ರಾಣಿಬೆನ್ನೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ, ಮದು ಮಗನ ತಂದೆ-ತಾಯಿ ಕೊರೋನಾಗೆ ಬಲಿ

By Kannadaprabha News  |  First Published Jul 19, 2020, 8:54 AM IST

ವಿವಾಹದಲ್ಲಿ ಪಾಲ್ಗೊಂಡಿದ್ದ 34 ಜನರಲ್ಲಿ ಸೋಂಕು| ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರದಲ್ಲಿ ಒಂದೇ ಕುಟುಂಬದ 34 ಜನರಲ್ಲಿ ಕೊರೋನಾ ಪಾಸಿಟಿವ್‌| ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇನ್ನೂ ಕೆಲವರ ಸ್ವ್ಯಾಬ್‌ ರಿಪೋರ್ಟ್‌ ಬರಬೇಕಿದೆ| ಕೊರೋನಾ ಸಂದರ್ಭದಲ್ಲಿ ವಿವಾಹ ಕಾರ್ಯಕ್ರಮದ ನಿಯಮ ಪಾಲಿಸದಿದ್ದರಿಂದ ಈಗ ದೊಡ್ಡ ಬೆಲೆ ತೆರುವಂತಾಗಿದೆ|


ರಾಣಿಬೆನ್ನೂರು(ಜು.19): ಕೊರೋನಾ ಮಹಾಮಾರಿಯಿಂದಾಗಿ ಸಂಭ್ರಮದಲ್ಲಿರಬೇಕಾಗಿದ್ದ ಮನೆಯಲ್ಲಿ ಸೂತಕ ಮನೆ ಮಾಡಿದೆ. ಕೆಲ ದಿನಗಳ ಹಿಂದೆ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 32 ಜನರಿಗೆ ಕೊರೋನಾ ಸೋಂಕು ತಗುಲಿದ್ದರೆ, ವರನ ತಂದೆ-ತಾಯಿ ಕೋವಿಡ್‌ ಸೋಂಕಿಗೆ ಬಲಿಯಾದ್ದಾರೆ.

ರಾಣಿಬೆನ್ನೂರು ನಗರದಲ್ಲಿ ಒಂದೇ ಕುಟುಂಬದ 34 ಜನರಲ್ಲಿ ಕೊರೋನಾ ಪಾಸಿಟಿವ್‌ ಕಂಡುಬಂದಿದೆ. ನಗರದಲ್ಲಿ ಜೂ. 29ರಂದು 55 ವರ್ಷದ (ಪಿ. 25830) ವ್ಯಕ್ತಿಯೊಬ್ಬರು ಮಗನ ಮದುವೆ ಮಾಡಿದ್ದರು. ಅದೇ ದಿನ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿವಾಹ ಸಮಾರಂಭದ ಕೆಲವೇ ದಿನಗಳ ಬಳಿಕ ಅಂದರೆ ಜು. 7ರಂದು ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯಲ್ಲಿ ಸಾವನ್ನಪ್ಪಿದ್ದರು. ಅವರ ಪತ್ನಿ (ಪಿ. 36881) ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಸ್ವ್ಯಾಬ್‌ ರಿಪೋರ್ಟ್‌ ಕೆಲ ದಿನಗಳ ಹಿಂದೆಯೇ ಬಂದಿದ್ದು, ಮದುಮಗನ ತಂದೆ-ತಾಯಿ ಇಬ್ಬರಿಗೂ ಕೊರೋನಾ ಪಾಸಿಟಿವ್‌ ದೃಢಪಟ್ಟಿತ್ತು. ಮದುವೆ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎನ್ನಲಾಗಿದೆ. ಅವರಲ್ಲಿ ಶುಕ್ರವಾರ ಒಂದೇ ದಿನ 32 ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಇದರಿಂದ ತಾಲೂಕಿನಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.

Latest Videos

undefined

'ಕೊರೋನಾದಂತಹ ಸಂದರ್ಭದಲ್ಲೂ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿರುವ ಬಿಜೆಪಿಗರು'

ನವ ಜೋಡಿ ಕ್ವಾರಂಟೈನ್‌ನಲ್ಲಿ

ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ನೂತನ ಜೋಡಿ ಕೂಡ ಈಗ ಕ್ವಾರಂಟೈನ್‌ನಲ್ಲಿ ಇರುವಂತಾಗಿದೆ. ವಿವಾಹದ ಕೆಲವೇ ದಿನಗಳಲ್ಲಿ ತಂದೆ-ತಾಯಿ ಸಾವು ಕುಟುಂಬದವರ ಸಂಭ್ರಮವನ್ನೇ ಕಿತ್ತುಕೊಂಡಿದೆ. ಕೊರೋನಾ ಮಹಾಮಾರಿಯು ಸಂಭ್ರಮದ ಮನೆಗೆ ಹೊಕ್ಕು ಸೂತಕ ತಂದಿಟ್ಟಿದೆ. ಈಗಾಗಲೇ ಮಾರುತಿ ನಗರದಲ್ಲಿ ಅಲ್ಲಲ್ಲಿ ಸೀಲ್‌ಡೌನ್‌ ಮಾಡಲಾಗಿದ್ದು, ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರು ಆತಂಕದಲ್ಲಿಯೇ ಕಾಲಕಳೆಯುತ್ತಿದ್ದಾರೆ.

ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇನ್ನೂ ಕೆಲವರ ಸ್ವ್ಯಾಬ್‌ ರಿಪೋರ್ಟ್‌ ಬರಬೇಕಿದೆ. ಕೊರೋನಾ ಸಂದರ್ಭದಲ್ಲಿ ವಿವಾಹ ಕಾರ್ಯಕ್ರಮದ ನಿಯಮ ಪಾಲಿಸದಿದ್ದರಿಂದ ಈಗ ದೊಡ್ಡ ಬೆಲೆ ತೆರುವಂತಾಗಿದೆ. ಸಾಮಾಜಿಕ ಅಂತರ ಮರೆತು ಎಲ್ಲರೂ ಜೊತೆಗೂಡಿ ಸಂಭ್ರಮಿಸಿದ್ದು, ಮಾಸ್ಕ್‌, ಸ್ಯಾನಿಟೈಸರ್‌ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ್ದರಿಂದ ಈಗ ಬಹುತೇಕರು ತೊಂದರೆ ಎದುರಿಸುವಂತಾಗಿದೆ. ಅಲ್ಲದೇ ಸುತ್ತಮುತ್ತಲಿನ ನಿವಾಸಿಗಳೂ ಈಗ ಸೀಲ್‌ಡೌನ್‌ ಪ್ರದೇಶದಲ್ಲಿ ಉಳಿಯುವಂತಾಗಿದೆ.
 

click me!