* ಸಚಿವರು, ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಶರಣಪ್ರಕಾಶ ಪಾಟೀಲ್ ಆಗ್ರಹ
* ಜನಸಾಮಾನ್ಯರು ಮಾಡಿದ್ದರೆ ಸುಮ್ಮನಿರುತ್ತಿತ್ತಾ?
* ಕಲ್ಯಾಣ ನಾಡಿನ ರೈತರಲ್ಲರೂ ಕೇಂದ್ರದ ಕ್ರಮ ವಿರೋಧಿಸಬೇಕು
ಕಲಬುರಗಿ(ಆ.19): ಬಿಜೆಪಿ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಹೊರಟಿರುವ ಜನಾಶೀರ್ವಾದ ಯಾತ್ರೆಯಲ್ಲಿ ಗಡಿ ಜಿಲ್ಲೆ ಕಲಬುರಗಿಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಸುರಕ್ಷತೆಗಾಗಿ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ಸೇರಿದಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ. ಶರಣಪ್ರಕಾಶ ಪಾಟೀಲ್ ತಕ್ಷಣ ಜಿಲ್ಲಾಧಿಕಾರಿಗಳು ಸಚಿವರು, ಶಾಸಕರಾದಿಯಾಗಿ ಎಲ್ಲರ ವಿರುದ್ಧ ಸಾಂಕ್ರಾಮಿಕ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನಾಶೀರ್ವಾದ ಅಂತ ಹೊರಟಿದ್ದಾರೆ. ಜನ ಆಶೀರ್ವಾದ ಮಾಡಿ 3 ವರ್ಷ ಆಯ್ತು, ಈಗ ಸಾಧನೆ ಲೆಕ್ಕ ಕೊಡಬೇಕಾದ ಸಮಯ, ಈಗ ಮುಖ ತೋರಿಸುತ್ತಿದ್ದಾರೆ ಎಂದು ಬಿಜೆಪಿಗೆ ಲೇವಡಿ ಮಾಡಿದ ಅವರು ಕೋವಿಡ್ ಹೆಚ್ಚಾಗುವ ಭೀತಿ ಇರುವ ಜಿಲ್ಲೆಗೆ ಬರುವಾಗ ಸುರಕ್ಷತೆ ನಿಯಮಗಳ ಪಾಲನೆಯೂ ಮಾಡದೆ ಬೇಕಾಬಿಟ್ಟಿವರ್ತಿಸಿದ್ದಾರೆ. ನಿಯಮ ರೂಪಿಸುವವರೇ ಉಲ್ಲಂಘನೆ ಮಾಡಿದರೆ ಹೇಗೆ? ಜಿಲ್ಲಾಡಳಿತ ಯಾವುದೇ ಮುಲಾಜಿಗೆ ಒಳಗಾಗದೆ ಇವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದರು.
undefined
ರೈತ ವಿರೋಧಿ ಸರ್ಕಾರ
ಕೇಂದ್ರ ಸರ್ಕಾರ ಹೆಸರು ಹಾಗೂ ಉದ್ದು ರೈತರ ವಿರೋಧಿಯಾಗಿದೆ. ವಾಣಿಜ್ಯ ಇಲಾಖೆಯವರು ಇದುವರೆಗೂ ನಿಯಂತ್ರಣವಿದ್ದ ಉದ್ದು- ಹೆಸರಿನ ಆಮದನ್ನು ಇದೀಗ ಮುಕ್ತ ಮಾಡಿದ್ದಾರೆ. ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದಾರೆ. ಇದು ಬಡ ರೈತರಿಗೆ ಮಾರಕವಾಗಲಿದೆ ಎಂದು ದೂರಿದರು.
ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಕೊಡಲಿ: ಶರಣಪ್ರಕಾಶ ಪಾಟೀಲ
ಮೋದಿ ಸರ್ಕಾರಕ್ಕೆ ಬಡ ರೈತರು ಬೇಕಾಗಿಲ್ಲ, ಅದೇನಿದ್ದರೂ ಅದಾನಿ, ಅಂಬಾನಿ ಅವರಿಗೆ ಅನುಕೂಲ ಮಾಡುವುದೇ ಆಗಿದೆ. ಹೀಗಾಗಿ ಹೆಸರು, ಉದ್ದು ಆಮದು ಮುಕ್ತಗೊಳಿಸಲಾಗಿದೆ. ಇದುವರೆಗೂ ಇದ್ದಂತಹ ಎಲ್ಲಾ ನಿಯಂತ್ರಣಗಳನ್ನು ತೆಗೆದು ಹಾಕಿದ್ದಾರೆ. ಕಲ್ಯಾಣ ನಾಡಿನ ರೈತರಲ್ಲರೂ ಕೇಂದ್ರದ ಈ ಕ್ರಮ ವಿರೋಧಿಸಬೇಕು. ತೊಗರಿಗೂ ಮುಂದೆ ಈ ನಿಯಮ ಅನ್ವಯವಾಗುವ ಭೀತಿ ಇದೆ. ಈಗಲೇ ಎಚ್ಚೆತ್ತುಕೊಳ್ಳಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಸಾಸಕಿ ಕನೀಜ್ ಫಾತೀಮಾ, ವಿಜಯಕುಮಾರ್ ಜಿ ಇದ್ದರು.
ಜನಸಾಮಾನ್ಯರು ಮಾಡಿದ್ದರೆ ಸುಮ್ಮನಿರುತ್ತಿತ್ತಾ?
ಸಾಮಾನ್ಯ ಜನ ಹೀಗೆ ಮಾಡಿದ್ದರೆ ಜಿಲ್ಲಾಡಳಿತ ಸುಮ್ಮನಿರುತ್ತಿತ್ತಾ? ಸಾಮಾನ್ಯರಿಗೊಂದು ನಿಯಮ, ಮಂತ್ರಿ, ಶಾಸಕರಿಗೆ ಮತ್ತೊಂದು ನಿಯಮನಾ? ಇದೆಲ್ಲ ನಡೆಯೋದಿಲ್ಲ, ಪ್ಯಾಂಡೆಮಿಕ್ ನಿಯಂತ್ರಣ ಕಾಯಿದೆಯಡಿಯಲ್ಲಿ ಇವರ ಮೇಲೆ ಕೇಸ್ ಹಾಕಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಗಡಿ ಜಿಲ್ಲೆಯಲ್ಲಿ ಕೋವಿಡ್ ಕಠಿಣ ನಿಯಮಗಳು ಜಾರಿಗೊಂಡ ಕಾರಣವೇ ಕಾಂಗ್ರೆಸ್ ಪಕ್ಕದ ರಾಯಚೂರಲ್ಲಿ ತನ್ನ ವಿಭಾಗೀಯ ಸಭೆ ಸ್ಥಳಾಂತರ ಮಾಡಿತ್ತು. ನಾವು ನಿಮಯ ಪಾಲಿಸುವವರು, ಬಿಜೆಪಿಯವರಂತೆ ನಿಯಮ ಉಲ್ಲಂಘನೆ ಮಾಡೋರಲ್ಲ ಎಂದರು.