ಎಸ್ಸಿ, ಎಸ್ಟಿಜನಾಂಗ ರಾಜ್ಯ ಹಾಗೂ ದೇಶದಲ್ಲಿ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಆಳುವ ವರ್ಗದಲ್ಲಿ ಮುನ್ನಡೆಯಬೇಕು ಎಂದು ಮೈಸೂರು ಉರಿ ಲಿಂಗಪೆದ್ದ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.
ಚಿಕ್ಕಮಗಳೂರು (ಡಿ.4) : ಎಸ್ಸಿ, ಎಸ್ಟಿಜನಾಂಗ ರಾಜ್ಯ ಹಾಗೂ ದೇಶದಲ್ಲಿ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಆಳುವ ವರ್ಗದಲ್ಲಿ ಮುನ್ನಡೆಯಬೇಕು ಎಂದು ಮೈಸೂರು ಉರಿ ಲಿಂಗಪೆದ್ದ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಸ್ವಾಭಿಮಾನಿ ಎಸ್‌ಸಿ ಮತ್ತು ಎಸ್‌ಟಿ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಏರ್ಪಡಿಸಲಾಗಿದ್ದ ‘ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳು ಏಕೆ ಒಂದಾಗಬೇಕು’ ಎಂಬ ಒಂದು ಚರ್ಚೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ದೌರ್ಜನ್ಯ, ಶೋಷಣೆಯಿಂದ ಜನಾಂಗ ಬಳಲುತ್ತಿರುವುದರಿಂದ ಎಲ್ಲಾ ಮುಖಂಡರು ಒಟ್ಟಾಗುವ ಮೂಲಕ ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗದ ಹಾದಿಯಲ್ಲಿ ನಡೆದರೆ ಮಾತ್ರ ಜನಾಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಸಮಾಜದಲ್ಲಿ ಮುಂದೆ ಸಾಗಲು ಪ್ರತಿಯೊಬ್ಬರು ಶ್ರಮವಹಿಸಬೇಕು ಎಂದು ತಿಳಿಸಿದರು.
CHIKKAMAGALURU: ಕಾಫಿನಾಡು ವಿವಾದಿತ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ
ಎಸ್ಸಿ, ಎಸ್ಟಿಜನಾಂಗದವರು ಜೀವನದಲ್ಲಿ ಬಲಾಢÜ್ಯರೊಂದಿಗೆ ಪ್ರಶ್ನೆ ಮಾಡುವುದನ್ನು ಕಲಿಯದಿದ್ದರೆ ಜೀವಂತವಾಗಿ ಸಮಾಧಿಯಾದಂತೆ. ಆದ್ದರಿಂದ ಪ್ರಶ್ನೆ ಮಾಡುವುದನ್ನು ರೂಢಿಸಿ ಕೊಳ್ಳಬೇಕು. ಇಲ್ಲದಿದ್ದಲ್ಲಿ ಕೋಳಿ ಫಾರಂಗಳಲ್ಲಿ ಸಾಯುವ ರೀತಿಯಲ್ಲೇ, ಸ್ಲಂಗಳಲ್ಲಿ ಸಮುದಾಯದವರು ಸಾಯಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಜನಾಂಗದಲ್ಲಿ ಕೆಲವು ಮಂದಿ ಹರಿದ ಬಟ್ಟೆಗಳನ್ನು ಧರಿಸಿರುವುದು ದುಃಖವಾಗುತ್ತಿಲ್ಲ. ಸಂಘಟನೆಗಳು ಹರಿದು ಹೋಗುತ್ತಿರುವುದು ತೀವ್ರ ದುಃಖ ತಂದಿದೆ. ಆ ನಿಟ್ಟಿನಲ್ಲಿ ಸಂಘಟನೆಗಳು ಎಲ್ಲವು ಒಟ್ಟಾಗಿ ಸಮುದಾಯದ ಬೆಳವಣಿಗೆಗೆ ಪೂರಕವಾಗಿ ಒಂದಾಗಿದ್ದಲ್ಲಿ ಮಾತ್ರ ಸಮಾಜದ ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಎಸ್ಸಿ ಹಾಗೂ ಎಸ್ಟಿಸಮುದಾಯದವು ಪ್ರಸ್ತುತ ದಿನದಲ್ಲಿ ರಾಜಕೀಯ ಪ್ರಜ್ಞೆ ಹೊಂದಿರದಿದ್ದಲ್ಲಿ ಆಳುವ ವರ್ಗವು ಜನಾಂಗದವರಲ್ಲಿ ಆಸೆ, ಆಮಿಷಗಳನ್ನು ಮೆದುಳಿಗೆ ತುಂಬುತ್ತಾರೆ. ಇದರಿಂದ ಹೊರಬರಲು ಕೇವಲ ಅಂಬೇಡ್ಕರ್ ತೋರಿದ ಚಿಂತನೆಯನ್ನು ಪರಿಗಣಿಸಿದಾಗ ಮಾತ್ರ ಬೆಳವಣಿಗೆ ಸಾಧಿಸಲು ನೆರವಾಗಲಿದೆ ಎಂದು ತಿಳಿಸಿದರು.
