Mandya : ಹಾಳಾದ ರಸ್ತೆ: ಗ್ರಾಮಕ್ಕೆ ಬಸ್‌ ಸಂಚಾರವೇ ಇಲ್ಲ

By Kannadaprabha NewsFirst Published Nov 6, 2022, 10:53 AM IST
Highlights

ನಿರ್ಜನ ಪ್ರದೇಶಗಳಲ್ಲಿ ಕಾಮುಕರ ಹಾವಳಿ ಹೆಚ್ಚಾಗಿ ಬಾಲಕಿಯರ ಮೇಲೆ ಅತ್ಯಾಚಾರ, ಹತ್ಯೆಯಂತಹ ಅಮಾನುಷ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ, ಸ್ಥಳೀಯ ಆಡಳಿತಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ.ಅದಕ್ಕೆ ಸಾಕ್ಷಿ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಸ್ತೆ.

 ಮಂಡ್ಯ ಮಂಜುನಾಥ

 ಮಂಡ್ಯ (ನ.06):  ನಿರ್ಜನ ಪ್ರದೇಶಗಳಲ್ಲಿ ಕಾಮುಕರ ಹಾವಳಿ ಹೆಚ್ಚಾಗಿ ಬಾಲಕಿಯರ ಮೇಲೆ ಅತ್ಯಾಚಾರ, ಹತ್ಯೆಯಂತಹ ಅಮಾನುಷ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ, ಸ್ಥಳೀಯ ಆಡಳಿತಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ.ಅದಕ್ಕೆ ಸಾಕ್ಷಿ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಸ್ತೆ.

ರಾಗಿಮುದ್ದನಹಳ್ಳಿ ಗ್ರಾಮದಿಂದ ಜಕ್ಕನ ಹಳ್ಳಿಯವರೆಗಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಕ್ಕಸ ಗುಂಡಿಗಳಿರುವ ರಸ್ತೆಯಲ್ಲಿ ಸಂಚರಿಸಲಾಗದೆಗಳು (Bus)  ಊರ ಒಳಗೆ ತೆರಳುತ್ತಿಲ್ಲ. ಇದರಿಂದಾಗಿ ಗ್ರಾಮದ ಮಕ್ಕಳು ಜಕ್ಕನಹಳ್ಳಿಯವರೆಗೆ ನಡೆದುಕೊಂಡು ಬಂದು ಬಸ್‌ಗಳನ್ನು ಹತ್ತಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ನಿರ್ಜನ ಪ್ರದೇಶ: ರಾಗಿಮುದ್ದನಹಳ್ಳಿಯಿಂದ ಜಕ್ಕನಹಳ್ಳಿವರೆಗಿನ ರಸ್ತೆ ನಿರ್ಜನ ಪ್ರದೇಶವಾಗಿದೆ. ಇಲ್ಲಿ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ನಡೆದುಕೊಂಡು ಬರುವುದಕ್ಕೆ ಹೆದರುತ್ತಿದ್ದಾರೆ. ಇತ್ತೀಚೆಗೆ ಶೌಚಕ್ಕೆ ತೆರಳಿದ್ದ ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದ ಕಾಮುಕನೊಬ್ಬ ಅತ್ಯಾಚಾರವೆಸಗಿ ಹತ್ಯೆಗೈದಿರುವುದು, ಕೋಚಿಂಗ್‌ ಸೆಂಟರ್‌ನಲ್ಲಿ ಶಿಕ್ಷಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಗಳಿಂದ ಪೋಷಕರು ಭಯಗೊಂಡಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಮಾತಲ್ಲಿ ಹೇಳುವ ಸರ್ಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲಾ ಮಕ್ಕಳು ಒಬ್ಬಂಟಿಯಾಗಿ ಓಡಾಡದಂತೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದು ದುರಂತದ ಸಂಗತಿಯೇ ಸರಿ.

ಬೆಳಗ್ಗೆ ಮತ್ತು ಸಂಜೆ ಹೆಣ್ಣು ಮಕ್ಕಳು ಒಂದೂವರೆ ಕಿ.ಮೀ. ನಡೆದುಕೊಂಡು ಬರಬೇಕಿದೆ. ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯರು ನಡೆದು ಬರುವ ಸಮಯದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳಿದ್ದರೂ ಆ ಸೂಕ್ಷ್ಮತೆಯನ್ನು ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಅರಿತಿಲ್ಲ. ಅಮಾನುಷ ಕೃತ್ಯಗಳು ನಡೆಯುವುದಕ್ಕೆ ಮುನ್ನ ಎಚ್ಚೆತ್ತುಕೊಂಡು ಅದನ್ನು ತಡೆಯುವುದಕ್ಕೆ ಯಾರೂ ಕ್ರಮ ವಹಿಸುವುದಿಲ್ಲ. ಅವರೆಲ್ಲರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಾದರೆ ಏನಾದರೂ ದುರಂತಗಳು ನಡೆಯಲೇಬೇಕು. ಅಲ್ಲಿಯವರೆಗೆ ಸಮಸ್ಯೆಯ ಗಂಭೀರತೆ ಅರ್ಥವಾಗುವುದೇ ಇಲ್ಲ.

