ಪಶ್ಚಿಮ ಘಟ್ಟತಪ್ಪಲಿನಲ್ಲಿ ಪ್ರವಾಹ ಆತಂಕ: ಚಾರ್ಮಾಡಿ ಘಾಟ್‌ ರಸ್ತೆಯಲ್ಲೇ ಬಿರುಕು

By Kannadaprabha NewsFirst Published Aug 8, 2020, 11:09 AM IST
Highlights

ದ.ಕ. ಜಿಲ್ಲೆಯಲ್ಲಿ ಸಾಕಷ್ಟುಮಳೆಯಾಗದಿದ್ದರೂ ಪಶ್ಚಿಮ ಘಟ್ಟಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಚಾರ್ಮಾಡಿ ಘಾಟಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಈ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಕಳೆದ ವರ್ಷ ಭೀಕರ ಪ್ರವಾಹದಿಂದ ನಲುಗಿದ ಬೆಳ್ತಂಗಡಿ ತಾಲೂಕಿನಲ್ಲಿ ನದಿಗಳೀಗ ಪ್ರವಾಹರೂಪಿಯಾಗಿದ್ದು, ಜನ ತೀವ್ರ ಆತಂಕಿತರಾಗಿದ್ದಾರೆ.

ಮಂಗಳೂರು(ಆ.08): ದ.ಕ. ಜಿಲ್ಲೆಯಲ್ಲಿ ಸಾಕಷ್ಟುಮಳೆಯಾಗದಿದ್ದರೂ ಪಶ್ಚಿಮ ಘಟ್ಟಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಚಾರ್ಮಾಡಿ ಘಾಟಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಈ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಕಳೆದ ವರ್ಷ ಭೀಕರ ಪ್ರವಾಹದಿಂದ ನಲುಗಿದ ಬೆಳ್ತಂಗಡಿ ತಾಲೂಕಿನಲ್ಲಿ ನದಿಗಳೀಗ ಪ್ರವಾಹರೂಪಿಯಾಗಿದ್ದು, ಜನ ತೀವ್ರ ಆತಂಕಿತರಾಗಿದ್ದಾರೆ.

ಬೆಳ್ತಂಗಡಿ ಮಾತ್ರವಲ್ಲದೆ ಜಿಲ್ಲೆಯ ಪ್ರಮುಖ ನದಿಗಳೆಲ್ಲವೂ ಗರಿಷ್ಠ ಮಿತಿಯಲ್ಲಿ ಹರಿಯುತ್ತಿವೆ. ಮಳೆ ಮುಂದುವರಿದರೆ ಪ್ರವಾಹದಿಂದ ಜನ, ಜಾನುವಾರು, ಬೆಳೆಗಳಿಗೆ ಅಪಾಯವಾಗುವ ಸಾಧ್ಯತೆ ಕಂಡುಬಂದಿದೆ.

 

ಚಾರ್ಮಾಡಿ ರಸ್ತೆ ಬಂದ್‌: ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಭೂಕುಸಿತ ತೀವ್ರಗೊಂಡಿದೆ. ಗುರುವಾರ ಕುಸಿದ ಮರ, ಮಣ್ಣನ್ನು ತೆರವುಗೊಳಿಸಲಾಗಿತ್ತು. ಆದರೆ ರಾತ್ರಿಯಿಂದ ಮತ್ತೆ ಅಲ್ಲಲ್ಲಿ ಮರಗಳ ಸಮೇತ ಗುಡ್ಡ ಜರಿದು ಬಿದ್ದಿತ್ತು. ತೆರವು ಕಾರ್ಯಾಚರಣೆ ನಿರಂತರವಾಗಿ ಮುಂದುವರಿದಿದೆ. ಈ ನಡುವೆ ಆಲೆಕಾನ್‌ ಪ್ರದೇಶದ ಹತ್ತಿರ ಘಾಟ್‌ ರಸ್ತೆ ಬಿರುಕು ಬಿಟ್ಟಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು- ಚಿಕ್ಕಮಗಳೂರು ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ.

