ಕಣ್ಣಿಗೆ ಖಾರದ ಪುಡಿ ಎರಚಿ ಆಶಾ ಕಾರ್ಯಕರ್ತೆ ಮೇಲೆ ಸೋಂಕಿತ ಕುಟುಂಬದಿಂದ ಹಲ್ಲೆ..!

By Kannadaprabha NewsFirst Published Jun 14, 2020, 10:24 AM IST
Highlights

ಆರೋಗ್ಯದಿಂದಿದ್ದರೂ ಕೊರನಾ ಪಾಸೀಟಿವ್ ಎಂದು ಆಸ್ಪತ್ರೆಗೆ ಸೇರಿಸಲು ನೀನೇ ಕಾರಣವೆಂದು ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಮುಂದಾದ ಸೋಂಕಿತ ಕುಟುಂಬಸ್ಥರು| ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಂತ್ರಸ್ಥೆ ಆಶಾ ಕಾರ್ಯಕರ್ತೆ|

ಚಿತ್ತಾಪುರ(ಜೂ.14): ಕೋವಿಡ್ - 19 ನಿಯಂತ್ರಣದ ಗುರುತರವಾದಂತಹ ಕರ್ತವ್ಯದಲ್ಲಿರುವ ಆಶಾ ಕಾರ್ಯಕರ್ತೆ ಮತ್ತು ಆಕೆಯ ಪತಿಯ ಮೇಲೆ ಸೋಂಕಿತ ವ್ಯಕ್ತಿಗಳ ಕುಟುಂಬದವರು ಖಾರದಿ ಪುಡಿ ಎರಚಿ, ಕಬ್ಬಿಣ ರಾಡ್ ಬಳಸಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಾಂಪೂರಹಳ್ಳಿಯಲ್ಲಿ ನಡೆದಿದೆ.

ಘಟನೆಯಲ್ಲಿ ಜ್ಯೋತಿ ಪವಾರ ಎಂಬ ಆಶಾ ಕಾರ್ಯಕರ್ತೆ ಹಾಗೂ ಅಕೆಯ ಗಂಡ ತಾರಾಸಿಂಗ ಪವಾರ ಮೇಲೆ ಹಲ್ಲೆ ನಡೆದಿದ್ದು, ವಾಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂಪೂರಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಒಂದೇ ಕುಟುಂಬದ ಮೂವರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಮುಂಬೈನಿಂದ ಆಗಮಿಸಿದ ಇವರಿಗೆ ಸರ್ಕಾರಿ ಕ್ವಾರಂಟೈನ್ ನಿಂದ ಮನೆಗೆ ತೆರಳಿದ ಮೇಲೆ ಪಾಸಿಟಿವ್ ಎಂದು ವರದಿ ಬಂದಿದೆ. ಅಂದೇ ಮೂವರು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯಾದಗಿರಿ ಕೊವಿಡ್ ಆಸ್ಪತ್ರೆಯಲ್ಲಿ ಸ್ವಚ್ಚತೆ ನಾಪತ್ತೆ..!

ಆದರೆ, ಕ್ವಾರಂಟೈನ್ ಅವಧಿ ಮುಗಿಸಿ ಬಂದಿರುವ ಮೂವರೂ ಆರೋಗ್ಯವಾಗಿಯೇ ಇದ್ದರೆ. ಅವರಲ್ಲಿ ಕೋವಿಡ್ ಲಕ್ಷಣಗಳು ಇಲ್ಲ. ಸುಖಾಸುಮ್ಮನೆ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದಕ್ಕೆಲ್ಲ ನೀನೆ ಕಾರಣ ಎಂದು ಅದೇ ಗ್ರಾಮದ ಆಶಾ ಕಾರ್ಯಕರ್ತೆ ಜ್ಯೋತಿ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಪತ್ನಿಗೆ ಹಲ್ಲೆ ಮಾಡುವುದನ್ನು ಸಹಿಸದ ಸ್ಥಳದಲ್ಲೇ ಇದ್ದ ಪತಿ ತಾರಾಸಿಂಗ್ ಪವಾರ್ ಅವರು ಜ್ಯೋತಿ ರಕ್ಷಣೆಗೆ ಧಾವಿಸಿದ್ದಾರೆ. ಆಗ ತಾರಾಸಿಂಗ್ ಪವಾರ್ ಮೇಲೂ ಸೋಂಕಿತರ ಕುಟುಂಬದವರು ಹಲ್ಲೆ ಮಾಡಿದ್ದಾರೆ.

ತಾಂಡಾದಲ್ಲಿ ಮುಂಬೈ ವಲಸಿಗರಿಗೆ ಈ ಹಿಂದೆ ಮೂರು ಜನರಿಗೆ ಕರೊನಾ ಸೊಂಕು ಕಂಡು ಬಂದಿದ್ದರಿಂದ,ಅವರನ್ನು ಆಶಾ ಕಾರ್ಯಕರ್ತೆ ಆಸ್ಪತ್ರೆಗೆ ದಾಖಲಿಸಿದ್ದರು, ಆಗ ಆರೋಪಿಗಳು ಈಕೆಗೆ ಅವಾಜ ಹಾಕಿ ಬೆದರಿಸಿದ್ದರು.
ಈಗ ಜೂ. 10 ರಂದು ಒಂದೆ ಮನೆಯಲ್ಲಿ ಮೂರು ಜನರಿಗೆ ಸೊಂಕು ಕಂಡು ಬಂದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಇದರಿಂದ ಆಕ್ರೋಶ ಗೊಂಡ  ರವಿ ಕೆ. ಪವಾರ, ಆತನ ಹೆಂಡತಿ ಶಾಂತಾಬಾಯಿ ಪವಾರ, ತಂದೆ ಕಾಳೂರಾಮ ಪವಾರ ಅವರು ಆಶಾ ಕಾರ್ಯಕರ್ತೆ ಮನೆಗೆ ಹೋಗಿ ಸರ್ಕಾರದ್ದು ಏನು ಇಲ್ಲ, ಎಲ್ಲವನ್ನ ನೀನೆ ಮಾಡ್ತಾ ಇದ್ದಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಶಾ ಕಾರ್ಯಕರ್ತೆ ಮೇಲೆ ಶಾಂತಾ ಬಾಯಿ ಖಾರದಪುಡಿ ಹಾಕಿ ಹೊಡೆದಿದ್ದು, ಆಶಾ ಕಾರ್ಯಕರ್ತೆ ಗಂಡ ಹೊರ ಬಂದಾಗ ರವಿ ಪವಾರ್‌ಗೆ ಕಬ್ಬಿಣದ ರಾಡಿನಿಂದ ಕಾಲಿಗೆ ಹೊಡೆದಿದ್ದು ತೀವ್ರತರವಾದ ಗಾಯಗಳಾಗಿವೆ.

ಈ ಘಟನೆ ಬಗ್ಗೆ ಆಶಾ ಕಾರ್ಯಕರ್ತೆಯರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾಡಿ ಪೊಲೀಸ್ ಠಾಣೆಗೆ ಧಾವಿಸಿ ಹೋಗಿ ದೂರು ನೀಡಿದ್ದಾರೆ.
 

click me!