ಕೊರೋನಾ ಭಯ: ಮಾಲ್, ಹೋಟೆಲ್, ದೇಗುಲ ಎಲ್ಲೂ ಜನರಿಲ್ಲ

By Kannadaprabha NewsFirst Published Jun 16, 2020, 1:02 PM IST
Highlights

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಹೊಟೇಲ್‌ಗಳು, ಮಾಲ್‌ಗಳು, ದೇವಸ್ಥಾನಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳ ಕಾರ್ಯಾರಂಭಕ್ಕೆ ಅನುಮತಿ ಸಿಕ್ಕಿದೆ. ಆದರೆ ಗ್ರಾಹಕರು, ಭಕ್ತರು ಇಲ್ಲದೇ ಎಲ್ಲೆಡೆ ಖಾಲಿ ಖಾಲಿ ತಾಣಗಳ ಪ್ರದರ್ಶನವಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶೃಂಗೇರಿ(ಜೂ.16): ಕೋವಿಡ್‌​-19 ಹಿನ್ನೆಲೆ ಹೇರಲಾಗಿದ್ದ ಲಾಕ್‌ಡೌನ್‌ ನೀತಿಯನ್ನು ವಾಣಿಜ್ಯ-ಉದ್ಯೋಗ ದೃಷ್ಟಿಯಿಂದ ಸಂಪೂರ್ಣ ಸಡಿಲಿಸಲಾಗಿದೆ. ಇದರಿಂದಾಗಿ ಹೊಟೇಲ್‌ಗಳು, ಮಾಲ್‌ಗಳು, ದೇವಸ್ಥಾನಗಳು ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳ ಕಾರ್ಯಾರಂಭಕ್ಕೆ ಅನುಮತಿ ಸಿಕ್ಕಿದೆ. ಈ ಎಲ್ಲೆಡೆಗಳಲ್ಲೀಗ ಬಹುದೊಡ್ಡ ಕೊರತೆಯಾಗಿರುವುದು ಜನರು. ಗ್ರಾಹಕರು, ಭಕ್ತರು ಇಲ್ಲದೇ ಎಲ್ಲೆಡೆ ಖಾಲಿ ಖಾಲಿ ತಾಣಗಳ ಪ್ರದರ್ಶನವಾಗುತ್ತಿದೆ. ಎಂಎಸ್‌ಐಲ್‌ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯಪ್ರಿಯರ ದಂಡು ಸೇರುತ್ತಿದೆ.

ಜೂ.8ರಿಂದ ದೇವಸ್ಥಾನ, ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಪ್ರವೇಶ ನೀಡುವಂತೆ ಸರ್ಕಾರ ಆದೇಶ ನೀಡಿದೆ. ಇದರಿಂದ ಶೃಂಗೇರಿ ಶ್ರೀಮಠ ಸೇರಿದಂತೆ ಪ್ರಮುಖ ದೇವಾಲಯಗಳು ಬಾಗಿಲು ತೆರೆದು ಭಕ್ತರಿಗೆ ಪ್ರವೇಶ ಕಲ್ಪಿಸಿಕೊಟ್ಟಿತು. ಆದರೆ ಮೊದಲ ದಿನ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಾರನೆಯ ದಿನದಿಂದ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ.

ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಿಗ್ಗಾ ಮಳೆದೇವರು ಋುಷ್ಯಶೃಂಗೇರೇಶ್ವರನ ಸನ್ನಿಧಿ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಿದೆ. ಸ್ಥಳೀಯರು ಹೊರತುಪಡಿಸಿದಂತೆ ಹೊರ ಜಿಲ್ಲೆ, ಹೊರರಾಜ್ಯಗಳ ಭಕ್ತರ ಸಂಖ್ಯೆ ಕಾಣುತ್ತಿಲ್ಲ. ಇತರೇ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿಯೂ ಭಕ್ತರ ಸಂಖ್ಯೆ ಕಡಿಮೆಯಿದೆ.

ಆಯುರ್ವೇದ ಔಷಧದಿಂದ ದೇಹಕ್ಕೆ ಅಡ್ಡಪರಿಣಾಮವಿಲ್ಲ; ಸಚಿವ ಸಿ.ಟಿ. ರವಿ

ಹೋಟೆಲ್‌ ವ್ಯವಹಾರವೂ ಚೇತರಿಸಿಕೊಂಡಿಲ್ಲ. ಕೆಲ ಹೊಟೇಲ್‌ಗಳಂತೂ ಇನ್ನೂ ಬಾಗಿಲು ತೆರೆದಿಲ್ಲ. ಪಟ್ಟಣದಲ್ಲಿ ಜನಸಂಚಾರ ಹೆಚ್ಚಾಗಿ ಕಂಡುಬರುತ್ತಿಲ್ಲ. ದಿನಸಿ, ತರಕಾರಿ, ಔಷಧಿ ಅಂಗಡಿಗಳ ಎದುರು ಮಾತ್ರ ಜನರು ಕಂಡುಬರುತ್ತಿದ್ದಾರೆ. ಸರ್ಕಾರಿ ಬಸ್‌ ಸಂಚಾರವಿದ್ದರೂ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಆದರೆ ಬಾರ್‌, ಎಂಎಎಸ್‌ಐಲ್‌ ಸೇರಿದಂತೆ ಕೆಲ ಮದ್ಯದಂಗಡಿಗಳ ಎದುರು ಮಾತ್ರ ಜನಜಂಗುಳಿ ಇದೆ.

ತಾಲೂಕಿನ ಮರ್ಕಲ್‌ ಪಂಚಾಯಿತಿ ಕೆಲ್ಲಾರು, ನೆಮ್ಮಾರು ಪಂಚಾಯಿತಿ ನೆಮ್ಮಾರು, ಶೃಂಗೇರಿ ಪಟ್ಟಣದ ಕುರುಬಗೇರಿಯಲ್ಲಿರುವ ಎಎಎಸ್‌ಐಲ್‌ ಮದ್ಯದಂಗಡಿಗಳಲ್ಲಿ, ಚಿಕನ್‌ ಅಂಗಡಿಗಳಲ್ಲಿಯೂ ಜನರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಇದ್ದಾಗ ಹೆಚ್ಚಾಗಿ ತಿರುಗಾಡುತ್ತಿದ್ಜ ಜನರು ಇದೀಗ ಲಾಕ್‌ಡೌನ್‌ ಸಡಿಲಿಕೆ ಆದಾಗಿನಿಂದ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.
 

click me!