ಮುಂದಿನ 14 ದಿನ ಗಂಭೀರ, ದಯವಿಟ್ಟು ಸಹಕರಿಸಿ: ದಾವಣಗೆರೆ ಡಿಸಿ ಮನವಿ

By Kannadaprabha News  |  First Published May 5, 2020, 9:22 AM IST

ಗ್ರೀನ್ ಝೋನ್‌ನಲ್ಲಿದ್ದ ದಾವಣಗರೆ ಜಿಲ್ಲೆಯೀಗ ಕೊರೋನಾ ವೈರಸ್‌ನಿಂದಾಗಿ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ ಮುಂದಿನ 14 ದಿನಗಳು ಕೊರೋನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮಹತ್ವದ್ದಾಗಿದ್ದು, ಎಲ್ಲರೂ ಸಹಕರಿಸಿ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 


ದಾವಣಗೆರೆ(ಮೇ.05): ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ಮುಂದಿನ 14 ದಿನಗಳು ಬಹಳಷ್ಟುವಗಂಭೀರವಾಗಿದ್ದು, ಜಿಲ್ಲೆಯ ಎಲ್ಲ ಹೊಟೆಲ್‌ ಮತ್ತು ಲಾಡ್ಜ್‌ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಹೇಳಿದರು.

ನಗರದ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಹೊಟೆಲ್‌- ಲಾಡ್ಜ್‌ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈವರೆಗೆ ನಿಮ್ಮ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಮುಂದಿನ ದಿನಗಳಲ್ಲಿ ನಿಮ್ಮಿಂದ ಇನ್ನೂ ಹೆಚ್ಚು ಸಹಕಾರ ನಿರೀಕ್ಷಿಸುತ್ತೇವೆ ಎಂದರು.

Tap to resize

Latest Videos

ಕೊರೋನಾ ಸೋಂಕು ನಿಯಂತ್ರಣದ ವೇಳೆ ಜಿಲ್ಲೆಯಲ್ಲಿ ಬಹುತೇಕ ಹೋಟೆಲ್‌- ಲಾಡ್ಜ್‌ ಮಾಲೀಕರು ಸಹಕಾರ ನೀಡಿದ್ದರೂ, ಕೆಲ ಕಡೆ ನಿರೀಕ್ಷಿತ ಸಹಕಾರ ನೀಡದವರು ಇನ್ನಾದರೂ ಸ್ಪಂದಿಸಬೇಕು. ನಿಮಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಕೊರೋನಾ ಹಾಗೂ ಎಸಿ ಒಂದಕ್ಕೊಂದು ಹೊಂದಾಣಿಕೆ ಆಗುವುದಿಲ್ಲ. ಪರಸ್ಪರ ತದ್ವಿರುದ್ಧವಾಗಿವೆ. ಅನಿವಾರ್ಯತೆ ಇದ್ದಲ್ಲಿ ಎಸಿ ಸಂಪರ್ಕಗಳನ್ನು ಕಡಿತಗೊಳಿಸಿ, ರೂಂಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಳೆದ ಮೂರು ದಿನದಲ್ಲಿ ದಾವಣಗೆರೆಯಲ್ಲಿ ಒಟ್ಟು ಕೊರೋನಾ ಕೇಸ್‌ 28!

ಲಾಡ್ಜ್‌, ಹೋಟೆಲ್‌ಗಳಿಗೆ ನೀರಿನ ವ್ಯವಸ್ಥೆ, ವಿದ್ಯುತ್‌ ಸೇರಿದಂತೆ ಯಾವುದೇ ತೊಂದರೆಯಾದರೆ ತಕ್ಷಣವೇ ಅದನ್ನು ಸರಿಪಡಿಸುವ ವ್ಯವಸ್ಥೆ ಮಾಡಿಕೊಳ್ಳಿ. ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಮ್ಮ ಸಹಕಾರ ಪಡೆಯಿರಿ. ಕೋವಿಡ್‌-19 ಸೋಂಕು ನಿರ್ಮೂಲನೆ ಒಂದು ಯುದ್ಧವಾಗಿದೆ. ಈ ತುರ್ತು, ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ತಮ್ಮ ಕುಟುಂಬವನ್ನೇ ಮರೆತು, ವೈಯಕ್ತಿಕ ಜೀವನವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದೆ. 28 ದಿನಗಳಿಂದ ಒಂದೂ ಪಾಸಿಟಿವ್‌ ಕೇಸ್‌ ಇಲ್ಲದ್ದಕ್ಕೆ ಗ್ರೀನ್‌ ಝೋನ್‌ ಘೋಷಣೆಯಾಯಿತು. ಮರು ದಿನವೇ 2 ಪಾಸಿಟಿವ್‌ ಕೇಸ್‌ಗಳು ಪತ್ತೆಯಾದವು ಎಂದು ವಿಷಾದಿಸಿದರು.

2 ಪಾಸಿಟಿವ್‌ ಪ್ರಕರಣಕ್ಕೆ ಸಂಬಂಧಿಸಿದವರಿಂದ 21 ಕೇಸ್‌ ಪತ್ತೆಯಾಗಿವೆ. ಇನ್ನೂ 290 ಸ್ಯಾಂಪಲ್‌ ವರದಿ ಬಾಕಿ ಇದ್ದು, ವರದಿಗಾಗಿ ಕಾಯುತ್ತಿದ್ದೇವೆ. ಪಾಸಿಟಿವ್‌ ಪ್ರಕರಣಕ್ಕೆ ಸಂಬಂಧಿಸಿದವರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಆದಷ್ಟುಬೇಗನೆ ಅಂಥವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ ಮಾಡಲಾಗುವುದು ಎಂದು ಡಿಸಿ ಬೀಳಗಿ ತಿಳಿಸಿದರು.

ಹೋಟೆಲ್‌ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಜಿಲ್ಲಾಡಳಿತ ನಮಗಾಗಿ, ನಮ್ಮ ಉಳಿವಿಗಾಗಿ ಹಗಲಿರುಳು ಕೆಲಸ ಮಾಡುತ್ತಿದೆ. ನಾವು ಸದಾ ನಿಮ್ಮೊಂದಿಗಿದ್ದು, ಕೈ ಜೋಡಿಸುತ್ತೇವೆ. ಲಾಡ್ಜ್‌, ಹೊಟೆಲ್‌ಗಳಲ್ಲಿ ಕೆಲಸಗಾರರಿಲ್ಲ. ಹಾಗಾಗಿ ತರಬೇತಿ ಹೊಂದಿರುವ ಹಾಗೂ ಪೊಲೀಸ್‌ ಸಿಬ್ಬಂದಿ ನೇಮಿಸಿ. ನಮ್ಮ ಸಹಕಾರ ಇದೆ. ಲಾಡ್ಜ್‌, ಹೋಟೆಲ್‌ ಮಾಲೀಕರಿಗೆ ಪಾಸ್‌ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಿ.ನಜ್ಮಾ, ಹೋಟೆಲ್‌ ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.
 

click me!