ಕೊರೋನಾ ಆತಂಕ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮ ಭಾರಿ ನಷ್ಟ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಸಾವಿರಾರು ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ.
ಬಂಗಾರಪೇಟೆ (ಮಾ.11): ಕೊರೋನಾ ಎಫೆಕ್ಟ್ ನಿಂದ ಕುಕ್ಕುಟೋದ್ಯಮಕ್ಕೂ ಭಾರೀ ಹೊಡೆತ ಬಿದ್ದಿದ್ದು ಕೋಳಿಗಳಿಂದ ಮತ್ತು ಕೊಳಿ ಮಾಂಸ ಸೇವನೆಯಿಂದ ಕೊರೋನಾ ವೈರಸ್ ಹರಡುತ್ತದೆ ಎಂಬ ವದಂತಿಗೆ ಹೆದರಿ 9,500 ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿರುವ ಘಟನೆ ಮಂಗಳವಾರ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ.
ಕೊರೋನಾ ವೈರಸ್‌ಗೆ ಉದ್ಯಮ ತತ್ತರ
ಮಾಗೊಂದಿಯ ಹೇಮಂತರೆಡ್ಡಿ ಎಂಬುವರಿಗೆ ಸೇರಿದ 9,500 ಕೋಳಿ ಮರಿಗಳನ್ನು ಹಳ್ಳ ತೋಡಿ ಜೀವಂತವಾಗಿ ಸಮಾಧಿ ಮಾಡಲಾಗಿದೆ. ಕಳೆದ ಎರಡು ವಾರಗಳಿಂದ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡಿ ಜನರನ್ನು ತಲ್ಲಣಗೊಳಿಸಿರುವ ಕರೋನಾ ವೈರಸ್ ಈಗ ಕೋಳಿ ಉದ್ಯಮಕ್ಕೂ ಹಬ್ಬಿದೆ. ಇತ್ತೀಚಿಗೆ ಕೋಲಾರ ಜಿಲ್ಲೆಯಲ್ಲಿ ಕೋಳಿಗಳಿಂದ ಕೊರೋನಾ ವೈರಸ್ ಹರಡಲಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು.
ಕೋಳಿಗೆ 60 ರಿಂದ 65 ರೂಪಾಯಿ ಇಳಿತ..!...
ಇದರಿಂದ ಆತಂಕಗೊಂಡಿರುವ ಕೋಳಿ ಸಾಕಾಣಿಕೆದಾರರು ಹಾಗೂ ಕೆಲ ಕೋಳಿ ಕಂಪನಿಗಳ ಮಾಲೀಕರು ಕೋಳಿಗಳನ್ನು ನಾಶ ಮಾಡಲು ಮುಂದಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಕೋಳಿಗಳಿಗೆ ಬೇಡಿಕೆ ಇಳಿಮುಖವಾಗಿತ್ತು. ದಿಢೀರನೆ ಅದರ ಬೆಲೆ ಸಹ ಪಾತಾಳಕ್ಕೆ ಇಳಿದಿತ್ತು. ಇದರಿಂದ ಮತ್ತಷ್ಟುಆತಂಕಗೊಂಡಿದ್ದ ಉದ್ಯಮಿಗಳು ಕೋಳಿಗಳ ಸಹವಾಸವೇ ಬೇಡವೆಂಬ ನಿರ್ಧಾಕ್ಕೆ ಬಂದಿದ್ದರು.
ಬೃಹತ್ ಗುಂಡಿಯಲ್ಲಿ ಜೀವಂತ ಸಮಾಧಿ
ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಹೇಮಂತರೆಡ್ಡಿ ಎಂಬುವರಿಗೆ ತಮಿಳುನಾಡಿನ ಕಂಪನಿಯೊಂದು ನೀಡಿದ್ದ 9,500 ಕೋಳಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಮಂಗಳವಾರ ದಿಢೀರನೆ ಆ ಕಂಪನಿಯ ಮಾಲೀಕರು ಬಂದು ಎಲ್ಲ ಮರಿಗಳನ್ನು ಚೀಲಗಳಲ್ಲಿ ತುಂಬಿಸಿಕೊಂಡು ಗ್ರಾಮದ ಹೊರವಲಯದಲ್ಲಿ ದೊಡ್ಡ ಹಳ್ಳ ತೋಡಿ ಅದಲ್ಲಿ ಕೋಳಿ ಮರಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ. ಕೋಳಿಗಳಿಂದ ಯಾವುದೇ ಕೊರೋನಾ ವೈರಸ್ ಹರಡದಿದ್ದರೂ ಸಹ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಹೇಮಂತರೆಡ್ಡಿ ಒತ್ತಾಯಿಸಿದ್ದಾರೆ.