ಸಮುದಾಯದಲ್ಲಿ ಮೌಢ್ಯ-ಕುಡಿತ ಎಂಬ ಎರಡು ಶತ್ರುಗಳಿವೆ ಅವುಗಳಿಂದ ಹೊರಬರಬೇಕು. ಗುಡಿ, ಗೋಪುರದಿಂದ ಮನುಷ್ಯನ ಜೀವನ ಎಂದಿಗೂ ಬದಲಾಗದು. ಆದರೆ ಅಂಬೇಡ್ಕರ್ ನೀಡಿರುವ ಸಂವಿಧಾನಗಳಿಂದ ಮಾತ್ರ ವೈಯಕ್ತಿಕ ಹಾಗೂ ರಾಜಕೀಯವಾಗಿ ಬದಲಾಗಬಹುದು. ಇದನ್ನು ಮನಗಂಡು ಮುಂದಿನ ಚುನಾವಣೆಯಲ್ಲಿ ಅಡಿಯಾಳಾಗುವ ಬದಲು ಜನಾಂಗದ ನಾಯಕನನ್ನು ಗುರುತಿಸಿ ಆಳುವ ವರ್ಗಕ್ಕೆ ಸೇರಿಸಬೇಕು ಎಂದು ಹೇಳಿದರು.
ಚಿತ್ರದುರ್ಗದ ಬೋವಿ ಸಮಾಜದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಮಾನವನಿಗೆ ದೈವದಿಂದ ಕೈ ಹಿಡಿಯಲು ಸಾಧ್ಯ ವಾಗದಿರಬಹುದು. ಆದರೆ ಅಂಬೇಡ್ಕರ್ ಸಂವಿಧಾನ ಖಂಡಿತ ಕೈಡಿಯಲಿದ್ದು, ಆಧುನಿಕ ಶಿಲ್ಪಿ ವಾಲ್ಮೀಕಿಯವರ ಮಾರ್ಗದರ್ಶನದಂತೆ ಜನಾಂಗ ಸಾಗಬೇಕಿದೆ ಎಂದರು.
