ಕೊಪ್ಪಳ: ವೇಶ್ಯಾವಾಟಿಕೆಗೆ ಬಾಲಕಿ ತಳ್ಳಿ​ದ ದುರುಳರಿಗೆ 10 ವರ್ಷಗಳ ಜೈಲು ಶಿಕ್ಷೆ

By Kannadaprabha NewsFirst Published Oct 15, 2020, 12:47 PM IST
Highlights

ಅಪ್ರಾಪ್ತೆಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ಕಳಿಸಿದ್ದ ಆರೋಪ| ಅಪರಾಧಿಗಳಿಗೆ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದ ನ್ಯಾಯಾಲಯ| ಕೊಪ್ಪಳ ನಗರದಲ್ಲಿ ನಡೆದಿದ್ದ ಘಟನೆ| 

ಕೊಪ್ಪಳ(ಅ.15): ನಗರದ ರೈಲು ನಿಲ್ದಾಣದ ಹತ್ತಿರದ ರಸ್ತೆ ಮೇಲೆ ನಿಂತುಕೊಂಡಿದ್ದ ಗಂಗಾವತಿಯ ಅಪ್ರಾಪ್ತೆಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ಕಳಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ (ಪೋಕ್ಸೋ) ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2014ರ ನವೆಂಬರ್‌ 18ರಂದು ಸಂಜೆ 6 ಗಂಟೆಗೆ ಇಲ್ಲಿನ ರೈಲು ನಿಲ್ದಾಣದ ಮುಂದೆ ರಸ್ತೆ ಮೇಲೆ ನಿಂತಿದ್ದ ಬಾಲಕಿಯನ್ನು ಆಂಧ್ರಪ್ರದೇಶದ ಪರವೀನ್‌ ಜಯರಾಮ ಎಂಬ ಮಹಿಳೆ ಅಪಹರಿಸಿ, ಆಂಧ್ರಪ್ರದೇಶದ ಪೆನಗೊಂಡ ನಗರದಲ್ಲಿನ ತನ್ನ ಮನೆಗೆ ಕರೆದೊಯ್ದು, ಬಾಲಕಿಯನ್ನು ಕೂಡಿ ಹಾಕಿ ರಾಮು ಬಾಬು ಮತ್ತು ಇತರರಿಂದ ಹಣ ಪಡೆದು ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಆರೋಪ ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕೊಪ್ಪಳ ಪೊಲೀಸ್‌ ಉಪಾಧೀಕ್ಷಕರು ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.

ಕೊಪ್ಪಳ: ಕೊರೋನಾಕ್ಕಂಜಿ ಮನೆಯಲ್ಲೇ ಠಿಕಾಣಿ, 6-7 ತಿಂಗಳಿಂದ ಆಚೆಯೇ ಬಾರದ ಕುಟುಂಬ​..!

ಆರೋಪಗಳು ಸಾಬೀತಾಗಿದ್ದು, ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸಿದ್ದ ಆರೋಪಕ್ಕಾಗಿ ಪರವೀನ್‌ ಜಯರಾಮ ಎಂಬ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 45,000 ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕಾಗಿ ರಾಮು ಬಾಬು ಎಂಬ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 25,000 ದಂಡವನ್ನು ವಿಧಿಸಿ ಶಂಕರ ಎಂ. ಜಾಲವಾದಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು (ಪೋಕ್ಸೋ), ತೀರ್ಪು ಹೊರಡಿಸಿರುತ್ತಾರೆ.

ಸರ್ಕಾರದ ಪರವಾಗಿ ಎಂ.ಎ. ಪಾಟೀಲ, ಕೆ. ನಾಗರಾಜ ಆಚಾರ್‌, ಸವಿತಾ ಎಂ. ಶಿಗ್ಲಿ ಹಾಗೂ ಸರ್ಕಾರಿ ಅಭಿಯೋಜಕ ಅಂಬಣ್ಣ ಅವರು ಪ್ರಕರಣ ನಡೆಸಿದ್ದು, ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಮನೋಹರ ವಾದ ಮಂಡಿಸಿದ್ದರು ಎಂದು ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.
 

click me!