ಬೆಳಗಾವಿ: ಕೋವಿಡ್‌ ಆಸ್ಪತ್ರೆಯಲ್ಲಿ ಬೆತ್ತಲೆಯಾಗಿ ನರಳಿ ನರಳಿ ಪ್ರಾಣಬಿಟ್ಟ ವೃದ್ಧ..?

Kannadaprabha News   | Asianet News
Published : Jul 18, 2020, 11:51 AM IST
ಬೆಳಗಾವಿ: ಕೋವಿಡ್‌ ಆಸ್ಪತ್ರೆಯಲ್ಲಿ ಬೆತ್ತಲೆಯಾಗಿ ನರಳಿ ನರಳಿ ಪ್ರಾಣಬಿಟ್ಟ ವೃದ್ಧ..?

ಸಾರಾಂಶ

ಬೆಳಗಾವಿಯ ಬಿಮ್ಸ್‌ನಲ್ಲಿ ನಡೆದ ಘಟನೆ| ನೆಲದ ಮೇಲೆಯೇ ನರಳಾಡಿ ಅಸುನೀಗಿದ ವೃದ್ಧ| ಮೃತ ವೃದ್ಧನ ಕುಟುಂಬದ ಸದಸ್ಯರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ| ತಾವೇನು ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಮಾಧ್ಯಮಗಳ ಎದುರು ತನ್ನ ಅಳಲು ತೋಡಿಕೊಂಡ ಮೃತ ವೃದ್ಧನ ಮೊಮ್ಮಗ|

ಬೆಳಗಾವಿ(ಜು.18): ನಗರದ ಬಿಮ್ಸ್‌ ಆಸ್ಪತ್ರೆಯ ಕೋವಿಡ್‌ ಐಸೋಲೇಷನ್‌ ವಾರ್ಡ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಕೋವಿಡ್‌ ವಾರ್ಡ್‌ನಲ್ಲಿ ಕೊರೋನಾ ಸೋಂಕಿತ 65 ವರ್ಷದ ವೃದ್ಧನೊಬ್ಬ ಸೂಕ್ತ ಚಿಕಿತ್ಸೆ ಲಭಿಸದೇ ಬೆತ್ತಲೆಯಾಗಿ ನರಳಾಡಿ ಮೃತಪಟ್ಟಿರುವ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋವೊಂದು ವೈರಲ್‌ ಆಗಿದ್ದು, ತೀವ್ರ ಸಂಚಲನ ಮೂಡಿಸಿದೆ.

ಹೊಟ್ಟೆ ನೋವಿನ ಬಾಧೆಯಿಂದ ಬಳಲಿದ ವೃದ್ಧನ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ವೈದ್ಯರು, ಸಿಬ್ಬಂದಿ ಯಾರೂ ಚಿಕಿತ್ಸೆ ನೀಡಲು ಮುಂದಾಗದೇ ಅಮಾನವೀಯತೆ ಪ್ರದರ್ಶಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿಗ್ರಾಮದ 65 ವರ್ಷದ ಸೋಂಕಿತ ಲಿವರ್‌ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಲು ಆಗಮಿಸಿದ್ದ. ಆದರೆ, ಆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿನ ಹಾಸಿಗೆಗಳೆಲ್ಲವೂ ಭರ್ತಿಯಾಗಿದ್ದರಿಂದ ಬಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗಂಟಲು ದ್ರವ ಸಂಗ್ರಹಿಸಿದ ವೈದ್ಯರು ಪರೀಕ್ಷಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಆತನನ್ನು ಐಸೋಲೇಷನ್‌ಗೆ ಸ್ಥಳಾಂತರಿಸಲಾಗಿತ್ತು. ಗುರುವಾರ ರಾತ್ರಿ ಹೊಟ್ಟೆನೋವಿನ ಬಾಧೆ ತಾಳಲಾರದೇ ವೃದ್ಧ ಬೆತ್ತಲೆಯಾಗಿ ಕೋವಿಡ್‌ ವಾರ್ಡ್‌ನಲ್ಲೇ ನರಳಾಡುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಕೊರೋನಾ ಕಾಟ: ಭೂಲೋಕದ ನರಕ ಆಗಿದ್ಯಾ ಬೆಳಗಾವಿಯ ಬಿಮ್ಸ್‌ ಆಸ್ಪತ್ರೆ?

ಇದರಿಂದಾಗಿ ಬಿಮ್ಸ್‌ ಆಡಳಿತ ಮಂಡಳಿ ಆಡಳಿತ ವೈಖರಿ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವೃದ್ಧ ನರಳಾಡಿದರೂ ಆತನಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ. ಐದು ಗಂಟೆಗಳ ಬಳಿಕ ವೃದ್ಧನನ್ನು ನೆಲದ ಮೇಲೆಯೇ ಹಾಸಿಗೆ ಮೇಲೆ ಮಲಗಿಸಲಾಗಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಈ ವಿಷಯವನ್ನು ಆಸ್ಪತ್ರೆಯ ಅಧಿಕಾರಿಗಳು ಮೃತ ಮೊಮ್ಮನಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಆದರೆ, ಈ ವೃದ್ಧನ ಕುಟುಂಬದ ಸದಸ್ಯರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ. ತಾವೇನು ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಮೃತ ವೃದ್ಧನ ಮೊಮ್ಮಗ ಮಾಧ್ಯಮಗಳ ಎದುರು ತನ್ನ ಅಳಲು ತೋಡಿಕೊಂಡಿದ್ದಾನೆ.
 

PREV
click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!