ಕೊಟ್ಟೂರು: 24 ಗಂಟೆಯಲ್ಲೇ ಕೊರೋನಾ ಸೋಂಕಿತ ಗುಣ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

By Kannadaprabha News  |  First Published Jul 23, 2020, 12:13 PM IST

ಕೊರೋನಾ ಲಕ್ಷಣಗಳು ಕ್ಷೀಣಗೊಂಡ ಹಿನ್ನೆಲೆಯಲ್ಲಿ ಇಬ್ಬರ ಬಿಡುಗಡೆ| ಕೊಟ್ಟೂರು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಶತಕದ ಸಮೀಪ ಬಂದಿದೆ| 98 ಜನರಿಗೆ ಪಾಸಿಟಿವ್‌, ಗುಣಮುಖರಾದ 61 ಜನರು ಆಸ್ಪತ್ರೆಯಿಂದ ಬಿಡುಗಡೆ| 35 ಜನರಿಗೆ ಚಿಕಿತ್ಸೆ, ಇಬ್ಬರ ಸಾವು| ಕೊಟ್ಟೂರು ಪಟ್ಟಣದಲ್ಲಿ 54 ಸೋಂಕಿತರಿದ್ದರೆ ಉಳಿದೆಡೆ 44 ಜನರಿದ್ದಾರೆ|


ಜಿ. ಸೋಮಶೇಖರ

ಕೊಟ್ಟೂರು(ಜು.23): ಕೋವಿಡ್‌-19 ಬಗೆಗಿನ ಭೀತಿ ದೂರವಾಗಿ ಸ್ಫೂರ್ತಿ ಸಿಗುವಂತಹ ಪಾಸಿಟಿವ್‌ ಘಟನಾವಳಿಗಳ ಇನ್ನಷ್ಟು ಪ್ರಕರಣ ಬೆಳಕಿಗೆ ಬರುತ್ತಿದ್ದು, ಇಲ್ಲಿನ ಇಬ್ಬರು ಕೊರೋನಾ ಸೋಂಕಿತರು ಆಸ್ಪತ್ರೆ ಸೇರಿದ ಕೇವಲ 24 ಗಂಟೆಯ ಒಳಗೆ ರೋಗ ಲಕ್ಷಣ ಕ್ಷೀಣಿಸಿದ್ದರಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದಾರೆ.

Tap to resize

Latest Videos

ಭಾನುವಾರ ಮಧ್ಯಾಹ್ನ ಪಟ್ಟಣದ ಕಡ್ಲೇರ್‌ ಓಣಿಯ 47 ವರ್ಷದ ವ್ಯಕ್ತಿ, 23 ವರ್ಷದ ಯುವತಿಗೆ ಪಾಸಿಟಿವ್‌ ಬಂದಿದೆ ಎಂದು ಅಧಿಕಾರಿಗಳು ಹೇಳಿ ಆ ಇಬ್ಬರನ್ನು ಆ್ಯಂಬುಲೆನ್ಸ್‌ ಮೂಲಕ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಿದ್ದರು. ಭಾನುವಾರ ರಾತ್ರಿ ಈ ಇಬ್ಬರು ಚಿಕಿತ್ಸಾ ಕೇಂದ್ರದಲ್ಲಿ ಇದ್ದರಷ್ಟೇ ಸೋಮವಾರದ ಮಧ್ಯಾಹ್ನ 4 ಗಂಟೆ ವೇಳೆಗೆ ಈ ಇಬ್ಬರಿಗೆ ಸೋಂಕಿನ ಲಕ್ಷಣಗಳು ಕ್ಷೀಣಗೊಂಡಿವೆ ಎಂದು ವೈದ್ಯರು ಹೇಳಿ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಇಬ್ಬರೂ ಆರಾಮವಾಗಿದ್ದಾರೆ.

ಇಬ್ಬರೂ ಸೋಂಕಿತರಿಗೆ ಒಂದೇ ದಿನದಲ್ಲಿ ರೋಗ ಲಕ್ಷಣ ನಿವಾರಣೆಯಾಗಿದ್ದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಸ್ಫೂರ್ತಿದಾಯಕ ಹೆಜ್ಜೆ ಎಂದು ವೈದ್ಯರು ಹೇಳುತ್ತಿದ್ದಾರೆ. ಈ ಬೆಳವಣಿಗೆಯಿಂದಾದರೂ ರೋಗದ ಬಗ್ಗೆ ಅನಗತ್ಯವಾಗಿ ಜನತೆ ಭೀತಿಗೊಳ್ಳುವ ಅವಶ್ಯಕತೆ ಇಲ್ಲ ಎಂಬ ಸಂದೇಶ ಆನೆ ಬಲ ತಂದು ಕೊಟ್ಟಿದೆ. ಇವರಿಬ್ಬರ ಗಂಟಲು ದ್ರವವನ್ನು ಜು.10 ರಂದೇ ಪರೀಕ್ಷೆಗೆ ಪಡೆಯಲಾಗಿತ್ತು. ಆದರೆ ಭಾನುವಾರ ಜು.19 ರಂದು ಅದರ ವರದಿ ಸಿಕ್ಕಿದೆ. ಆಗಲೇ ಅವರಿಗೆ ಪಾಸಿಟಿವ್‌ ಇರುವುದು ಗೊತ್ತಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ವರದಿ ಬರುವ ವೇಳೆಗೆ 10 ದಿನವಾಗಿದ್ದರಿಂದ ಅವರಲ್ಲಿ ಕೊರೋನಾ ಗುಣಲಕ್ಷಣ ಇಳಿಮುಖವಾಗಿದ್ದು ಅವರು ಚೇತರಿಸಿಕೊಂಡಿದ್ದರು ಎಂದು ತಾಲೂಕು ಆರೋಗ್ಯಾಧಿಕಾರಿ ಹೇಳುತ್ತಾರೆ. ಇಬ್ಬರೂ ಪ್ರತ್ಯೇಕವಾಗಿದ್ದರಿಂದ ಸೋಂಕು ಹಬ್ಬುವುದು ತಪ್ಪಿದೆ. ಅವರಿಗೆ ಅಗತ್ಯ ಔಷಧ, ಗುಳಿಗೆ ನೀಡಿ ಕಳುಹಿಸಲಾಗಿದ್ದು, ಪ್ರತ್ಯೇಕವಾಗಿದ್ದು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ತಿಳಿ ಹೇಳಲಾಗಿದೆ ಎಂದು ವೈದ್ಯಾಧಿಕಾರಿ ಷಣ್ಮುಖ ನಾಯಕ ತಿಳಿಸಿದ್ದಾರೆ.

