
ದಕ್ಷಿಣ ಕನ್ನಡ: 77 ಪ್ರಾಯದ ತರುಣರೊಬ್ಬರು ತಾಲೂಕಿನ ಪ್ರವಾಸಿ ತಾಣ ನರಸಿಂಹ ಗಡ (ಗಡಾಯಿ ಕಲ್ಲು) ಏರಿ ಸೈ ಎನಿಸಿಕೊಂಡಿದ್ದಾರೆ. ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಅಬೂಬಕ್ಕರ್ ಇಳಿ ವಯಸ್ಸಿನಲ್ಲೂ 1800 ಮೆಟ್ಟಿಲುಗಳನ್ನು ಏರಿ ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಅವರು ಗಡಾಯಿಕಲ್ಲು ಬೆಟ್ಟವನ್ನು ಕೇವಲ 1 ಗಂಟೆ 20 ನಿಮಿಷಗಳಲ್ಲಿ ಏರುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 9 ಗಂಟೆಗೆ ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ, 1800 ಮೆಟ್ಟಿಲುಗಳ ಗಡಾಯಿಕಲ್ಲು ಏರುವ ಪಯಣ ಆರಂಭಿಸಿದ ಅಬೂಬಕ್ಕರ್ ಅವರು, ಸರಿಯಾಗಿ 10:20ರ ವೇಳೆಗೆ ಬೆಟ್ಟದ ತುದಿ ತಲುಪಿದರು. ಅವರ ಈ ಸಾಧನೆಯನ್ನು ಕಂಡ ಅಲ್ಲಿಗೆ ಆಗಮಿಸಿದ್ದ ಸ್ಥಳೀಯರು ಹಾಗೂ ಹೊರ ಊರಿನ ಪ್ರವಾಸಿಗರು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
ಶೇಖಬ್ಬ ಬ್ಯಾರಿ ಮತ್ತು ಬೀಫಾತಿಮಾ ದಂಪತಿಯ ಪುತ್ರ ಅಬೂಬಕ್ಕರ್ ಅವರು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿಡಿಗಲ್ ನಲ್ಲಿ ವಾಸವಾಗಿದ್ದಾರೆ. ಊರಿನ ಜನರಿಗೆ ಅವರು ಪ್ರೀತಿಯಿಂದ ‘ನಿಡಿಗಲ್ ಕಾಕಾ’ ಎಂದೇ ಚಿರಪರಿಚಿತರು. ಅಂಚೆ ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಗಿಟ್ಟಿಸಿಕೊಂಡ ಅವರು, ಅಂಚೆ ಇಲಾಖೆಯಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದರು.