ಕೊರೋನಾದಿಂದ ಮಕ್ಕಳು ಸದ್ಯಕ್ಕೆ ಸೇಫ್‌ ಝೋನ್‌ನಲ್ಲಿ : ಯಾರಿಗೂ ಪ್ರಾಣಾಪಾಯವಿಲ್ಲ

By Kannadaprabha News  |  First Published Oct 13, 2021, 12:31 PM IST
  • ಆರೋಗ್ಯ ಇಲಾಖೆಯು ಇತ್ತೀಚೆಗೆ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣೆಗೆ ‘ಆರೋಗ್ಯ ನಂದನ’ ಅಭಿಯಾನ 
  •  ದ.ಕ. ಜಿಲ್ಲೆಯಲ್ಲಿ ಪರೀಕ್ಷೆಗೊಳಪಟ್ಟಮಕ್ಕಳ ಪೈಕಿ ಕೇವಲ ನಾಲ್ಕು ಮಂದಿಗೆ ಮಾತ್ರ ಕೊರೋನಾ ಸೋಂಕು 

ಮಂಗಳೂರು (ಅ.13):  ಆರೋಗ್ಯ ಇಲಾಖೆಯು (Health Department) ಇತ್ತೀಚೆಗೆ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣೆಗೆ ‘ಆರೋಗ್ಯ ನಂದನ’ (Arogya nandana) ಅಭಿಯಾನ ಆರಂಭಿಸಿದ್ದು, ಇದರ ಅಡಿಯಲ್ಲಿ ದ.ಕ. ಜಿಲ್ಲೆಯಲ್ಲಿ (Dakshina kannada) ಪರೀಕ್ಷೆಗೊಳಪಟ್ಟಮಕ್ಕಳ ಪೈಕಿ ಕೇವಲ ನಾಲ್ಕು ಮಂದಿಗೆ ಮಾತ್ರ ಕೊರೋನಾ ಸೋಂಕು (Corona) ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸದ್ಯದ ಮಟ್ಟಿಗೆ ಮಕ್ಕಳು (Children) ಕೊರೋನಾದಿಂದ ಅತ್ಯಂತ ಸೇಫ್‌ ಝೋನ್‌ನಲ್ಲಿದ್ದಾರೆ.

ಕೋವಿಡ್‌ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಸಿದ್ದರಿಂದ ಆರೋಗ್ಯ ನಂದನ ಅಭಿಯಾನ ಆರಂಭಿಸಲಾಗಿತ್ತು. ಭೌತಿಕ ತರಗತಿ ಆರಂಭವಾದ ಬಳಿಕ 6-12ನೇ ತರಗತಿವರೆಗಿನ ವಿದ್ಯಾರ್ಥಿಗಳ (Students) ಪರೀಕ್ಷೆ ನಡೆಸಲಾಗುತ್ತಿದೆ.

Tap to resize

Latest Videos

ಮಕ್ಕಳಿಗೂ ಕೋವಿಡ್ ಲಸಿಕೆ : ಪೂರ್ಣ ಶಾಲೆ ಆರಂಭ

ಸೋಂಕಿನ ಪ್ರಮಾಣ ಶೇ.0.15: ದ.ಕ. ಜಿಲ್ಲೆಯಲ್ಲಿ ಶಾಲಾರಂಭದ ಬಳಿಕ ಅಕ್ಟೋಬರ್‌ 5ರವರೆಗೆ ಶೀತ, ಕೆಮ್ಮು ಇತ್ಯಾದಿ ಸೋಂಕಿನ ಲಕ್ಷಣ ಕಂಡುಬಂದ 2541 ವಿದ್ಯಾರ್ಥಿಗಳನ್ನು ಆರ್‌ಟಿಪಿಸಿಆರ್‌ (RTPCR) ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಕೇವಲ ನಾಲ್ಕು ಮಂದಿಯಲ್ಲಿ ಕೊರೋನಾ ಪಾಸಿಟಿವ್‌ ಪತ್ತೆಯಾಗಿದೆ. ಅಂದರೆ ಶೇ.0.15ರಷ್ಟುಮಕ್ಕಳಲ್ಲಿ ಮಾತ್ರ ಸೋಂಕು ಕಂಡುಬಂದಿದೆ.

