ಕೊರೋನಾದಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ

By Kannadaprabha NewsFirst Published Sep 6, 2020, 12:33 PM IST
Highlights

ಕೊರೋನಾದಿಂದಾಗಿ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗಿದೆ. ಶಿಕ್ಷಣ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದ್ದು, ಆದರೆ ಸರ್ಕಾರ ಈ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

 ಶಿವಮೊಗ್ಗ(ಸೆ.06):  ಕೊರೋನಾದಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದ್ದು, ಸರ್ಕಾರ ಇದನ್ನು ಸರಿದೂಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಅಸಂಖ್ಯಾತ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ಸರ್ಕಾರ ಶಾಲಾ ಕಾಲೇಜುಗಳನ್ನು ಆರಂಭಿಸುವ ಕುರಿತು ಸರಿ ನಿಲುವು ತಾಳುತ್ತಿಲ್ಲ. ಪೂರ್ವ ಯೋಜನೆಯೂ ಇಲ್ಲದ ಕಾರಣ ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರು, ಶಾಲಾಡಳಿತ ವರ್ಗ, ಕಾರ್ಮಿಕರು ಹಾಗೂ ಪೋಷಕರು ಸಾಕಷ್ಟುಒತ್ತಡಕ್ಕೆ ಒಳಗಾಗಿದ್ದಾರೆ ಎಂದರು.

1558 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ...

ಖಾಸಗಿ ಶಾಲೆಗಳು ಆನ್‌ಲೈನ್‌, ತಾಂತ್ರಜ್ಞಾನ ಮೂಲಕ ಶಿಕ್ಷಣ ನೀಡುತ್ತ ಹೆಜ್ಜೆ ಹಾಕಿವೆ. ಉಳ್ಳವರ ಮಕ್ಕಳು ಮಾತ್ರ ಆನ್‌ಲೈನ್‌ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಮೂಲಕ ಲಾಭ ಪಡೆಯುತ್ತಿದ್ದಾರೆ. ಆದರೆ ಬಡ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಗ್ರಾಮೀಣ ಭಾಗದ ಹಾಗೂ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವ ಯಾವುದೇ ಯೋಜನೆ ಸರ್ಕಾರ ಈವರೆಗೂ ರೂಪಿಸಿಲ್ಲ ಎಂದರು.

ಶೇ.100 ಶಿಕ್ಷಣ ಸಿಬ್ಬಂದಿ ಭರ್ತಿ ಮಾಡಿ: ವಾಲಾ ...

ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳು ಆನ್‌ಲೈನ್‌ ಶಿಕ್ಷಣ ಪಡೆಯಲು ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ. ಇದರಿಂದ ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು 13.500 ಹೆಚ್ಚು ಮಕ್ಕಳು ಶಾಲೆ ತ್ಯಜಿಸಿದ್ದಾರೆ. ಖಾಸಗಿ ಶಾಲೆಗಳ ಸುಮಾರು 40 ಸಾವಿರಕ್ಕೂ ಹೆಚ್ಚು ಶಿಕ್ಷಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ವೇತನವೂ ಸಿಗುತ್ತಿಲ್ಲ. ಇದರ ಜೊತೆಗೆ ಸರ್ಕಾರದ ವಿದ್ಯಾಗಮ ಯೋಜನೆ ನಡೆಸುವಂತೆ ಶಿಕ್ಷಕರ ಮೇಲೆ ಒತ್ತಡ ಹೇರುವ ಮೂಲಕ ಅವರ ಜೀವಕ್ಕೆ ಅಪಾಯವೊಡ್ಡುತ್ತಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್‌. ಚಂದ್ರಭೂಪಾಲ್‌ ಇದ್ದರು.

click me!