ದೇಶದ ಅಪರೂಪದ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ: ಜಯಮಾಲಾ

By Kannadaprabha News  |  First Published Mar 25, 2024, 11:20 AM IST

ಚಲನಚಿತ್ರಗಳನ್ನು ನಿರ್ಮಿಸುವುದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ದೇಶದ ಅಪರೂಪದ ನಿರ್ದೇಶಕ ಎಂದರೆ ಅದು ಗಿರೀಶ್ ಕಾಸರವಳ್ಳಿ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿದರು. 


ಬೆಂಗಳೂರು (ಮಾ.25): ಚಲನಚಿತ್ರಗಳನ್ನು ನಿರ್ಮಿಸುವುದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ದೇಶದ ಅಪರೂಪದ ನಿರ್ದೇಶಕ ಎಂದರೆ ಅದು ಗಿರೀಶ್ ಕಾಸರವಳ್ಳಿ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರೀಶ್ ಕಾಸರವಳ್ಳಿ ಹಾಗೂ ಸಿನಿಮಾ ಸಾಹಿತಿ ಗೋಪಾಲಕೃಷ್ಣ ಪೈ ಬರೆದಿರುವ ‘ಬಿಂಬ ಬಿಂಬನ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಜಯಮಾಲಾ, ತಮ್ಮ ಚಲನಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರನ್ನು ತಂದು ಕೊಟ್ಟಿರುವ ಕಾಸರವಳ್ಳಿಯವರ ಸಿನಿಮಾಗಳು ಚಿಂತನೆಯನ್ನು ಪ್ರಚೋದಿಸುತ್ತವೆ. 

ಕತೆ, ತಾಂತ್ರಿಕತೆ, ಶೈಲಿಯಲ್ಲಿ ಒಬ್ಬ ನಿರ್ದೇಶಕ ತನಗೆ ತಾನೇ ಪೈಪೋಟಿಯನ್ನು ನೀಡಿ, ಹೇಗೆ ಯಶಸ್ಸನ್ನು ಕಂಡುಕೊಳ್ಳಬಹುದು ಎಂಬುವುದನ್ನು ಅವರು ಬರೆದಿರುವ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದರು. ತಾವು ನಿರ್ಮಿಸುವ ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ರಾಜಿ ಮಾಡಿಕೊಳ್ಳದೇ ಗುಣಮಟ್ಟ ಕಾಪಾಡಿಕೊಂಡಿದ್ದಾರೆ. ಕನ್ನಡ ಭಾಷೆಯನ್ನು ಎಲ್ಲೆಡೆಯೂ ಪಸರಿಸಿ 4 ಸ್ವರ್ಣ ಕಮಲ ಪ್ರಶಸ್ತಿಗಳನ್ನು ನಮ್ಮ ರಾಜ್ಯಕ್ಕೆ ತಂದು ಕೊಟ್ಟಿದ್ದಾರೆ ಎಂದು ಜಯಮಾಲಾ ಹೇಳಿದರು. 

Tap to resize

Latest Videos

ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಸಿನಿಮಾ ಎನ್ನುವುದು ಒಬ್ಬನ ಕೃತಿಯಲ್ಲ. ಹಾಗೆಯೇ ಬಿಂಬ ಎನ್ನುವುದು ಕೂಡ ಒಬ್ಬನದ್ದಲ್ಲ. ಕತೆ ಕಟ್ಟುವುದು, ಸಿನಿಮಾ ನಿರ್ಮಿಸುವುದು ಹೇಗೆ ಎಂಬುದನ್ನು ಬಿಂಬ ಬಿಂಬನ ಪುಸ್ತಕದಲ್ಲಿ ವಿವರಿಸಲಾಗಿದೆ. ಯುವ ನಿರ್ದೇಶಕರು, ನಿರ್ಮಾಪಕರು, ಸಿನಿಮಾ ಕ್ಷೇತ್ರಕ್ಕೆ ಕಾಲಿಡುವವರಿಗೆ ಉಪಯುಕ್ತವಾಗಿದೆ ಎಂದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಅನ್ಯಾಯ: ಕೆ.ಎಸ್.ಈಶ್ವರಪ್ಪ ಆರೋಪ

ಗೋಪಾಲಕೃಷ್ಣ ಪೈ ಮಾತನಾಡಿ, ಬಿಂಬ ಬಿಂಬನ ಕೃತಿಯನ್ನು ಓದಿದ ಮೇಲೆ ಎಲ್ಲರೂ ಕೂಡ ತಪ್ಪದೇ ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳನ್ನು ನೋಡಿ. ಏಕೆಂದರೆ, ಪ್ರತಿಯೊಂದು ಸಿನಿಮಾದಲ್ಲಿಯೂ ಹೊಸತೊಂದು ಅಧ್ಯಾಯವಿದೆ. ಇದರಿಂದ ನಿಮಗೆ ಹೆಚ್ಚೆಚ್ಚು ಅರ್ಥ ಹಾಗೂ ಧ್ವನಿಗಳು ಕಾಣುತ್ತವೆ. ಪ್ರತಿಯೊಂದು ಚಿತ್ರದ ಒಳ ಮರ್ಮ ಹಾಗೂ ಒಳ ಧ್ವನಿ, ವಿನ್ಯಾಸವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ. ಶೇಷಾದ್ರಿ, ಸಿನೆಮಾ ಲೇಖಕ ಕೆ. ಪುಟ್ಟಸ್ವಾಮಿ, ನಿರ್ದೇಶಕ ಬಿ.ಎಸ್. ಲಿಂಗದೇವರು, ಪತ್ರಕರ್ತ ರಘುನಾಥ ಚ.ಹ ಮತ್ತು ವೀರಕಪುತ್ರ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

click me!