ರಸ್ತೆ ಯಾರಿಗೆ ಸೇರಿದೆಯೋ ಗೊತ್ತಿಲ್ಲ: ಹಾಳಾಗಿರುವ ರಸ್ತೆಯನ್ನು ದುರಸ್ತಿಪಡಿಸುವಂತೆ ಊರಿನ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ರಾಗಿಮುದ್ದನಹಳ್ಳಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಪಂಚಾಯಿತಿಗೂ ಸೇರಿಲ್ಲ, ಇತ್ತ ಲೋಕೋಪಯೋಗಿ ಇಲಾಖೆಗೂ ಸೇರದೆ ಅತಂತ್ರ ಸ್ಥಿತಿಯಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ರಾಗಿಮುದ್ದನಹಳ್ಳಿವರೆಗಿನ ಮೂರೂವರೆ ಕಿ.ಮೀ. ರಸ್ತೆ ಎಲ್ಲಿಂದ ಎಲ್ಲಿಯವರೆಗೆ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ, ನಂತರದ ರಸ್ತೆ ಯಾರಿಗೆ ಸೇರುತ್ತದೆ ಎಂಬ ಬಗ್ಗೆ ಸ್ಪಷ್ಟಮಾಹಿತಿಯನ್ನೇ ನೀಡುತ್ತಿಲ್ಲ. ಇದೇ ಕಾರಣಕ್ಕೆ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ.

ಬಸ್‌ ಸಂಚಾರ ಸ್ಥಗಿತ:

ರಸ್ತೆ ಸಂಪೂರ್ಣವಾಗಿ ಹಳ್ಳಗಳಿಂದ ಕೂಡಿ, ಹಲವೆಡೆ ಕಲ್ಲುಗಳಿಂದ ತುಂಬಿಕೊಂಡಿದೆ. ಮಳೆ ಬಿದ್ದರಂತೂ ಕೆಸರುಗದ್ದೆಯ ಸ್ವರೂಪ ತಾಳುತ್ತಿದೆ. ಇದರ ನಡುವೆ ಶಾಲಾ ಮಕ್ಕಳು ಹರಸಾಹಸಪಟ್ಟುಕೊಂಡು ರಸ್ತೆಯಲ್ಲಿ ಸಾಗುತ್ತಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಹಿಂದೆ ಸಾರಿಗೆ ಬಸ್ಸು ರಾಗಿಮುದ್ದನಹಳ್ಳಿವರೆಗೆ ಬರುತ್ತಿತ್ತು. ಒಂದು ತಿಂಗಳು ಸಂಚರಿಸಿದ ಬಸ್ಸು ನಂತರ ರಸ್ತೆ ಸರಿಯಿಲ್ಲವೆಂಬ ಕಾರಣಕ್ಕೆ ಊರಿನ ಕಡೆ ಮುಖ ಮಾಡಲೇ ಇಲ್ಲ. ಇದರಿಂದ ಶಾಲಾ ಮಕ್ಕಳು ನಡೆದುಕೊಂಡೇ ವ್ಯಾಸಂಗಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ.

ರಸ್ತೆಯ ವಿಚಾರದಲ್ಲಿ ಗೊಂದಲವಿದ್ದ ಕಾರಣದಿಂದ ಅಭಿವೃದ್ಧಿಯಾಗಿಲ್ಲ. ರಸ್ತೆ ಹಾದುಹೋಗಿರುವ ಎರಡೂ ಕಡೆಯ ಜಮೀನಿನವರಿಂದ ರಸ್ತೆ ಮಾಡುವುದಕ್ಕೆ ಯಾವುದೇ ತಕರಾರು ಇಲ್ಲವೆಂದು ಒಪ್ಪಿಗೆ ಪತ್ರ ಬರೆಸಿಕೊಟ್ಟರೆ ಅದನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿಕೊಂಡು ಅಭಿವೃದ್ಧಿಪಡಿಸುವುದಕ್ಕೆ ಅವಕಾಶವಿದೆ.

-ಕುಂಞ ಅಹಮದ್‌, ತಹಸೀಲ್ದಾರ್‌, ಮಂಡ್ಯ

ಶಾಲಾ ಮಕ್ಕಳು ನಿತ್ಯ ಒಂದೂವರೆ ಕಿ.ಮೀ. ನಡೆದುಕೊಂಡು ಹೋಗುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಕ್ಕಳ ಕಷ್ಟವೇ ಅರ್ಥವಾಗುತ್ತಿಲ್ಲ. ರಸ್ತೆ ಸರಿಯಿಲ್ಲ ವೆಂಬ ಕಾರಣಕ್ಕೆ ಊರೊಳಗೆ ಒಂದು ಬಸ್ಸೂ ಬರುತ್ತಿಲ್ಲ. ಗ್ರಾಮದ ರೈತರು ಹಾಗೂ ಜನರಿಗೂ ಇದರಿಂದ ತೊಂದರೆಯಾಗಿದೆ. ಶೀಘ್ರ ರಸ್ತೆ ಅಭಿವೃದ್ಧಿಪಡಿಸಲಿ.

- ವಿವೇಕ್‌, ರಾಗಿಮುದ್ದನಹಳ್ಳಿ

click me!