
ಮಂಗಳೂರು (ಮಾ.18): ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಲ್ಲಿ ಹೆಚ್ಚು ಅಪಘಾತವಾಗಿರುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಪಘಾತ ರಹಿತ ಸ್ಥಳಗಳನ್ನಾಗಿಸಲು ಸೂಕ್ತ ಅಗತ್ಯ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಜತೆಗೆ ಅಪಘಾತ ವಲಯ ಪ್ರದೇಶವೆಂದು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಸೂಚನೆ ನೀಡಿದ್ದಾರೆ.
ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರಿ ದಟ್ಟಣೆ ಹೆಚ್ಚಾಗಿದೆ. ಅಲ್ಲದೆ, ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆ ಇರುವುದರಿಂದ ಅಪಘಾತ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ ಸಾರ್ವಜನಿಕರು ಸಂಚಾರಿ ಸುರಕ್ಷಿತ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.
ರಿಜಿಸ್ಟ್ರೇಶನ್ ಉಚಿತ, 25% ರೋಡ್ ಟ್ಯಾಕ್ಸ್ ಕಡಿತ; ವಾಹನ ಸ್ಕ್ರಾಪ್ ನೀತಿ ಪ್ರಕಟಿಸಿದ ಗಡ್ಕರಿ! ..
ಸೂಕ್ಷ ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಿ ವಾಹನದ ವೇಗದ ಮಿತಿಯನ್ನು ಕಂಡು ಹಿಡಿಯುವುದರೊಂದಿಗೆ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ದಂಡವಿಧಿಸಲು ಮುಂದಾಗಬೇಕು ಎಂದು ಎಸ್ಪಿ ಸೂಚಿಸಿದರು.
ಭಾರೀ ವಾಹನಗಳಿಗೆ ಸಮಯ ನಿಗದಿ: ನವ ಮಂಗಳೂರು ಬಂದರಿನಿಂದ ಪ್ರತಿದಿನ ಅಧಿಕ ಭಾರದ ವಾಹನಗಳು ಸಂಚರಿಸುತ್ತಿದ್ದು, ಇತರ ವಾಹನ ಸವಾರರಿಗೆ ಅಡ್ಡಿಯಾಗುವುದಲ್ಲದೆ ವಾಹನ ದಟ್ಟಣೆಯಾಗುತ್ತದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅವುಗಳ ಸಂಚಾರದ ಸಮಯವನ್ನು ನಿಗದಿಪಡಿಸಬೇಕು ಹಾಗೂ ಭಾರಿ ವಾಹನಗಳ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಒಳಗೆ ಹಾಗೂ ಗ್ರಾಮೀಣ ಭಾಗಕ್ಕೆ ಸಂಚರಿಸುವ ಖಾಸಗಿ ಹಾಗೂ ಕೆಸ್‌ಆರ್‌ಟಿಸಿ ಬಸ್‌ಗಳ ಅಪಘಾತ ಸಂಭವಿಸುತ್ತಿರುವುದು ಕಂಡುಬರುತ್ತಿದೆ. ಬಸ್‌ಗಳಲ್ಲಿ ಸರಿಯಾದ ವೇಗದ ಮಿತಿಯನ್ನು ಅಳವಡಿಸದೆ ಇರುವುದರಿಂದ ಅತಿ ವೇಗವಾಗಿ ಸಂಚರಿಸಿ ಅಪಘಾತಗಳು ನಡೆಯುತ್ತಿವೆ. ಇಂತಹ ಬಸ್ಸುಗಳ ಸಂಚಾರ ನಿಲ್ಲಿಸುವಂತೆ ಅಧಿಕಾರಿಗಳು ಕಾರ್ಯಪ್ರವೃತರಾಗಬೇಕು ಎಂದು ಎಸ್ಪಿ ಲಕ್ಷ್ಮೇ ಪ್ರಸಾದ್ ಸೂಚಿಸಿದರು.
ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವರ್ಣೇಕರ್, ಪುತ್ತೂರು ವಿಭಾಗೀಯ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಮಂಗಳೂರು ವಿಭಾಗೀಯ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಕಮಲ್ ಕುಮಾರ್ ಎಚ್.ಆರ್. ಮತ್ತಿತರರು ಇದ್ದರು.