* ಉಸಿರಾಟದ ಸಮಸ್ಯೆಯಿಂದ ಮಧ್ಯರಾತ್ರಿ ಕೋವಿಡ್ ಆಸ್ಪತ್ರೆಗೆ ಬಂದಿದ್ದ ಮಹಿಳೆ
* ಕೋವಿಡ್ ಟೆಸ್ಟ್ ಆಗದಿರುವುದರಿಂದ ದಾಖಲಾತಿಗೆ ಮೀನಾಮೇಷ
* ಬೆಡ್ ಖಾಲಿ ಇಲ್ಲದಿರುವಾಗ ಎಲ್ಲಿ ಆಡ್ಮಿಟ್ ಮಾಡಿಕೊಳ್ಳುವುದು ಎಂದ ವೈದ್ಯರು
ಕೊಪ್ಪಳ(ಮೇ.13): ದಿನೇ ದಿನೆ ಕೊರೋನಾಕ್ಕೆ ತುತ್ತಾಗಿ, ಚಿಕಿತ್ಸೆ ಸಿಗದೆ ಪರದಾಡುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಮಂಗಳವಾರ ತಡರಾತ್ರಿ ಜಿಲ್ಲಾಸ್ಪತ್ರೆಯ ಅಂಗಳದಲ್ಲಿಯೇ 35 ವರ್ಷದ ಮಹಿಳೆಯೊಬ್ಬರು ಬೆಡ್ ಸಿಗದೆ ಅಸುನೀಗಿದ್ದಾರೆ. ಹಿರೇಸಿಂದೋಗಿ ಗ್ರಾಮದ ರೇಣುಕಾ ಹನುಮಂತಪ್ಪ ಬಾರಕೇರ ಮೃತಪಟ್ಟ ದುರ್ದೈವಿ.
undefined
ಇವರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಮನೆಯಲ್ಲಿಯೇ ಖಾಸಗಿಯಾಗಿ ಚಿಕಿತ್ಸೆ ಪಡೆದಿದ್ದ ಅವರು ಕೊರೋನಾ ಟೆಸ್ಟ್ ಮಾಡಿಸಿರಲಿಲ್ಲ. ತಡರಾತ್ರಿಯಲ್ಲಿ ತೀವ್ರ ಸಮಸ್ಯೆಯಾಗಿದ್ದರಿಂದ ಕಾರಿನಲ್ಲಿ ಕರೆದುಕೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡುವ ಪ್ರಯತ್ನ ಮಾಡಲಾಯಿತು. ಕೋವಿಡ್ ಟೆಸ್ಟ್ ವರದಿ ಇರದೆ ಕೋವಿಡ್ ಆಸ್ಪತ್ರೆಯಲ್ಲಿ ನೇರವಾಗಿ ದಾಖಲು ಮಾಡಿಕೊಳ್ಳಲು ಅವಕಾಶ ಇಲ್ಲ. ಆದರೂ ವೈದ್ಯರು ಕಾರಿನಲ್ಲಿಯೇ ಆಕೆಯ ಕೊರೋನಾ ಟೆಸ್ಟ್ ಮಾಡಿದರು. ಪಾಸಿಟಿವ್ ವರದಿಯೂ ಬಂತು. ಆದರೆ, ಆ ವೇಳೆಗಾಗಲೇ ಅವರು ನಿತ್ರಾಣ ಸ್ಥಿತಿ ತಲುಪಿದ್ದರು. ಆಕ್ಸಿಜನ್ ಬೆಡ್ ಸಹ ಇಲ್ಲ. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಯ ಸಂಬಂಧಿಕರ ನಡುವೆ ವಾಗ್ವಾದ ನಡೆಯಿತು.
ಹೀಗೆ ವಾಗ್ವಾದ ನಡೆಯುತ್ತಿರುವ ವೇಳೆಯಲ್ಲಿಯೇ ರೇಣುಕಾ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯ ಅಂಗಳದಲ್ಲಿಯೇ ಪ್ರಾಣಬಿಟ್ಟರು. ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೋಗಿಯ ಸಂಬಂಧಿಕರು, ವಿಧಿಯಿಲ್ಲದೆ ಶವವನ್ನು ಮನೆಗೆ ತೆಗೆದುಕೊಂಡು ಹೋದರು.
ಕೊಪ್ಪಳ: ಬೆಡ್‌ಗಾಗಿ ಕೊರೋನಾ ರೋಗಿಗಳ ಅರಣ್ಯರೋದನ
ಬೇಗನೇ ಚಿಕಿತ್ಸೆಗೆ ಬನ್ನಿ:
ಕೋವಿಡ್ ಲಕ್ಷಣ ಕಂಡ ತಕ್ಷಣ ತುರ್ತಾಗಿ ಚಿಕಿತ್ಸೆಯನ್ನು ಪಡೆದರೆ ಈ ಸಮಸ್ಯೆಯೇ ಬರುವುದಿಲ್ಲ. ಗಂಭೀರವಾದ ಮೇಲೆಯೇ ಆಸ್ಪತ್ರೆಗೆ ಬರುವುದರಿಂದ ಎಲ್ಲರಿಗೂ ಆಕ್ಸಿಜನ್ ಬೆಡ್ ಒದಗಿಸುವುದು ಹೇಗೆ ಸಾಧ್ಯ? ಎಂದು ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona