ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆ| ಗ್ರಾಮದ ಹೊರವಲಯದಲ್ಲೇ ಹಬ್ಬ, ಅಡುಗೆ, ಊಟ| ಕರ್ಫ್ಯೂ ಇರುವ ರೀತಿಯಲ್ಲಿಯೇ ಇಡೀ ಗ್ರಾಮ ನಿರ್ಜನ| ದೇವಿಯ ಕೆಂಡರಾಧನೆ ಪೂಜೆ|
ಭೀಮಣ್ಣ ಗಜಾಪುರ
ಕೂಡ್ಲಿಗಿ(ಮಾ.11): ಮೂಡಣ ದಿಕ್ಕಿನಲ್ಲಿ ನೇಸರ ಉದಯಿಸುತ್ತಿರುವಾಗ ಈ ಊರಿನ ಜನರು ಕುರಿ, ಮೇಕೆ, ಕೋಳಿ, ದನಕರುಗಳೊಂದಿಗೆ ಸಾಮೂಹಿಕವಾಗಿ ಗ್ರಾಮದ ಹೊರವಲಯಕ್ಕೆ ತೆರಳುತ್ತಾರೆ. ಇಡೀ ದಿನ ಸಿಹಿ ಅಡುಗೆ ಮಾಡಿಕೊಂಡು ಊಟ ಮಾಡಿ ಪ್ರಕೃತಿಯೊಂದಿಗೆ ಹಬ್ಬ ಮಾಡಿ ಸಂಜೆ ಪಡುವಣ ದಿಕ್ಕಿನಲ್ಲಿ ನೇಸರ ಮುಳುಗುತ್ತಿರುವಾಗ ಪುನಃ ವಾಪಸಾಗಿ ಸ್ವಗ್ರಾಮ ಸೇರಿಕೊಳ್ಳುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕಿನ ತಮ್ಮಯ್ಯಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದ ಗ್ರಾಮದೇವತೆ ಶ್ರೀ ಸುಂಕ್ಲಮ್ಮದೇವಿಯ ಜಾತ್ರೆ ಇಂತಹ ಅಪರೂಪದ ಆಚರಣೆಗೆ ಸಾಕ್ಷಿಯಾಯಿತು.
ತಾಲೂಕಿನ ತಮ್ಮಯ್ಯನಗುಡ್ಡ ಗ್ರಾಮದ ಜನತೆ ಊರ ಸಮೀಪದ ಹಳ್ಳದ ದಂಡೆಯಲ್ಲಿರುವ ಬೇವಿನಮರದ ಪ್ರದೇಶಕ್ಕೆ ಗ್ರಾಮದೇವತೆಯೊಂದಿಗೆ ಅಗಮಿಸಿ, ದಿನದ ಮಟ್ಟಿಗೆ ಹಬ್ಬ ಆಚರಣೆ ಮಾಡಿದರು. 3 ವರ್ಷಕ್ಕೊಮ್ಮೆ ನಡೆಯುವ ಸುಂಕ್ಲಮ್ಮ ಹಬ್ಬಕ್ಕೆ ಈ ವರ್ಷವೂ ಇಡೀ ಊರಿಗೆ ಊರೇ ಖಾಲಿಯಾಯಿತು. ಗ್ರಾಮದ ಸುತ್ತಲು ಮುಳ್ಳಿನ ಬೇಲಿ ಹಾಕುವುದು ಇಲ್ಲಿಯ ವಿಶೇಷ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯಲ್ಲಿ ಸ್ಥಳೀಯ ಸಂಪ್ರದಾಯಗಳ ಮತ್ತು ಬುಡಕಟ್ಟು ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಈ ಆಚರಣೆಯನ್ನು ಗ್ರಾಮಸ್ಥರು ತಪ್ಪದೇ ಪಾಲಿಸುತ್ತಾರೆ. ಗ್ರಾಮದಲ್ಲಿ ಬೇಡ ಬುಡಕಟ್ಟು, ದಲಿತರು ಹಾಗೂ ಮೂರು ಮುಸ್ಲಿಂ ಕುಟುಂಬಗಳು ಸೇರಿದಂತೆ 150ಕ್ಕೂ ಮನೆಗಳಿವೆ. ಅಲ್ಲ ಸಮುದಾಯದವರೂ ಭಾಗವಹಿಸುತ್ತಾರೆ.
