಳಿಸಿದ್ದರು. ಅವರಿಗೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಏನು ಕೇಳಿದರೂ ನಮಗೆ ಗೊತ್ತಿಲ್ಲ ಎಂದು ಹೇಳಿದರು.

ದಸರಾ ಕ್ರೀಡಾಕೂಟಕ್ಕೆ ಸರ್ಕಾರ ಅನುದಾನ ನೀಡುತ್ತಿದ್ದರೂ ಈ ಯುವ ಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿಗಳು ಅವ್ಯವಸ್ಥೆ ಮಾಡಿದ್ದಾರೆ. ಊಟಕ್ಕೆ ಪರದಾಡುವ ಸ್ಥಿತಿ ಇತ್ತು. ಕೊಳವೆ ಬಾವಿಯ ನೀರನ್ನು ಕುಡಿಯಲು ಇಟ್ಟಿದ್ದಾರೆ. ಒಟ್ಟಾರೆ ಅವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಾರೆ ಕ್ರೀಡಾಪಟುಗಳು.

PREV
Read more Articles on
click me!

Recommended Stories

ಭಾನುವಾರವೂ ಬ್ಯಾಂಕ್ ಓಪನ್, ಕೆನರಾ ಬ್ಯಾಂಕ್‌ನಿಂದ ಗ್ರಾಹಕರಿಗೆ ಬಿಗ್ ಮೆಸೇಜ್
ರೈತರಿಗೆ ಗುಡ್‌ನ್ಯೂಸ್! ಬರ, ಕೀಟಬಾಧೆ ಎದುರಿಸಿ ಭರ್ಜರಿ ಇಳುವರಿ ನೀಡುವ 14 ಹೊಸ ತಳಿಗಳು, ಆ ಬೆಳೆಗಳ ಯಾವವು?