ಬೆಳಗಾವಿ (ಸೆ.21): ಸರ್ಕಾರದ ಮಾರ್ಗಸೂಚಿ ಪ್ರಕಾರ ಮಹಾರಾಷ್ಟ್ರದಿಂದ ರಾಜ್ಯದ ಗಡಿಪ್ರವೇಶಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಜಿಲ್ಲೆಯ ಮಂಗಸುಳಿ, ಕುಗನೊಳ್ಳಿ ಹಾಗೂ ಕಾಗವಾಡ ಚೆಕ್‌ಪೋಸ್ಟ್‌ಗಳಿಗೆ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿದಂತೆ ಅಲ್ಲಿ ನಿಯೋಜಿತ ಅಧಿಕಾರಿಗಳು ಹಾಗೂ ತಂಡಗಳ ಸಿಬ್ಬಂದಿ ಜತೆ ಚರ್ಚೆ ನಡೆಸಿದರು. ನೆರೆಯ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದ ಗಡಿಯಲ್ಲಿ ವಿಶೇಷ ಸರ್ವೇಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಕರು 72 ಗಂಟೆ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ನೆಗೆಟಿವ್ ಹೊಂದಿರುವುದು ಕಡ್ಡಾಯವಾಗಿದೆ.
ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಸುಪ್ರೀಂ ಸಲಹೆ!
ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ನೆರೆಯ ರಾಜ್ಯದಿಂದ ಬಸ ಮೂಲಕ ಆಗಮಿಸುವ ಪ್ರಯಾಣಿಕರ ಕೋವಿಡ ಪರೀಕ್ಷಾ ವರದಿಯನ್ನು ಆಯಾ ಬಸ್‌ಗಳ ನಿರ್ವಾಹಕರು ಪರಿಶೀಲಿಸಬೇಕು. ಖಾಸಗಿ ವಾಹನಗಳ ಮೂಲಕ ಆಗಮಿಸುವ ಎಲ್ಲ ವಾಹನಗಳನ್ನು ಗಡಿಭಾಗದಲ್ಲಿ ಸ್ಥಾಪಿಸಲಾಗಿರುವ ಪರಿಶೀಲಿಸಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ವಾಹನ ಪರಿಶೀಲನೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಕೂಡ ನಿರ್ವಹಿಸಬೇಕು ಎಂದು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿತ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸ್ಥಳೀಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.