ಜಿಮ್ಸ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಐಸಿಯೂ ಬೆಡ್ ಅರಸಿಕೊಂಡು ಆಸ್ಪತ್ರೆಗೆ ದಾಖಲಾಗಲು ಬಂದ 65 ವರ್ಷ ವಯೋಮಿತಿಯ ವೃದ್ಧನೋರ್ವನಿಗೆ ಬೆಡ್ ಸಿಗದೆ ಆತ ಮತ್ತೆ ಮನೆಗೆ ಮರಳಿದ ಘಟನೆ ನಡೆದಿದೆ
ಕಲಬುರಗಿ (ಏ.19): ಕೊರೋನಾ ಅಬ್ಬರ ಹೆಚ್ಚುತ್ತಿರುವ ಕಲಬುರಗಿಯಲ್ಲಿ ಬೆಡ್, ವೆಂಟಿಲೇಟರ್ ಕೊರತೆ ಶುರುವಾಗಿದ್ದು ರೋಗಿಗಳು ಪರದಾಡುವಂತಾಗಿದೆ. ಭಾನುವಾರ ಬೆಳಗ್ಗೆಯೇ ಇಲ್ಲಿನ ಜಿಮ್ಸ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಐಸಿಯೂ ಬೆಡ್ ಅರಸಿಕೊಂಡು ಆಸ್ಪತ್ರೆಗೆ ದಾಖಲಾಗಲು ಬಂದ 65 ವರ್ಷ ವಯೋಮಿತಿಯ ವೃದ್ಧನೋರ್ವನಿಗೆ ಬೆಡ್ ಸಿಗದೆ ಆತ ಮತ್ತೆ ಮನೆಗೆ ಮರಳಿದ ಘಟನೆ ನಡೆದಿದೆ.
ಆಟೋದಲ್ಲೇ ಕೃತಕ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯೊಂದಿಗೆ ಬಂದಿದ್ದ ವಯೋವೃದ್ಧ ಆಟೋದಲ್ಲೇ 3 ಗಂಟೆ ಕಾದರೂ ಜಿಮ್ಸ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಐಸಿಯೂ ಬೆಡ್ ಸಿಗಲೇ ಇಲ್ಲ, ಬೆಡ್ ಭರ್ತಿಯಾಗಿರುವ ವಿಚಾರ ತಿಳಿದಾಗ ಈ ರೋಗಿಗೆ ಅಲ್ಲಿಂದ ಪುನಃ ಮನೆಗೇ ಕರೆದೊಯ್ಯಲಾಯ್ತು. ಕೆಮ್ಮು- ದಮ್ಮು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವಯೋವೃದ್ಧನನ್ನು ಕರೆದುಕೊಂಡು ಆತನ ಸಹಾಯಕರು ಆಟೋದಲ್ಲೇ ಆಸ್ಪತ್ರೆ ಆಸ್ಪತ್ರೆ ಅಲೆಯುವಂತಾಯ್ತು.
ರಾಜ್ಯದಲ್ಲಿ ದಾಖಲೆ ಕೊರೋನಾ ಕೇಸ್ : ಸಾವಿನ ಸಂಖ್ಯೆಯಲ್ಲಿಯೂ ಭಾರೀ ಏರಿಕೆ .
ತನ್ನ ತಂದೆಯನ್ನ ಹೀಗೆ ಐಸಿಯೂ ಬೆಡ್‌ಗಾಗಿ ಆಟೋದಲ್ಲೇ ಕುಳ್ಳಿರಿಸಿಕೊಂಡು ನಗರವೆಲ್ಲ ಅಲೆಯುವಂತಾಗಿದ್ದು ದುರಂತ. ಕಳೆದೆರಡು ದಿನದಿಂದ ಉಸಿರಾಟ ತೊಂದರೆ ಕಾಡುತ್ತಿದೆ ತಂದೆಗೆ, ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲವಂದು ಮಗಳು ಕಣ್ಣೀರು ಹಾಕಿದಳು. ಬೆಡ್ ಇಲ್ಲವೆಂದ ಮೇಲೆ ನಮ್ಮಂತಹ ಬಡವರು ಹೋಗಬೇಕೆಲ್ಲಿ? ಖಾಸಗಿ ಆಸತ್ರೆಗಳ ದುಡ್ಡು ನಾವು ಕೊಡಲು ಸಾದ್ಯವೆ? ಎಂದು ಮಗಳು ಅಸ್ತಮಾ, ಉಸಿರಾಟ ತೊಂದರೆಯ ತಂದೆಯೊಂದಿಗೆ ಆಟೋದಲ್ಲೇ ಮನೆಗೆ ತೆರಳಿದಳು.
ಖಾಸಗಿ ಆಸ್ಪತ್ರೆ ಸಿಬ್ಬಂದಿ ಜಗಳ: ಕೊರೋನಾ ಸೋಂಕಿತೆ ವಯೋವೃದ್ಧೆ ಜೊತೆಗೇ ಆಸ್ಪತ್ರೆ ಸಿಬ್ಬಂದಿ ಜಗಳ ಮಾಡಿದ ಘಟನೆ ಇಲ್ಲಿನ ವಾತ್ಸಲ್ಯ ಆಸ್ಪತ್ರೆಯಲ್ಲಿ ನಡೆದಿದೆ. ಸೋಂಕಿತೆಗೆ ಉಸಿರಾಟ ತೊಂದರೆಕಂಡಿದಾಗ ಸಹಾಯಕರು ಐಸಿಯೂ ವೆಂಟಿಲೇಟರ್ ಬೆಡ್ ಕೇಳಿದ್ದಾರೆ. ಒಂದೆರಡು ಗಂಟೆಯಲ್ಲೇ ಬೆಡ್ ಒದಗಿಸೋದಾಗಿ ಹೇಲಿದ ಆಸ್ಪತ್ರೆ ಸಿಬ್ಬಂದಿ ಅದನ್ನ ಅನ್ಯರಿಗೆ ತಕೊಟ್ಟು ಬೆಡ್ ಇಲ್ಲವೆಂದಾಗ ಸಹಾಯಕರು ಕೆರಳಿದ್ದಾರೆ, ಆಗ ಸಿಬ್ಬಂದಿ ಪೊಲೀಸ್ ಸಿಬ್ಬಂದಿಯೊಬ್ಬರಿಂದ ಧಮಕಿ ಹಾಕಿಸಿದ್ದಾರೆಂದು ರೋಗಿಯ ಸಹಾಯಕರು ದೂರಿದ್ದಾರೆ. ಐಸಿಯೂ ಬೆಡ್ ಇರೋ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಅದಕ್ಕೂ ಅವಕಾಶ ನಿಡದಂತೆ ಏನೇನೋ ಕಾರಣ ಹೇಳುತ್ತ ಸಿಬ್ಬಂದಿ ತಡೆದು ರಂಪಾಟ ಮಾಡಿದ್ದಾರೆ. ಇದರಿಂದ ನಮಗೆಲ್ಲ ಭೀತಿ ಕಾಡಿತ್ತು ಎಂದು ಸೋಂಕಿತೆಯ ಪೋಷಕರು ಗೋಳಾಡಿದ್ದಾರೆ.