ತುಮಕೂರು : ಸೋಂಕಿತರ ಸಂಖ್ಯೆ ಈಗ ಅರ್ಧ ಲಕ್ಷ! ಲಸಿಕೆಗೂ ಕೊರತೆ

By Kannadaprabha NewsFirst Published May 5, 2021, 9:08 AM IST
Highlights

 ಕೊರೋನಾ ಎರಡನೇ ಅಲೆಯಲ್ಲಿ ತನ್ನ ಅಟ್ಟಹಾಸ ಮೆರೆದಿದ್ದು ದಿನವೊಂದಕ್ಕೆ 2 ಸಾವಿರ ಹೊಸ ಸೋಂಕಿತರಿಂದಾಗಿ ಈವರೆಗಿನ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 50 ಸಾವಿರ ದಾಟಿದೆ. 

ತುಮಕೂರು (ಮೇ.05):  ಮೊದಲ ಅಲೆಯಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ಎರಡನೇ ಅಲೆಯಲ್ಲಿ ತನ್ನ ಅಟ್ಟಹಾಸ ಮೆರೆದಿದ್ದು ದಿನವೊಂದಕ್ಕೆ 2 ಸಾವಿರ ಹೊಸ ಸೋಂಕಿತರಿಂದಾಗಿ ಈವರೆಗಿನ ಸೋಂಕಿತರ ಸಂಖ್ಯೆ 50 ಸಾವಿರ ದಾಟಿದೆ. ಅಲ್ಲದೆ, ಸಕ್ರಿಯ ಪ್ರಕರಣಗಳೇ 15 ಸಾವಿರದತ್ತ ಮುನ್ನುಗುತ್ತಿದ್ದು, ಸಾವಿನ ಸಂಖ್ಯೆ 550ರ ಗಡಿ ದಾಟಿದೆ.

ಕಳೆದ 10 ದಿವಸದಿಂದ ಜಿಲ್ಲೆಯಲ್ಲಿ ಕೊರೋನಾ ಬ್ರೇಕ್‌ ಫೇಲ್‌ ಆಗಿದ್ದು, ರಾಕೇಟ್‌ ವೇಗದಲ್ಲಿ ಮುನ್ನುಗ್ಗುತ್ತಿದೆ. ಒಂದು ಕಡೆ ಲಸಿಕೆ ಇಲ್ಲ, ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗುತ್ತಿಲ್ಲ , ಸೋಂಕಿತರಿಂದ ಜಿಲ್ಲೆ ತುಂಬಿ ಹೋಗಿದ್ದು ಬೆಡ್‌ಗಾಗಿ ಪರದಾಡುವಂತಾಗಿದೆ.

ಸಮಾಧಾನದ ಸಂಗತಿ ಎಂದರೆ ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಸಮಸ್ಯೆ ಉಂಟಾಗಿಲ್ಲ. ಸದ್ಯ ಜಿಲ್ಲೆಯಲ್ಲಿರುವ ಬೆಡ್‌ಗಳಿಗೆ 18.5 ಕಿ.ಲೀ. ಆಕ್ಸಿಜನ್‌ ಬೇಕಾಗುತ್ತದೆ. ಅಷ್ಟನ್ನು ಪೂರೈಸಲು ಜಿಲ್ಲೆ ಶಕ್ತವಾಗಿದೆ. ಒಂದು ವೇಳೆ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಿದರೆ ಈಗಿರುವ ಆಕ್ಸಿಜನ್‌ ಸಾಕಾಗುವುದಿಲ್ಲ. ಹೆಚ್ಚುವರಿ ಬೇಡಿಕೆಗೆ ಸರ್ಕಾರಕ್ಕೆ ಪತ್ರ ಬರೆಯಬೇಕಾಗಿದೆ.

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲೀಗ ಡಬಲ್‌ ಮ್ಯುಟೆಂಟ್‌ ವೈರಸ್‌ ಹಾವಳಿ!

ತಾಲೂಕುಗಳಲ್ಲೂ ಕೊರೋನಾ:  ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಹಾಗೂ ಗ್ರಾಮಗಳಲ್ಲೂ ಕೂಡ ಕೊರೋನಾ ನುಗ್ಗಿದ್ದು ಮುಂದಿನ ದಿನಗಳ ಮತ್ತಷ್ಟುಸೋಂಕಿತರು ಹೆಚ್ಚುವ ಅಪಾಯವಿದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಹೇಗೆ ಹೊಂದಿಸುವುದು ಎಂಬ ಆತಂಕದಲ್ಲಿ ಆರೋಗ್ಯ ಇಲಾಖೆ ಇದೆ.

ಸದ್ಯ ಎರಡು ಕಡೆ ಕೋವಿಡ್‌ ಸೆಂಟರ್‌ ಆರಂಭಿಸಿದ್ದು ಜಿಲ್ಲೆಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಿದೆ. ಈಗಾಗಲೇ ಸಿದ್ಧಗಂಗಾ ಮಠದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿದ್ದು 80 ಮಂದಿಗೆ ಚಿಕಿತ್ಸೆ ಮಾಡಲು ತೀರ್ಮಾನಿಸಲಾಗಿದೆ. ಈ ಕೋವಿಡ್‌ ಸೆಂಟರ್‌ನಲ್ಲಿ ಲಘು ಆಕ್ಸಿಜನ್‌ ಅನ್ನು ಪೂರೈಕೆ ಮಾಡಲಾಗುವುದು.

