ಹುಬ್ಬಳ್ಳಿ: ಬಂದಷ್ಟೇ ವೇಗದಲ್ಲಿ ರೈಲ್ವೆ ನಿಲ್ದಾಣದಲ್ಲಿ ಮಣ್ಣಿನ ಕಪ್‌ ಮಾಯ!

By Kannadaprabha NewsFirst Published Jan 24, 2020, 7:28 AM IST
Highlights

ಮಣ್ಣಿನ ಕಪ್‌ನಲ್ಲಿ ಚಹಾ ನೀಡುವಂತೆ ಸೂಚಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವರು|ದರ ಹೆಚ್ಚಾಗುತ್ತೆ ಎಂದುಕೊಂಡು ಖರೀದಿ ಕೈಬಿಟ್ಟ ಕ್ಯಾಂಟೀನ್‌ ಮಾಲೀಕರು| ಕ್ಯಾಂಟೀನ್‌ ಮಾಲೀಕರು ಮಣ್ಣಿನ ಕಪ್‌ನಲ್ಲಿ ಚಹಾ ಪೂರೈಸಲು ಆಸಕ್ತಿ ತೋರುತ್ತಿಲ್ಲ|

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜ.24): ರೈಲ್ವೆ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಮಣ್ಣಿನ ಕಪ್‌ ಒಂದೂವರೆ ತಿಂಗಳಲ್ಲೇ ಮಾಯವಾಗಿ ಮತ್ತೆ ಪೇಪರ್‌ ಕಪ್‌ ಪ್ರತ್ಯಕ್ಷವಾಗಿವೆ. ಸಚಿವರ ಸೂಚನೆ, ಅಧಿಕಾರಿಗಳ ಆದೇಶ ಪಾಲಿಸದ ಕ್ಯಾಂಟೀನ್‌ಗಳ ಮಾಲೀಕರು ದರ ಹೆಚ್ಚಾಗುತ್ತೆ ಎಂದು ಮಣ್ಣಿನ ಕಪ್‌ ಬಳಕೆ ಕೈಬಿಟ್ಟಿದ್ದಾರೆ.

ಹುಬ್ಬಳ್ಳಿ: ಕುಂಬಾರಿಗೆ ಉದ್ಯೋಗ, ರೈಲ್ವೆ ಇಲಾಖೆಯಲ್ಲಿ ಮತ್ತೆ ಮಣ್ಣಿನ ಕಪ್

ಈ ಹಿಂದೆ ರೈಲ್ವೆ ಮಂತ್ರಿಯಾಗಿದ್ದ ಲಾಲೂಪ್ರಸಾದ ಯಾದವ್‌, ಬಜೆಟ್‌ನಲ್ಲಿ ಎಲ್ಲ ರೈಲ್ವೆ ನಿಲ್ದಾಣ, ರೈಲುಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ ಪೂರೈಕೆ ಮಾಡಬೇಕೆಂದು ಆದೇಶಿಸಿದ್ದರು. ಆದರೆ, ಅದು ಸ್ವಲ್ಪೕ ದಿನಗಳಲ್ಲಿ ವಿಫಲವಾಗಿತ್ತು. ಇದೀಗ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹುಬ್ಬಳ್ಳಿ ವಿಭಾಗದ ಎಲ್ಲ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಮಣ್ಣಿನ ಕಪ್‌ನಲ್ಲಿ ಚಹಾ ಪೂರೈಸುವಂತೆ ಸೂಚಿಸಿದ್ದರು. ಬಳಿಕ ದೇಶಾದ್ಯಂತ ಈ ಯೋಜನೆ ವಿಸ್ತರಿಸುವ ಯೋಚನೆ ಸಚಿವರದಾಗಿತ್ತು. ಈ ಸಲದ ಬಜೆಟ್‌ನಲ್ಲೂ ಘೋಷಿಸುವ ಸಾಧ್ಯತೆ ಇತ್ತು. ಆದರೆ, ಬಂದಷ್ಟೇ ವೇಗದಲ್ಲಿ ಕ್ಯಾಂಟೀನ್‌ಗಳಲ್ಲಿ ಮಣ್ಣಿನ ಕಪ್‌ ಮಾಯವಾಗಿದೆ.

