ವಿಜಯಪುರ: ಹೃದಯಾಘಾತದಿಂದ ಮೃತಪಟ್ಟ ವೃದ್ಧನಿಗೂ ಕೊರೋನಾ ಸೋಂಕು..!

By Kannadaprabha News  |  First Published May 20, 2020, 1:24 PM IST

ಕಂಟೈನ್ಮೆಂಟ್‌ ಝೋನ್‌ದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ರವಾನೆಗೆ ನಿರ್ಧಾರ| ಲಿವರ್‌ ಕಾಯಿಲೆ, ಹೈಪರ್‌ಟೆನ್ಷನ್‌ ಸೇರಿದಂತೆ ಇನ್ನಿತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧನ ಗಂಟಲು ದ್ರವದ ಮಾದರಿ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು, ನಂತರ ಅದು ಪಾಸಿಟಿವ್‌ ಎಂದು ದೃಢಪಟ್ಟಿದೆ|


ವಿಜಯಪುರ(ಮೇ.20): ಹೃದಯಾಘಾತದಿಂದ ಸಾವನ್ನಪ್ಪಿದ ನಗರದ ಕಂಟೈನ್ಮೆಂಟ್‌ ಝೋನ್‌ದಲ್ಲಿನ 65 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 60ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಂಟೈನ್ಮೆಂಟ್‌ ವಲಯದಿಂದ 65 ವರ್ಷದ ವೃದ್ಧ ರೋಗಿ ಸಂಖ್ಯೆ-1291 ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಲಿವರ್‌ ಕಾಯಿಲೆ, ಹೈಪರ್‌ಟೆನ್ಷನ್‌ ಸೇರಿದಂತೆ ಇನ್ನಿತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದ ಈ ವೃದ್ಧನ ಗಂಟಲು ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು. ನಂತರ ಅದು ಪಾಸಿಟಿವ್‌ ಎಂದು ದೃಢಪಟ್ಟಿದೆ.

Tap to resize

Latest Videos

KSRTC ಬಸ್‌ಗೆ ಮುಗಿಬಿದ್ದ ಪ್ರಯಾಣಿಕರು: ಮುಂಗಡ ಟಿಕೆಟ್‌ ಖರೀದಿಸಿದವರಿಗೆ ಮಾತ್ರ ಅವಕಾಶ..!

ಸಾರಿ ಮತ್ತು ಐಎಲ್‌ಐಗಳಂತಹ ಯಾವುದೇ ಲಕ್ಷಣ ಇದ್ದಿಲ್ಲ. ಸೋಮವಾರ ಕಂಟೈನ್ಮೆಂಟ್‌ ವಲಯದಲ್ಲಿ ಅವರ ಮನೆಯಲ್ಲಿ ಆ ವ್ಯಕ್ತಿಯ ಉಷ್ಣಾಂಶ ಮತ್ತು ಆಕ್ಸಿಮೀಟರ್‌ ತಪಾಸಣೆ ವೇಳೆಗೆ ಸಹಜ ಸ್ಥಿತಿ ಇರುವ ಬಗ್ಗೆ ತಿಳಿದು ಬಂದಿತ್ತು. ನಂತರ ತೀವ್ರ ಎದೆ ನೋವಿನಿಂದ ಈ ವ್ಯಕ್ತಿಯು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಇಸಿಜಿ ಮತ್ತು ಎಕ್ಸರೇ ತಪಾಸಣೆ ಮಾಡಿಸಿಕೊಂಡು ನ್ಯುಮೋನಿಯಾ ಇದ್ದಿದ್ದರಿಂದ ಜಿಲ್ಲಾಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ಇದರಿಂದಾಗಿ ಈ ವೃದ್ಧನನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಈ ವೃದ್ಧ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಡ್ಡಾಯ ವೈದ್ಯಕೀಯ ಪರೀಕ್ಷೆ:

ಕೋವಿಡ್‌-19 ಮುನ್ನೆಚ್ಚರಿಕೆಯಾಗಿ ನಗರದ ಕಂಟೈನ್ಮೆಂಟ್‌ ವಲಯದಲ್ಲಿನ 60 ವರ್ಷ ಮೇಲ್ಪಟ್ಟಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಮಂಗಳವಾರದಿಂದ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ತಿಳಿಸಿದ್ದಾರೆ.

ನಗರದ ಕಂಟೈನ್ಮೆಂಟ್‌ ವಲಯದಲ್ಲಿನ 60 ವರ್ಷ ಮೇಲ್ಪಟ್ಟಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸುವುದರ ಜೊತೆಗೆ ಸಾರಿ ಮತ್ತು ಐಎಲ್‌ಐಗಳಂತಹ ಪ್ರಕರಣಗಳಲ್ಲಿಯೂ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಪಾಸಿಟಿವ್‌ ಬಂದಲ್ಲಿ ಆಸ್ಪತ್ರೆ ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಹಾದಿಂದ 15 ಸಾವಿರ ಜನ ಆಗಮನ:

ಮಹಾರಾಷ್ಟ್ರದಿಂದ ಸುಮಾರು 15 ಸಾವಿರ ಜನರು ಜಿಲ್ಲೆಗೆ ಆಗಮಿಸಿದ್ದು, ಪ್ರತಿದಿನ ಜಿಲ್ಲೆಯಲ್ಲಿ ಕ್ವಾರಂಟೈನ್‌ ಕೇಂದ್ರಗಳಲ್ಲಿರುವವರ 1 ಸಾವಿರದಿಂದ 1500ವರೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವಿದೇಶ ಸೇರಿದಂತೆ ಇತರೆ ಪ್ರದೇಶಗಳಿಂದ ಒಟ್ಟು 2803 ಜನರು ಆಗಮಿಸಿದ ಬಗ್ಗೆ ವರದಿಯಾಗಿದೆ. 1705 ಜನರು 28 ದಿನಗಳ ಐಸೋಲೇಷನ್‌ ಅವಧಿ ಪೂರ್ಣಗೊಳಿಸಿದ್ದಾರೆ. 1057 ಜನರು 1 ರಿಂದ 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ. ಈವರೆಗೆ 3284 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 2678 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಇನ್ನೂ 546 ಜನರ ವರದಿ ಬರಬೇಕಾಗಿದೆ ಎಂದು ವಿವರಿಸಿದ್ದಾರೆ.

ಇದುವರೆಗೆ 60 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 4 ಜನರು ಮೃತ ಪಟ್ಟಿದ್ದು, 37 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ 19 ಸಕ್ರಿಯ ರೋಗಿಗಳು ಇದ್ದಾರೆ ಎಂದು ತಿಳಿಸಿದ್ದಾರೆ.
 

click me!