ಕೊರೋನಾ ಟೆಸ್ಟ್‌ಗೆ ನಿಂತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಶತಕದ ಸಮೀಪ ಸಂಖ್ಯೆ

ಕೊಟ್ಟೂರು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಶತಕದ ಸಮೀಪ ಬಂದಿದೆ. 98 ಜನರಿಗೆ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಗುಣಮುಖರಾದ 61 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 35 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮೃತರಾಗಿದ್ದಾರೆ. ಕೊಟ್ಟೂರು ಪಟ್ಟಣದಲ್ಲಿ 54 ಸೋಂಕಿತರಿದ್ದರೆ ಉಳಿದೆಡೆ 44 ಜನರಿದ್ದಾರೆ.

ಕೊಟ್ಟೂರು ತಾಲೂಕಿನ ಸೋಂಕಿತರು ಈ ಬಗೆಯಲ್ಲಿ ಚೇತರಿಸಿಕೊಂಡು ಗುಣಮುಖರಾಗುತ್ತಿರುವುದು ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಿ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯ ಎಂಬಂತಾಗಿದ್ದು ಇವರ ಜೊತೆಗೆ ವೈದ್ಯಕೀಯ ಸಿಬ್ಬಂದಿಯಲ್ಲಿ ಸ್ಫೂರ್ತಿ ಹೆಚ್ಚಲು ಕಾರಣವಾಗಿದೆ.

ಕೊಟ್ಟೂರು ಕಡ್ಲೇರ್‌ ಓಣಿಯ ಯುವಕ ಮತ್ತು ಯುವತಿಯ ಸ್ವ್ಯಾಬ್‌ನ್ನು ಜುಲೈ 10ರಂದು ಪಡೆಯಲಾಗಿತ್ತು. ಈ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಹತ್ತು ದಿನಗಳಾಗಲಿದ್ದು ಈ ಅವಧಿಯಲ್ಲಿ ಸೋಂಕಿತರಲ್ಲಿನ ವೈರಸ್‌ ಶಕ್ತಿ ಕುಂಠಿತವಾಗಿದೆ. ಇದೀಗ ಸೋಂಕಿನ ಯಾವುದೇ ಲಕ್ಷಣ ಇಲ್ಲವೆಂದು ಖಾತರಿಪಡಿಸಿಕೊಂಡು ಒಂದೇ ದಿನಕ್ಕೆ ಕೆಲ ಮಾತ್ರೆಗಳನ್ನು ನೀಡಿ ಆಸ್ಪತ್ರೆಯಿಂದ ಅವರನ್ನು ಬಿಡುಗಡೆಗೊಳಿಸಿದ್ದೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ ಅವರು ತಿಳಿಸಿದ್ದಾರೆ. 

ಭಾನುವಾರ ಪಾಸಿಟಿವ್‌ ಬಂದಿದೆ ಎಂಬ ಕಾರಣಕ್ಕಾಗಿ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು. ಯಾವುದೇ ರೋಗ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಿದರು. ಆದರೆ ಭಾನುವಾರವೇ ಮತ್ತೊಮ್ಮೆ ನಮ್ಮನ್ನು ಸ್ವ್ಯಾಬ್‌ ಟೆಸ್ಟ್‌ಗೆ ಗುರಿಪಡಿಸಿ ಸೋಂಕಿನ ಲಕ್ಷಣಗಳು ಇವೆಯೋ ಇಲ್ಲವೋ ಎಂದು ವೈದ್ಯರು ಖಾತರಿ ಮಾಡಿಕೊಳ್ಳಬೇಕಿತ್ತು. ಇದೀಗ ಸಮಾಧಾನವಾಗಿದೆ, ಯಾವುದೇ ಭಯ ನಮ್ಮನ್ನು ಕಾಡುತ್ತಿಲ್ಲ ಎಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿರುವ 47 ವರ್ಷದ ವ್ಯಕ್ತಿ ತಿಳಿಸಿದ್ದಾರೆ. 
 

click me!