ಸಚಿವರ ಸೂಚನೆ:

ಪ್ಲಾಸ್ಟಿಕ್‌ ಕಪ್‌ ಬ್ಯಾನ್‌ ಆಗಿದೆ. ಮಣ್ಣಿನ ಕಪ್‌ ಕ್ಯಾಂಟೀನ್‌ಗಳಲ್ಲಿ ಬಳಕೆ ಮಾಡಿದರೆ ಸ್ಥಳೀಯ ಕುಂಬಾರರಿಗೂ ಉದ್ಯೋಗ ಲಭಿಸುತ್ತದೆ ಎಂಬುದು ಸಚಿವರ ಉದ್ದೇಶವಾಗಿತ್ತು. ಸಚಿವರ ಸೂಚನೆಯಂತೆ ಅಧಿಕಾರಿಗಳು ಎಲ್ಲ ಕ್ಯಾಂಟೀನ್‌ ಮಾಲೀಕರ ಸಭೆ ನಡೆಸಿ ಗ್ರಾಹಕರಿಗೆ ಮಣ್ಣಿನ ಕಪ್‌ನಲ್ಲೇ ಚಹಾ ಪೂರೈಸುವಂತೆ ಸೂಚಿಸಿದ್ದರು. ಅದರಂತೆ ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಹೊಸಪೇಟೆ, ಕೊಪ್ಪಳ ಸೇರಿದಂತೆ ಈ ವಿಭಾಗದ ಎಲ್ಲ ನಿಲ್ದಾಣದ ಕ್ಯಾಂಟೀನ್‌ಗಳಿಗೆ ಮಣ್ಣಿನ ಕಪ್‌ ಪೂರೈಸಲಾಗಿತ್ತು. ಮಣ್ಣಿನ ಕಪ್‌ ತಯಾರಿಕೆಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂಗಪ್ಪ ಬಸಪ್ಪ ಕುಂಬಾರ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಈ ವರೆಗೆ 10 ಸಾವಿರ ಮಣ್ಣಿನ ಕಪ್‌ ಪೂರೈಕೆ ಮಾಡಿದ್ದಾರೆ.

ಮಾಲೀಕರ ನಿರಾಸಕ್ತಿ:

ಕ್ಯಾಂಟೀನ್‌ ಮಾಲೀಕರು ಮಣ್ಣಿನ ಕಪ್‌ನಲ್ಲಿ ಚಹಾ ಪೂರೈಸಲು ಆಸಕ್ತಿ ತೋರುತ್ತಿಲ್ಲ. ಆರಂಭದಲ್ಲಿ ಎಂಟ್ಹತ್ತು ದಿನ ಅವರೇ ಮಣ್ಣಿನ ಕಪ್‌ಗಳಲ್ಲಿ ಚಹಾ ಕುಡಿಯಲು ಪ್ರಯಾಣಿಕರಿಗೆ ಪ್ರೋತ್ಸಾಹಿಸುತ್ತಿದ್ದರು. ಮಣ್ಣಿನ ಕಪ್‌ಗಳಲ್ಲಿ ಚಹಾ ದೊರೆಯುತ್ತದೆ ಎಂಬ ನಾಮಫಲಕ ಕ್ಯಾಂಟೀನ್‌ ಹೊರಗೆ ಕಾಣಿಸುತ್ತಿತ್ತು. ಆದರೆ, ಇದೀಗ ಅದೆಲ್ಲ ಮಾಯವಾಗಿದೆ. ಗ್ರಾಹಕರೇ ಕೇಳಿದರೆ ‘ನಹಿ ಸಾಬ್‌ ಅಬ್‌ ನಹಿ ಮಿಲ್ತಾ.. ಅಬ್‌ ಸಿರಫ್‌ ಪೇಪರ್‌ ಕಪ್‌ ಮೇ ಚಾಯ್‌ ದೇತೇ ಹೈ ಹಮ್‌ ಲೋಗ್‌’ ಎಂದು ಹೇಳುತ್ತಾರೆ.