ಅಂಬೇಡ್ಕರ್ ಅವರಿಗೆ ಅಂದು ಸ್ವಾತಂತ್ರ ದೊರಕಿರುವುದು ವೈಯಕ್ತಿಕವಾಗಿ ಖುಷಿ ತಂದಿರುವುದಿಲ್ಲ. ಕೇವಲ ಬ್ರಿಟಿಷರಿಂದ ಹಸ್ತಾಂತರವಾಗಿದ್ದಷ್ಟೇ ಎಂದಿದ್ದರು. ಇವೆಲ್ಲವುಗಳನ್ನು ಅರಿತು ಅಂಬೇಡ್ಕರ್ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಶೈಕ್ಷಣಿಕ, ರಾಜಕೀಯವಾಗಿ ಎಲ್ಲಾ ರಂಗಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ದೊರೆಯುವ ದಿನವೇ ದೇಶ ಸ್ವಾತಂತ್ರ$ವಾದಂತೆ ಎಂದು ಸಾರಿದ್ದರು ಎಂದು ತಿಳಿಸಿದರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ವೆಂಕಸ್ವಾಮಿ ಮಾತನಾಡಿ, ದೇಶಕ್ಕೆ ಸಂವಿಧಾನ ಕಲ್ಪಿಸಿದ ಅಂಬೇಡ್ಕರ್ ಅವರು ಡಿ.6 ರಂದು ಮೃತರಾಗಿದ್ದರು. ಅಂದಿನ ದಿನವನ್ನು ಜನಾಂಗದವರು ಸ್ಮರಿಸುವ ದಿನವನ್ನಾಗಿ ಮಾಡಬೇಕು. ಕೆಲವು ಕಿಡಿಕೇಡಿಗಳು ಯಾವುದೇ ಕುತಂತ್ರ ನಡೆಸಿದರೂ ಸಹ ಸ್ಮರಿಸುವ ಕಾರ್ಯ ನಿರಂತರವಾಗಿರಬೇಕು. ಸರ್ಕಾರ ಸಹ ಅಂಬೇಡ್ಕರ್ ಅವರ ಋುಣ ತೀರಿಸಲು ಸ್ಮರಣದಿನ ಆಚರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಬಿಎಸ್‌ಪಿ ರಾಜ್ಯ ಮುಖಂಡ ಗೋಪಿನಾಥ್ ಮಾತನಾಡಿ, ದೇಶದಲ್ಲಿ ಗಾಳಿ, ನೀರು ಎಲ್ಲೆಲ್ಲಿ ಇದೆಯೋ ಅದೇ ರೀತಿ ದಲಿತರಿಲ್ಲದ ಊರುಗಳಿಲ್ಲ. ಮುಂಬರುವ ದಿನಗಳಲ್ಲಿ ಎಸ್ಸಿ, ಎಸ್ಟಿಸೇರಿದಂತೆ ಅನೇಕ ಪಂಗಡಗಳು ಒಟ್ಟಾಗಿ ರಾಜ್ಯದಲ್ಲಿ ಜನಾಂಗದವರಿಲ್ಲದೇ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂಬಂತೆ ಸದೃಢತೆ ಮೂಡಿಸಿದಾಗ ಮಾತ್ರ ಆಳುವ ವರ್ಗಕ್ಕೆ ಸೇರ್ಪಡೆಯಾ ಗಲು ಸಾಧ್ಯ ಎಂದು ತಿಳಿಸಿದರು.
ದತ್ತಜಯಂತಿಗೆ ಜನರನ್ನು ಆಹ್ವಾನಿಸಲು ಸಂಘಪರಿವಾರದ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ
ಕಾರ್ಯಕ್ರಮದಲ್ಲಿ ಪ.ಜಾತಿ, ಪ.ಪಂಗಡಗಳ ಸ್ವಾಮೀಜಿಗಳಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶ್ರೀ ಬಸವನಾಗದೇವ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ, ಶ್ರೀ ಮಾದರಚೆನ್ನಯ್ಯ ಸ್ವಾಮೀಜಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ತಾಲೂಕು ಅಧ್ಯಕ್ಷ ಹರೀಶ್ ಮಿತ್ರ, ದಸಂಸ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಮರ್ಲೆ ಅಣ್ಣಯ್ಯ, ಎಸ್ಟಿಸಮಾಜದ ಜಿಲ್ಲಾಧ್ಯಕ್ಷ ಭೀಮಪ್ಪ, ಮುಖಂಡರಾದ ಜಗದೀಶ್ ಕೋಟೆ, ಹುಣಸೇಮಕ್ಕಿ ಲಕ್ಷ್ಮಣ್, ದಂಟರಮಕ್ಕಿ ಶ್ರೀನಿವಾಸ್, ಬಿಳೇಕಲ್ಲು ಬಾಲಕೃಷ್ಣ, ಚಂದ್ರಶೇಖರ್, ಯಲಗುಡಿಗೆ ಹೊನ್ನಪ್ಪ ಉಪಸ್ಥಿತರಿದ್ದರು.