
ಹಾವೇರಿ: ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಾದ ಬೆಳೆವಿಮೆ ಸರ್ವೆ ಪ್ರಕ್ರಿಯೆಯಲ್ಲಿ ವಿಮಾ ಕಂಪನಿಯ ಸಿಬ್ಬಂದಿಯ ಅಮಾನವೀಯ ಮತ್ತು ಉದ್ಧಟತನದ ವರ್ತನೆ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ಸಮೀಕ್ಷೆ ನಡೆಸಲು ಬಂದಿದ್ದ ವಿಮಾ ಕಂಪನಿಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಯೊಬ್ಬರ ಪ್ಯಾಂಟ್ ಕಳಚಿಟ್ಟು ನೀರಿನಲ್ಲಿ ನಿಲ್ಲಿಸಿ ಸರ್ವೆ ಮಾಡಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಚಳಗೇರಿ ಗ್ರಾಮದ ಜಮೀನುಗಳಲ್ಲೆಲ್ಲಾ ನೀರು ತುಂಬಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಈ ಕುರಿತು ಗ್ರಾಮ ಪಂಚಾಯತಿ ಸಿಬ್ಬಂದಿ ಈಗಾಗಲೇ ಪ್ರಾಥಮಿಕ ಪರಿಶೀಲನೆ ನಡೆಸಿ ಬೆಳೆ ಹಾನಿಯ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಿದ್ದರು. ಆದರೆ, ಬೆಳೆವಿಮೆ ನಷ್ಟ ಪರಿಹಾರದ ಅಂತಿಮ ಸಮೀಕ್ಷೆಗೆ ಆಗಮಿಸಿದ್ದ ವಿಮಾ ಕಂಪನಿಯ ಸಿಬ್ಬಂದಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ವರ್ತಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ವಿಮಾ ಸಿಬ್ಬಂದಿ ತಾವು ನೀರಿಗೆ ಇಳಿಯಲು ನಿರಾಕರಿಸಿದ್ದಲ್ಲದೆ, "ನಮ್ಮ ಎದುರೇ ನೀರಿಗಿಳಿದು ಸರ್ವೆ ಮಾಡಿ ತೋರಿಸಿ" ಎಂದು ಪಟ್ಟು ಹಿಡಿದರು. ಇದರಿಂದ ಅನಿವಾರ್ಯವಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಪಕ್ಕೀರಪ್ಪ ಯತ್ನಳ್ಳಿ ಅವರು ತಮ್ಮ ಪ್ಯಾಂಟ್ ಕಳಚಿಟ್ಟು, ಸೊಂಟಮಟ್ಟದ ನೀರಿನಲ್ಲಿ ನಿಂತು ಬೆಳೆ ಹಾನಿಯ ಸರ್ವೆ ಮಾಡಬೇಕಾಯಿತು. ಜಮೀನಿನ ಬದುವಿನ ಮೇಲೆ ನಿಂತು ವಿಮಾ ಕಂಪನಿಯ ಅಧಿಕಾರಿಗಳು ಈ ರೀತಿ ಅಮಾನವೀಯವಾಗಿ ನಡೆದುಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಆದೇಶ ಹಾಗೂ ಅಧಿಕೃತ ಸೂಚನೆಗಳನ್ನು ಪಾಲಿಸದೆ, ಸರ್ಕಾರಿ ನೌಕರರನ್ನೇ ಈ ರೀತಿ ನಿಂದನೀಯವಾಗಿ ನಡೆಸಿಕೊಂಡ ವಿಮಾ ಕಂಪನಿಯ ಸಿಬ್ಬಂದಿಯ ವೈಖರಿಯ ವಿರುದ್ಧ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಹಾಗೂ ರೈತ ಮುಖಂಡರು, ವಿಮಾ ಸಂಸ್ಥೆಯ ಉದ್ಧಟತನದ ಸರ್ವೆಯನ್ನು ರದ್ದುಗೊಳಿಸಿ, ಕೂಡಲೇ ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ನ್ಯಾಯಯುತವಾಗಿ 'ಮರು ಸರ್ವೆ' ನಡೆಸಬೇಕು. ಆ ಮೂಲಕ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಅರ್ಹ ರೈತರಿಗೂ ಬೆಳೆವಿಮೆ ಪರಿಹಾರ ಧನ ತಲುಪುವಂತೆ ಮಾಡಬೇಕೆಂದು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.