ಕಾರಣವೇನು?:

ಒಂದು ಮಣ್ಣಿನ ಕಪ್‌ಗೆ 2.50 ಇದ್ದರೆ ಪೇಪರ್‌ ಕಪ್‌ಗೆ 50 ಪೈಸೆ. ಮಣ್ಣಿನ ಕಪ್‌ಗಳಲ್ಲಿ ಪೂರೈಸಿದರೆ ಚಹಾ ದರ ಹೆಚ್ಚಿಸಬೇಕಾಗುತ್ತದೆ. ಆದರೆ ಏಕಾಏಕಿ ಚಹಾ ದರ ಏರಿಸಿದರೆ ಪ್ರಯಾಣಿಕರು ಆಕ್ಷೇಪಿಸುತ್ತಾರೆ. ಹೀಗಾಗಿ ಕ್ಯಾಂಟೀನ್‌ ಮಾಲೀಕರು ಪೇಪರ್‌ ಕಪ್‌ಗಳ ಮೊರೆ ಹೋಗಿದ್ದಾರೆ. ಹಾಗಂತ ಕ್ಯಾಂಟೀನ್‌ಗಳಲ್ಲಿ ಮಣ್ಣಿನ ಕಪ್‌ಗಳೇ ಇಲ್ಲ ಅಂತೇನೂ ಅಲ್ಲ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಖರೀದಿಸಿ ಮಣ್ಣಿನ ಕಪ್‌ ಹಾಗೆ ಇಟ್ಟಿದ್ದಾರೆ. ಅಧಿಕಾರಿಗಳು ವಿಚಾರಣೆ ಬಂದರೆ ತೋರಿಸಲು ಬೇಕಾಗುತ್ತೆ ಎಂಬ ಕಾರಣಕ್ಕೆ 400 ಮಣ್ಣಿನ ಕಪ್‌ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ಎಚ್ಚೆತ್ತುಕೊಳ್ಳಲಿ:

ಸಚಿವರು ಒಳ್ಳೆಯ ಉದ್ದೇಶದಿಂದ ಜಾರಿಗೆ ತಂದಿದ್ದ ಮಣ್ಣಿನ ಕಪ್‌ನಲ್ಲಿ ಚಹಾ ವಿತರಿಸುವ ಯೋಜನೆ ನೆಲಕಚ್ಚುವ ಸಾಧ್ಯತೆ ಇದೆ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕ್ಯಾಂಟೀನ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇದರೊಂದಿಗೆ ಸಾರ್ವಜನಿಕರು ಮಣ್ಣಿನ ಕಪ್‌ನಲ್ಲಿಯೇ ಚಹಾ ಕೊಡುವಂತೆ ಕೇಳಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಇದು ಯೋಜನೆ ಯಶಸ್ವಿಯಾಗುತ್ತದೆ ಎಂಬುದು ಸಾರ್ವಜನಿಕರ ಅಂಬೋಣ.
ಕಳೆದ ಎರಡು ತಿಂಗಳ ಹಿಂದೆ ಮಣ್ಣಿನ ಕಪ್‌ ಪೂರೈಕೆ ಮಾಡಲು ಹೇಳಿದ್ದರಿಂದ ಈ ವರೆಗೆ 10 ಸಾವಿರ ಕಪ್‌ ಪೂರೈಸಿದ್ದೇನೆ. ಹೆಚ್ಚಿಗೆ ಹೇಳಿದರೆ ಪೂರೈಸಲು ಸಿದ್ಧನಿದ್ದೇನೆ ಎಂದು ಸಂಗಪ್ಪ ಕುಂಬಾರ ಹೇಳಿದ್ದಾರೆ. 

ಕಳೆದ ತಿಂಗಳು ಹುಬ್ಬಳ್ಳಿ ನಿಲ್ದಾಣದಲ್ಲಿ ಚಹಾ ಕುಡಿದಾಗ ಮಣ್ಣಿನ ಕಪ್‌ನಲ್ಲಿ ಕೊಟ್ಟಿದ್ದರು. ಇದೀಗ ಪೇಪರ್‌ ಕಪ್‌ನಲ್ಲಿ ಕೊಡುತ್ತಿದ್ದಾರೆ. ಮಣ್ಣಿನ ಕಪ್‌ನಲ್ಲಿ ಕೊಡಿ ಎಂದರೆ, ಬಂದ್‌ ಆಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಒಂದೇ ತಿಂಗಳಲ್ಲೇ ಮಣ್ಣಿನ ಕಪ್‌ ಮಾಯವಾಗಿರುವುದು ಬೇಸರದ ಸಂಗತಿ ಎಂದು ಪ್ರಯಾಣಿಕ ಪ್ರಕಾಶಗೌಡ ಪಾಟೀಲ ಹೇಲಿದ್ದಾರೆ. 
 

click me!