ಅರಿವಿನ ಕೊರತೆಯಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಮೈಸೂರು : ಅರಿವಿನ ಕೊರತೆಯಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೈಬರ್ ಆರ್ಥಿಕ ಮತ್ತುಮ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ ಮತ್ತು ಮೈಸೂರು ವಿವಿ ಸಂಶೋಧಕರ ಸಂಘದ ಸಹಯೋಗದಲ್ಲಿ ನಡೆದ ಕುರಿತ ಸಂವಾದ, ಜಾಗೃತಿ ಗೀತೆ ಮತ್ತು ಸಾಕ್ಷ್ಯಚಿತ್ರ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಪರಾಧಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸೈಬರ್ ಅಪರಾಧ ನಡೆಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಅರಿವಿನ ಕೊರತೆ ಹೆಚ್ಚಾಗಿದೆ. ಈ ಅಪರಾಧಗಳ ಮೂಲಕ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಅನಕ್ಷರಸ್ಥರನ್ನು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧ ಮಾಡಲಾಗುತ್ತಿದೆ. ಆನ್‌ಲೈನ್ ಲಾಟರಿ, ಸಾಲ ಕೊಡುವುದು, ಹಣ ಡಬಲ್ ಮಾಡುವುದು, ಉಡುಗೊರೆ ಕೊಡುವುದು ಸೇರಿದಂತೆ ಅನೇಕ ವಾಮ ಮಾರ್ಗಗಳ ಮೂಲಕ ಸೈಬರ್ ಅಪರಾಧ ಹೆಚ್ಚಾಗುತ್ತಿದೆ ಎಂದರು.
ಆನ್‌ಲೈನ್ ವ್ಯವಹಾರ ಹೆಚ್ಚು ಪ್ರಚಲಿತವಾಗುತ್ತಿದ್ದಂತೆಯೇ ಅಷ್ಟೇ ಅಪಾಯವನ್ನು ತಂದೊಡ್ಡುತ್ತಿದೆ. ಮ್ಯಾಟ್ರಿಮೋನಿ ಮೂಲಕ ವಧುವರರನ್ನು ಪರಿಚಯಿಸುವುದು, ಆ ಮೂಲಕ ವೈಯಕ್ತಿಕ ವಿವರ ಪಡೆದು ಮೋಸಗೊಳಿಸಲಾಗುತ್ತಿದೆ. ಇಂತಹ ಪ್ರಕರಣವನ್ನು ನಮ್ಮ ಸೈಬರ್ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ ಎಂದು ಅವರು ತಿಳಿಸಿದರು.
ಆನ್‌ಲೈನ್ ಮೂಲಕ ವ್ಯವಹರಿಸುವಾಗ ಜಾಗರೂಕತೆಯಿಂದ ಇರಬೇಕು. ಅಪರಿಚಿತರಿಂದ ಬಂದ ಲಿಂಕ್‌ನ ಮೇಲೆ ಕ್ಲಿಕ್ ಮಾಡಬೇಡಿ. ಫೇಸ್‌ಬುಕ್, ವಾಟ್ಸ್‌ಆಪ್ ಗೀಳಿಗೆ ಬಿದ್ದ ಯುವಜನತೆ ಹನಿಟ್ರ್ಯಾಪ್‌ನಂತಹ ಜಾಲಕ್ಕೆ ಸಿಲುಕಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನೇ ಕೆಲವು ವಂಚಕರು ದುಡ್ಡು ಮಾಡುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ನಿಮ್ಮ ಬೆತ್ತಲೆ ಫೋಟೋ, ವೀಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.
ಇತ್ತೀಚೆಗೆ ಶಾಲಾ, ಕಾಲೇಜು ಆವರಣದಲ್ಲಿಯೇ ಮಾದಕ ವಸ್ತುಗಳು ಪತ್ತೆಯಾಗುತ್ತಿವೆ. ಈ ಸಂಬಂಧ ಮೈಸೂರಿನ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಪೋಷಕರಿಗೆ ಕೆಟ್ಟಹೆಸರು ತರುವಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬಾರದು ಎಂದರು.
ಎಸಿಪಿ ಎಂ.ಎನ್. ಶ್ರೀಧರ್, ಸಿಸಿಬಿ ವಿಭಾಗದ ಅಶ್ವಥ್ ನಾರಾಯಣ್, ಬಿ.ಎನ್. ಬಹದ್ದೂರ್ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಡಿ. ಆನಂದ್, ಸಂಶೊಧಕರ ಸಂಘದ ಅಧ್ಯಕ್ಷ ನಟರಾಜ ಶಿವಣ್ಣ ಮೊದಲಾದವರು ಇದ್ದರು.
ಜಾಗೃತಿ ಅಗತ್ಯ
ಮೈಸೂರು (ಜ. 07 ): ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್ ಕ್ರೈಂ ಇವುಗಳ ಬಗ್ಗೆ ಜಾಗೃತಿ ಹೊಂದುವುದು ಅತಿ ಅವಶ್ಯಕ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ಡಿವೈಎಸ್ಪಿ ಎಚ್.ಎಸ್.ರೇಣುಕಾರಾಧ್ಯ ತಿಳಿಸಿದರು.
ನಗರದ ಸರಸ್ವತಿಪುರಂನಲ್ಲಿರುವ ಟಿಟಿಎಲ್ ಕಾಲೇಜಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕವು ಆಯೋಜಿಸಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂದರು.
ಸೈಬರ್ ಕ್ರೈಂ ತಡೆಯುವ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಸಂಸ್ಥೆಗಳಲ್ಲೂ ಪ್ರತಿ ಕೆಲಸದಲ್ಲಿಯೂ ಕಂಪ್ಯೂಟರ್, ವಾಟ್ಸಪ್, ಪೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ. ಆದ್ದರಿಂದ ಈ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ಅವರು ಹೇಳಿದರು.
ಟಿಟಿಎಲ್ ಟ್ರಸ್ಟ್‌ನ ಆಡಳಿತ ಮತ್ತು ನಿಯೋಜನಾಧಿಕಾರಿ ಡಾ.ಬಿ.ವಿ. ಪ್ರಶಾಂತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಜಿ.ವಿ. ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಪದವಿ ಕಾಲೇಜು ಪ್ರಾಂಶುಪಾಲೆ ಎಸ್.ಆರ್. ಶಶಿಕಲಾ, ಪಿಯು ಕಾಲೇಜಿನ ಪ್ರಾಂಶುಪಾಲೆ ಎಸ್. ಬ್ರಹ್ಮರಂಬ, ರೆಡ್‌ಕ್ರಾಸ್ ಅಧಿಕಾರಿ ಗಿರೀಶ್ ಮೊದಲಾದವರು ಇದ್ದರು.