ಆಚರಣೆ:
ಮಂಗಳವಾರ ಬೆಳಗ್ಗೆ ಮನೆಯ ಕಸ ಗುಡಿಸಿ, ಅಂಗಳಕ್ಕೆ ಸೆಗಣಿ ನೀರು ಹಾಕಿ, ಆನಂತರ ತೊಟ್ಟಿಲಲ್ಲಿರುವ ಕೂಸನ್ನು ಕಟ್ಟಿಕೊಂಡು, ವೃದ್ಧರನ್ನು ಕೈಹಿಡಿದುಕೊಂಡು, ಸಾಕು ಪ್ರಾಣಿಗಳನ್ನು ಕರೆದುಕೊಂಡು, ತಲೆಯ ಮೇಲೊಂದು ಪುಟ್ಟಿಯನ್ನು ಇಟ್ಟುಕೊಂಡು, ಊರ ಹೊರಗಿನ ಬೋಡಯ್ಯನಬಂಡೆ ಗ್ರಾಮಕ್ಕೆ ಹೋಗುವ ರಸ್ತೆಯ ಬಲಬದಿಯಲ್ಲಿರುವ ಬೇವಿನಮರದ ಕೆಳಗೆ ಬೀಡುಬಿಟ್ಟರು. ಮಹಿಳೆಯರು ಪುಟ್ಟಿಯಲ್ಲಿ ತಂದಿದ್ದ ರೊಟ್ಟಿಪಲ್ಲೆ, ಪಾಯಸ, ಅನ್ನಸಾರು ಅಲ್ಲದೆ ಮಧ್ಯಾಹ್ನ ಮಾಂಸದೂಟ ಹೀಗೆ ವಿಧವಿಧ ತಿನಿಸು ತಯಾರಿಸಿಕೊಂಡು ಊಟ ಮಾಡಿದರು. ಪಡುವಣ ದಿಕ್ಕಿನಲ್ಲಿ ಸೂರ್ಯ ತೆರೆಯಮರೆಗೆ ಸರಿಯವ ಹೊತ್ತಿಗೆ ಪುನಃ ತಮ್ಮ ತಮ್ಮ ಮನೆಗಳಿಗೆ ದನಕರುಗಳೊಂದಿಗೆ ತೆರಳಿದರು.
ಗ್ರಾಮದ ಮುಖಂಡರು ಸೇರಿ ಚಿಕ್ಕರಥ ನಿರ್ಮಿಸಿ ಅದರಲ್ಲಿ ದೇವಿಯ ಮೂರ್ತಿ ಕುಳಿಸಿಕೊಂಡು ಬೇವಿನಮರದ ಹತ್ತಿರ ಕರೆತಂದು ಪ್ರತಿಷ್ಠಾಪಿಸಿದರು. ಆನಂತರ ಗ್ರಾಮದ ದನಕರುಗಳನ್ನು ಬಯಲುಪ್ರದೇಶಕ್ಕೆ ಬಿಡುಬಿಟ್ಟು ‘ಚರಗ’ ಚೆಲ್ಲಲಾಯಿತು. ಆನಂತರ ದೇವಿಯ ಕೆಂಡರಾಧನೆ ಪೂಜೆ ನೆರೆವೇರಿತು.
ಇಡೀ ಊರೇ ನಿರ್ಜನ:
ಮಂಗಳವಾರ ಊರಲ್ಲಿ ಕರ್ಫ್ಯೂ ಇರುವ ರೀತಿಯಲ್ಲಿಯೇ ಇಡೀ ಗ್ರಾಮವು ನಿರ್ಜನವಾಗಿತ್ತು. ಊರಿಗೆ ಯಾವುದೇ ದುಷ್ಟಶಕ್ತಿಯ ಬಾಧೆ ತಟ್ಟಬಾರದು, ಪ್ಲೇಗ್, ಕಾಲರಾದಂತಹ ರೋಗಗಳು ಹರಡದಂತೆ ಊರನ್ನು ಸ್ವಚ್ಫವಾಗಿಡಬೇಕು. ದಿನ ಮಟ್ಟಿಗೆ ಊರೆಲ್ಲ ಖಾಲಿ ಮಾಡಿ ಕ್ರಿಮಿಕೀಟಗಳು ಹರಡಬಾರದು ಎಂಬ ಕಲ್ಪನೆಯಲ್ಲಿ ಈ ಆಚರಣೆ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.
ದಿನದ ಮಟ್ಟಿಗೆ ಗ್ರಾಮ ಖಾಲಿಯಾಗಿರುತ್ತದೆ. ಅಲ್ಲದೆ ಸಂಜೆ ವರೆಗೆ ಯಾರೂ ಊರು ಪ್ರವೇಶ ಮಾಡುವಂತಿಲ್ಲ. ದಿನಪೂರ್ಣ ಕಾವಲು ಕಾಯುತ್ತೇವೆ. ನಮ್ಮ ಪೂರ್ವಜರು ಕಾಲರಾ ಮತ್ತಿತರ ರೋಗಗಳಿಂದ ತಪ್ಪಿಸಿಕೊಳ್ಳಲು ಒಂದು ದಿನದ ಮಟ್ಟಿಗೆ ಊರು ಖಾಲಿ ಮಾಡುತ್ತಿದ್ದರು. ಆಧುನಿಕ ಜಗತ್ತಿನಲ್ಲಿ ಇಂತಹ ಆಚರಣೆಗಳು ಮರೆಯಾಗುತ್ತಿರುವುದು ನೋವಿನ ಸಂಗತಿ ಎಂದು ತಮ್ಮಯ್ಯನಗುಡ್ಡ ಗ್ರಾಮದ ನಿವಾಸಿಗಳಾದ ನುಂಕಪ್ಪ ಮತ್ತು ಪ್ರಹ್ಲಾದ ಅವರು ಹೇಳಿದ್ದಾರೆ.