
ಸುಬ್ರಹ್ಮಣ್ಯ (ನ.06) ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮನೆಯಲ್ಲಿ ಮನಸ್ತಾಪಗಳು, ಬದಕಿನಲ್ಲಿ ನಡೆದ ಹಲವು ಘಟನೆಗಳಿಂದ ತೀವ್ರವಾಗಿ ಬೇಸರಗೊಂಡಿದ್ದ ಮಹಿಳೆ ಸಾಯಲು ನಿರ್ಧರಿಸಿದ್ದಳು. ಬದುಕು ಸಾಕಾಹಿ ಹೋಗಿದೆ ಎಂದು ಗಟ್ಟಿ ನಿರ್ಧಾರ ಮಾಡಿದ್ದಳು. ಎಲ್ಲಾ ಪ್ಲಾನ್ ಮಾಡಿಕೊಂಡ ಮಹಿಳೆ ರಾತ್ರಿ ವೇಳೆ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದಳು. ಆದರೆ ಮಹಿಳೆಯನ್ನು ಮೊಸಳೆ ಬದುಕಿಸಿದ ಘಟನೆ ನಡೆದಿದೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಹಿಳೆಗೆ ಮರು ಜೀವಕೊಟ್ಟ ಮೊಸಳೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ನವೆಂಬರ್ ನಾಲ್ಕರಂದು ಮಹಿಳೆ ಬದುಕಿನ ಕೊನೆಯ ದಿನಕ್ಕೆ ಸಜ್ಜಾಗಿದ್ದಳು. ಹಲವು ಕಾರಣಗಳಿಂದ ಮಹಿಳೆ ಈ ನಿರ್ಧಾರಕ್ಕೆ ಬಂದಿದ್ದಳು. ಬುಧವಾರ ರಾತ್ರಿಯಾಗುತ್ತಿದ್ದಂತೆ ಕುಕ್ಕೆ ಸುಬ್ರಹ್ಮಣ್ಯದ ಬಳಿ ಇರುವ ಕುಮಾರಧಾರ ಸೇತುವೆ ಬಳಿ ಆಗಮಿಸಿದ್ದಾಳೆ. ಪಕ್ಕದಲ್ಲೇ ಇರುವ ಸುಬ್ರಹ್ಮಣ್ಯ ದೇವರ ಧ್ಯಾನಿಸಿ ನದಿಗೆ ಹಾರಿದ್ದಾಳೆ. ತುಂಬಿ ಹರಿಯುತ್ತಿರುವ ಕುಮಾರಧಾರ ನದಿಗೆ ಹಾರಿದ ಬೆನ್ನಲ್ಲೇ ಅಲ್ಲೆ ಇದ್ದ ಮೊಸಳೆ ಮಹಿಳೆಯ ಮೇಲೆ ದಾಳಿಗೆ ಮುಂದಾಗಿದೆ.
ಮಹಿಳೆ ನೀರಿನಲ್ಲಿ ಮುಳುಗುತ್ತಿದ್ದಂತೆ ಮೊಸಳೆ ದಾಳಿ ಮಾಡಿದೆ. ಒಂದೆ ಮಹಿಳೆ ನದಿ ನೀರಿನಲ್ಲಿ ಕೊಚ್ಚಿ ಕೆಲ ದೂರ ಹೊಗುತ್ತಿದ್ದಂತೆ ಮತ್ತೊಂದೆಡೆ ಮೊಸಳೆ ದಾಳಿ ಮಾಡಿದೆ. ಮೊಸಳೆ ದಾಳಿಯಿಂದ ಭಯಗೊಂಡ ಮಹಿಳೆ ಕಿರುಚಾಡಿದ್ದಾಳೆ. ಕಾಪಾಡಲು ಮೊರೆ ಇಟ್ಟಿದ್ದಾಳೆ. ಮಹಿಳೆಯ ಕೂಗು ಕೇಳಿದ ಸ್ಥಳೀಯರು ಸೇತುವೆ ಬಳಿ ಆಗಮಿಸಿದ್ದಾರೆ. ಈ ವೇಳೆ ಮಹಿಳೆ ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುತ್ತಿರುವುದು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಮೊಸಳೆ ದಾಳಿ, ಇತ್ತ ನೀರಿನಲ್ಲಿ ಮುಳುಗು ಅಸ್ವಸ್ಥರಾಗಿದ್ದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮೊಸಳೆ ಕಡಿತ ಹಾಗೂ ಇತರ ಗಾಯಗಳಿಗೆ ಚಿಕಿತ್ಸೆ ನೀಡಿದ್ದಾರೆ. ರಾತ್ರಿ ಆಸ್ಪತ್ರೆಯಲ್ಲೇ ಕಳೆದ ಮಹಿಳೆ ಬೆಳಗ್ಗೆ ಬಿಡುಗಡೆಯಾಗಿದ್ದಾರೆ. ಬಳಿಕ ಮಹಿಳೆ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆಗೆ ಕೌನ್ಸಿಲಿಂಗ್ ಮಾಡಿದ ಪೊಲೀಸರು ಕುಟುಂಬಸ್ಥರ ವಶಕ್ಕೆನೀಡಿದ್ದಾರೆ. ಸದ್ಯ ಮಹಿಳೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಹಿಳೆ ಕುಟುಂಬಸ್ಥರ ಮನವಿ ಮೇರೆ ಪೊಲೀಸರು ಮಹಿಳೆಯ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಸಾಯಲು ಹೋದ ಮಹಿಳೆ ಮೊಸಳೆ ಕಂಡು ಭಯಭೀತಗೊಂಡು ಕಿರುಚಾಡಿದ ಕಾರಣ ಮಹಿಳೆಯ ಜೀವ ಉಳಿದಿದೆ. ಇದೀಗ ಮೊಸಳೆ ಮಹಿಳೆಯನ್ನು ಕಾಪಾಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ದೇವರೇ ಬಂದು ಮಹಿಳೆಯನ್ನು ಕಾಪಾಡಿದ್ದಾರೆ. ಸ್ಥಳೀಯರು ತುರ್ತು ಸಹಾಯಕ್ಕೆ ಬಂದ ಕಾರಣ ಮಹಿಳೆ ಜೀವ ಉಳಿದಿದೆ. ಈ ಕುರಿತು ಸ್ಥಳೀಯ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದೇ ವೇಳೆ ಸ್ಥಳೀಯರಲ್ಲಿ ಆತಂಕವೂ ಮನೆ ಮಾಡಿದೆ. ಕುಮಾರಧಾರ ನದಿಯಲ್ಲಿ ಮೊಸಳೆ ಇರುವಿಕೆ ಕುರಿತು ಯಾವುದೇ ಸುಳಿವು ಇರಲಿಲ್ಲ. ಸ್ಥಳೀಯರು ಇದೇ ನದಿಗೆ ಹಲವು ಬಾರಿ ಇಳಿದಿದ್ದಾರೆ. ಇದೀಗ ಮೊಸಳೆ ದಾಳಿಯಿಂದ ಆತಂಕ ಹೆಚ್ಚಾಗಿದೆ. ದೇವಸ್ಥಾನದ ಸುತ್ತ ಮುತ್ತ ಹೊರತುಪಡಿಸಿ ಇತರ ಕಾಡು ಪ್ರದೇಶಗಳಲ್ಲಿ ಯಾರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.