ಕೋಳಿ ಮಾಂಸ, ಮೊಟ್ಟೆ ಸೇವನೆಗೆ ಯಾವುದೇ ಆತಂಕ ಬೇಡ| ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ವೈರಸ್ ಕೋಳಿಗಳಿಂದ ಹರಡುತ್ತದೆ ಎಂದು ತಪ್ಪು ಸಂದೇಶ| ಮಾಂಸವನ್ನ ಚೆನ್ನಾಗಿ ಬೇಯಿಸಿ ಸೇವಿಸಬೇಕು|
ವಿಜಯಪುರ(ಮಾ.12): ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ವೈರಸ್ ಸೋಂಕು (ಕೋವಿಡ್-19) ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ತಪ್ಪು ಸಂದೇಶದಿಂದ ಕೂಡಿದ್ದು, ಕೋಳಿ ಮಾಂಸ ಹಾಗೂ ಮೊಟ್ಟೆ ಸುರಕ್ಷಿತ ಆಹಾರವಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಪ್ರಾಣೇಶ ಜಹಾಗಿರದಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ವೈರಸ್ ಕೋಳಿಗಳಿಂದ ಹರಡುತ್ತದೆ ಎಂದು ತಪ್ಪು ಸಂದೇಶಗಳು ಹಬ್ಬಿದ್ದು, ಅಂತಹ ವದಂತಿಗಳಿಗೆ ಯಾವುದೇ ವೈದ್ಯಕೀಯ ಆಧಾರವಿಲ್ಲ. ಭಾರತದಲ್ಲಿ ಕೋಳಿಗಳಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಬಗ್ಗೆ ಯಾವುದೇ ವರದಿ ಕಂಡು ಬಂದಿಲ್ಲ. ಹೀಗಾಗಿ ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೋಂಕು ಪೀಡಿತ ವ್ಯಕ್ತಿಯಿಂದ ಇತರರಿಗೆ ಕೊರೋನಾ ವೈರಸ್ ಸೋಂಕು ಹರಡುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶಗಳಿಂದಾಗಿ ಕೋಳಿ ಸಾಕಾಣಿಕೆದಾರರಿಗೆ ತನ್ಮೂಲಕ ಕುಕ್ಕುಟ ಉದ್ಯಮಕ್ಕೆ ಅಪಾರವಾದ ಆರ್ಥಿಕ ಹಾನಿ ಉಂಟಾಗುತ್ತದೆ. 100 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಕೋಳಿ ಮಾಂಸ ಬೇಯಿಸುವುದರಿಂದ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ. ಕಾರಣ ಕೋಳಿ ಸಾಕಾಣಿಕೆದಾರರು ಹಾಗೂ ಸಾರ್ವಜನಿಕರು ಕೋಳಿಗಳಿಂದ ಕೊರೋನಾ ವೈರಸ್ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಆತಂಕಕ್ಕೆ ಒಳಗಾಗಬಾರದು. ಕೋಳಿ ಮಾಂಸ ಮತ್ತು ಮೊಟ್ಟೆ ಉತ್ತಮ ಪ್ರೋಟಿನ್‌ಯುಕ್ತ ಎಲ್ಲ ಪೋಷಕಾಂಶಗಳನ್ನೊಳಗೊಂಡ ಆಹಾರವಾಗಿದ್ದು, ಚೆನ್ನಾಗಿ ಬೇಯಿಸಿ ಸೇವಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.