ಹೆಚ್ಚೆಚ್ಚು ಟೆಸ್ಟಿಂಗ್‌ ಮಾಡಲು ನಿರ್ಧಾರ:

ಉಳಿದಂತೆ ಜಿಲ್ಲೆಯಾದ್ಯಂತ ಹೆಚ್ಚೆಚ್ಚು ಕೊರೋನಾ ಟೆಸ್ಟಿಂಗ್‌ ಮಾಡಿಸಲು ನಿರ್ಧರಿಸಲಾಗಿದೆ. ತುಮಕೂರಿನ ಕೆಲ ವಾರ್ಡ್‌ಗಳಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ ಬೆನ್ನಲ್ಲೇ ಸಾವಿರಾರು ಮಂದಿ ಲಸಿಕೆ ಹಾಸಿಕಿಕೊಳ್ಳಲು ಎಡತಾಕುತ್ತಿದ್ದಾರೆ. ಆದರೆ ಲಸಿಕೆ ಮಾತ್ರ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಲಸಿಕೆ ಇಲ್ಲ ಎನ್ನುತ್ತಿದ್ದಾರೆ. ಎರಡನೇ ಬಾರಿ ಹಾಕಿಸಿಕೊಳ್ಳುವವರಿಗೆ ಮಾತ್ರ ಕೊಂಚ ಸ್ಟಾಕ್‌ ಇದೆ. ಹಾಗಾಗಿ ಮುಂದಿನ ವಾರ ಬನ್ನಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುತ್ತಿರುವುದು ಸಾಮಾನ್ಯವಾಗಿದೆ.

ತಾಲೂಕುಗಳಲ್ಲಿ 50 ಆಕ್ಸಿಜನ್‌ ಬೆಡ್‌ ಹಾಕಲು ಸಚಿವರ ಸೂಚನೆ:

ತುಮಕೂರಿನಲ್ಲಿ ಸೋಂಕಿತರಿಗೆ ತೊಂದರೆಯಾಗದ ಹಾಗೆ ತಾಲೂಕುಗಳಲ್ಲಿ 50 ಆಕ್ಸಿಜನ್‌ ಬೆಡ್‌ಗಳನ್ನು ಹಾಕುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೂ ಸೂಚಿಸಿದ್ದಾರೆ. ಕೊರೋನಾ ಕಟ್ಟಿಹಾಕಲು ಆರೋಗ್ಯ ಇಲಾಖೆ ಹರಸಾಹಸ ಮಾಡುತ್ತಿದ್ದಾರೆ. ಸೋಂಕಿತರು ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕೆಂದು ಸಚಿವರು ಸಂಬಂಧಪಟ್ಟಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈಗಾಗಲೇ ಪ್ರತಿ ತಾಲೂಕಿನಲ್ಲೂ ಸ್ಯಾನಿಟೈಸಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ಶಿರಾದಲ್ಲಿ ಖುದ್ದು ಶಾಸಕ ರಾಜೇಶಗೌಡ ಅವರೇ ಸ್ಯಾನಿಟೈಸಿಂಗ್‌ ಮಾಡಿ ಗಮನಸೆಳೆದಿದ್ದರು.

ಖಾಸಗಿ ಆಸ್ಪತ್ರೆಗಳಲ್ಲಿ ಸಿಲಿಂಡರ್‌ಗಳಿಗೆ ಹೆಚ್ಚಿದ ಬೇಡಿಕೆ

ಖಾಸಗಿ ಆಸ್ಪತ್ರೆಗಳಲ್ಲೂ ಸಿಲಿಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ಅದನ್ನು ಪೂರೈಸಲು ಗ್ಯಾಸ್‌ ರಿಫೀಲ್ಲಿಂಗ್‌ ಘಟಕದವರು ಕಷ್ಟಪಡಬೇಕಾಗಿದೆ. ಒಟ್ಟಾರೆಯಾಗಿ ಆಕ್ಸಿಜನ್‌ ಕೊರತೆಯಾಗದಂತೆ ಕ್ರಮ ವಹಿಸಬೇಕಾದ ತುರ್ತು ಅವಶ್ಯಕತೆಯಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ರೆಮ್‌ಡಿಸಿವರ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು 17 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಆರೋಪಿಗಳನ್ನು ಹಾಗೂ ಇಂಜಕ್ಷನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊರೋನಾ ತೀವ್ರ ಏರಿಕೆ ಬೆನ್ನಲ್ಲಿ ಇಂತಹ ಅಕ್ರಮಗಳನ್ನು ನಡೆಯುತ್ತಿರುವುದಕ್ಕೆ ಜನ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟುಬೇಗ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಿ ಮತ್ತೆ ದೈನಂದಿನ ಬದುಕು ಸಾಗುವಂತಾಗಲಿ ಎಂಬ ಆಶಾಭಾವನೆ ಜನರದ್ದಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!