6ನೇ ತರಗತಿಯ 168 ಮಕ್ಕಳು, 7ನೇ ತರಗತಿಯ 183, 8ನೇ ತರಗತಿಯ 521, 9ನೇ ತರಗತಿಯ 463, 10ನೇ ತರಗತಿಯ 660, ಪಿಯುಸಿಯ 450 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿತ್ತು. ಅವರಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಂಗಳೂರು ತಾಲೂಕಿನ ನಾಲ್ಕು ಮಕ್ಕಳಿಗೆ ಕೋವಿಡ್‌ -19 ಪಾಸಿಟಿವ್‌ (Covid positive) ಬಂದಿದೆ. ಉಳಿದವರೆಲ್ಲರ ವರದಿ ನೆಗೆಟಿವ್‌ ಆಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಶಾಲೆ, ಕಾಲೇಜು (College) ತರಗತಿಗಳು ಮೊದಲಿನಂತೆಯೇ ನಡೆಯುತ್ತಿದ್ದು, ಮಕ್ಕಳು ಮತ್ತು ಶಿಕ್ಷಕರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ಸೂಚಿಸಲಾಗಿದೆ. ಆದರೆ ಶಾಲೆ, ಕಾಲೇಜು ಆವರಣದ ಹೊರಗೆ ಹೆಚ್ಚಿನ ಮಕ್ಕಳು ಮಾಸ್ಕ್‌ (mask), ಸಾಮಾಜಿಕ ಅಂತರವಿಲ್ಲದೆ ಮುಕ್ತವಾಗಿ ಓಡಾಟ ನಡೆಸುತ್ತಿರುವುದು ಕಂಡುಬರುತ್ತಿದೆ.

ಮಕ್ಕಳಲ್ಲಿ ಕೊರೋನಾ ಸಾವಿಲ್ಲ

ಮಕ್ಕಳ ಪ್ರಾಣಕ್ಕೆ ಕೊರೋನಾದಿಂದ ಯಾವ ತೊಂದರೆಯೂ ಆಗದು ಎನ್ನುವುದು ಎರಡನೇ ಅಲೆಯಲ್ಲೂ ಮತ್ತೆ ಸಾಬೀತಾಗಿದೆ. ಮೊದಲ ಮತ್ತು 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ 18 ವರ್ಷದೊಳಗಿನ ಯಾವೊಬ್ಬ ವಿದ್ಯಾರ್ಥಿಯೂ ಸಾವಿಗೀಡಾಗಿಲ್ಲ. ಸೋಂಕು ತಗುಲಿದ ಬಹುತೇಕ ಮಕ್ಕಳು ಆಸ್ಪತ್ರೆಗೆ ದಾಖಲಾಗದೆ, ಅತಿ ಬೇಗನೆ ಯಾವುದೇ ಗಂಭೀರ ಸಮಸ್ಯೆಗಳಿಲ್ಲದೆ ಗುಣಮುಖರಾಗಿದ್ದಾರೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸಹಜವಾಗಿ ಹೆಚ್ಚಿರುವುದರಿಂದ ಹಾಗೂ ಮಕ್ಕಳಿಗೆ ಶುಗರ್‌, ಬಿಪಿ (BP) ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡದೆ ಇರುವುದರಿಂದ ಇದು ಸಾಧ್ಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಶಾಲೆ ಆರಂಭವಾದಂದಿನಿಂದಲೇ ಆರೋಗ್ಯ ನಂದನ ಕಾರ್ಯಕ್ರಮದಡಿ ಮಕ್ಕಳ ತಪಾಸಣೆ ಆರಂಭಿಸಲಾಗಿತ್ತು. ಸೋಂಕಿನ ಲಕ್ಷಣಗಳಿದ್ದು ಪರೀಕ್ಷಿಸಲ್ಪಟ್ಟ2541 ಮಕ್ಕಳಲ್ಲಿ ಕೇವಲ ನಾಲ್ಕು ಮಂದಿಗೆ ಪಾಸಿಟಿವ್‌ ಕಂಡುಬಂದಿರುವುದು ಮಕ್ಕಳಲ್ಲಿ ಕೊರೋನಾ ಸೋಂಕು ನಗಣ್ಯವಾಗಿದೆ ಎನ್ನುವುದನ್ನು ತೋರಿಸುತ್ತದೆ.

- ಡಾ.ಅಶೋಕ್‌, ದ.ಕ. ಜಿಲ್ಲಾ ಕೊರೋನಾ ನೋಡಲ್‌ ಅಧಿಕಾರಿ.

click me!