ಇತ್ತ ಕುಮಾರಧಾರಾ ನದಿ ಕೂಡ ಗರಿಷ್ಠ ಮಟ್ಟದಲ್ಲಿ ಹರಿಯುತ್ತಿದೆ. ಇದರ ಫಲವಾಗಿ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟಶುಕ್ರವಾರವೂ ಮುಳುಗಡೆಯಾಗಿತ್ತು. ಸ್ನಾನಘಟ್ಟದ ಸಮೀಪವಿರುವ ಶೌಚಾಲಯಗಳು, ಸ್ನಾನಗೃಹಗಳು ಮತ್ತು ಸಾಮಾನು ಇರಿಸುವ ಕೋಣೆಗಳಿಗೆ ಕೂಡ ಪ್ರವಾಹದ ನೀರು ಪ್ರವೇಶಿಸಿದೆ. ಅಲ್ಲದೆ ಕುಮಾರಧಾರಾ ಪ್ರವಾಹದಿಂದಾಗಿ ತಗ್ಗು ಪ್ರದೇಶಗಳಲ್ಲಿನ ಹಲವಾರು ತೋಟಗಳು ಮತ್ತು ಭತ್ತದ ಗದ್ದೆಗಳು ಮುಳುಗಿವೆ.

 

ಬಿಸಿಲೆ ಘಾಟಿಯಲ್ಲೂ ಭೂಕುಸಿತ: ಇತ್ತ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಘಾಟ್‌ ರಸ್ತೆಯಲ್ಲೂ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ತೆರವು ಕಾರ್ಯಾಚರಣೆ ನಡೆದಿದೆ.

ಬಿರಿದ ಗುಡ್ಡ, 20 ಕುಟುಂಬ ಸ್ಥಳಾಂತರ: ಬೆಳ್ತಂಗಡಿಯ ಮಿತ್ತಬಾಗಿಲು ಗಣೇಶನಗರದ ಸಮೀಪದ ಗುಡ್ಡ ಕಳೆದ ವರ್ಷ ಬಿರುಕು ಬಿಟ್ಟಿತ್ತು. ಆಗಲೇ ಅಲ್ಲಿಗೆ ಭೇಟಿ ನೀಡಿದ್ದ ಭೂ ವಿಜ್ಞಾನಿಗಳು ಗಣೇಶನಗರ ಪ್ರದೇಶ ವಾಸಯೋಗ್ಯವಲ್ಲ ಎಂದು ಎಚ್ಚರಿಸಿದ್ದರು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ 20ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದರೂ ಸಾಕಷ್ಟುಮಳೆಯಾಗಿಲ್ಲ. ಮಧ್ಯಾಹ್ನದವರೆಗೆ ಮಂಗಳೂರು ಸೇರಿ ಅನೇಕ ಪ್ರದೇಶಗಳಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಶನಿವಾರದ ಬಳಿಕ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಆ.9 ಹಾಗೂ 10ರಂದು ಮತ್ತೆ ರೆಡ್‌ ಅಲರ್ಟ್‌ನ ಸೂಚನೆಯಿದೆ. ಮೀನುಗಾರರು ಹಾಗೂ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ನಾಲ್ಕು ಮನೆಗಳಿಗೆ ಹಾನಿ, ತಣ್ಣೀರು ಬಾವಿಯಲ್ಲೂ ಕಡಲ್ಕೊರೆತ

ಬಜಪೆ ಕೆಂಜಾರು ಹಾಗೂ ಸೋಮೇಶ್ವರದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಮಂಗಳೂರಿನ ತಣ್ಣೀರು ಬಾವಿಯ ಸಮೀಪ ಎಂಆರ್‌ಪಿಎಲ್‌ ಕಾಮಗಾರಿ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತದಿಂದ ಕಾಮಗಾರಿಗೆ ಬಂದ ಉತ್ತರ ಪ್ರದೇಶದ 18 ಮನೆಗಳ ಸುಮಾರು 60ಕ್ಕೂ ಅಧಿಕ ಮಂದಿಯನ್ನು ಕೂಳೂರು ಚಚ್‌ರ್‍ ಶಾಲೆಗೆ ಸ್ಥಳಾಂತರ ಮಾಡಿದ್ದು, ಅಲ್ಲಿಯೇ ಕಾಳಜಿ ಕೇಂದ್ರವನ್ನು ಮಾಡಲಾಗಿದೆ. ಜತೆಗೆ ಚಿತ್ರಾಪು, ಮೀನಕಳಿ, ಪಣಂಬೂರಿನಲ್ಲೂ ಕಡಲ್ಕೊರೆತ ಸಂಭವಿಸಿದ್ದು, ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.

click me!