ದೇಗುಲಗಳಲ್ಲಿ ವಿಶೇಷ ಪೂಜೆ: ಕೊರೋನಾ ನಿಯಮ ಗಾಳಿಗೆ

By Kannadaprabha News  |  First Published Nov 16, 2020, 7:43 AM IST

ದೀಪಾವಳಿ ಹಿನ್ನೆಲೆ ಕುಟುಂಬ ಸಮೇತ ದೇಗುಲಗಳಿಗೆ ಆಗಮಿಸಿದ ವಿಶೇಷ ಪೂಜೆ ಸಲ್ಲಿಕೆ| ಹಲವೆಡೆ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಮರೆತು ಗುಂಪುಗೂಡಿದ ಭಕ್ತ ಸಮೂಹ| ಮುಂಜಾನೆಯೇ ಪೂಜೆ ಸಲ್ಲಿಸಲು ಪುಟ್ಟಕಂದಮ್ಮಗಳ ಜತೆಗೆ ಕುಟುಂಬ ಸಮೇತರಾಗಿ ಭಕ್ತರು| 
 


ಬೆಂಗಳೂರು(ನ.16): ಬೆಳಕಿನ ಹಬ್ಬ ದೀಪಾವಳಿ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ನಗರದ ಬಹುತೇಕ ದೇವಾಲಯಗಳಲ್ಲಿ ದೇವರ ಮೂರ್ತಿಗಳಿಗೆ ಕಣ್ಮನ ಸೆಳೆಯುವ ಅಲಂಕಾರ ಮಾಡಲಾಗಿತ್ತು. ಬನಶಂಕರಿ ದೇವಿಗೆ ಭಾನುವಾರ ಮುಂಜಾನೆಯಿಂದಲೇ ವಿಶೇಷ ಅಭಿಷೇಕ ನಡೆಸಲಾಯಿತು. ದೇವಿಗೆ ಮಾಡಿದ್ದ ಬಣ್ಣ ಬಣ್ಣದ ಹೂವಿನ ಅಲಂಕಾರ ಎಲ್ಲರ ಮನಸೂರೆಗೊಂಡಿತು.

Latest Videos

undefined

"

ವಿವಿಧ ದೇವಾಲಯಗಳಿಗೆ ತೆರಳಿ ಭಕ್ತರು ದೇವರ ದರ್ಶನ ಪಡೆದರು. ಭಾನುವಾರ ಅಮಾವಾಸ್ಯೆಯೂ ಇದ್ದಿದ್ದರಿಂದ ಬನಶಂಕರಿ, ದೊಡ್ಡ ಗಣಪತಿ ದೇವಾಲಯ, ಅಣ್ಣಮ್ಮ ದೇವಿ, ಬಂಡೆ ಮಹಾಕಾಳಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬಂದಿತ್ತು. ಮುಂಜಾನೆಯೇ ಪೂಜೆ ಸಲ್ಲಿಸಲು ಪುಟ್ಟಕಂದಮ್ಮಗಳ ಜತೆಗೆ ಕುಟುಂಬ ಸಮೇತರಾಗಿ ಭಕ್ತರು ಆಗಮಿಸಿದ್ದರು.

ಕರ್ನಾಟಕದಲ್ಲಿ ಕೊರೋನಾ ದಾಖಲೆ ಪ್ರಮಾಣದಲ್ಲಿ ಇಳಿಕೆ

ಬೆಳ್ಳಂಬೆಳಗ್ಗೆ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದವು. ಕೆಲ ದೇವಸ್ಥಾನಗಳಲ್ಲಿ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರೆ, ಬಹುತೇಕ ದೇವಾಲಯಗಳಲ್ಲಿ ಕೋವಿಡ್‌ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಲಾಗಿತ್ತು. ದೇವರ ದರ್ಶನ ಪಡೆಯುವ ಭರದಲ್ಲಿ ಭಕ್ತರು ಯಾವುದೇ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದರು. ಸಾಮಾಜಿಕ ಅಂತರ ಮರೆತು ಗುಂಪುಗೂಡಿ ಪೂಜೆಗೆ ಆಗಮಿಸಿದ ದೃಶ್ಯ ಎಲ್ಲೆಡೆ ಕಂಡುಬಂತು.

ಇತ್ತ ಮಲ್ಲೇಶ್ವರಂ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಕೊರೋನಾ ಭಯದಿಂದ ಹೆಚ್ಚಿನ ಭಕ್ತರು ದೇವಾಲಯದ ಕಡೆಗೆ ಹೆಜ್ಜೆ ಹಾಕಿರಲಿಲ್ಲ. ಸರ್ಕಲ್‌ ಮಾರಮ್ಮ, ಗಂಗಮ್ಮ, ಲಕ್ಷ್ಮೀನರಸಿಂಹ, ದಕ್ಷಿಣ ಮುಖ ನಂದಿ ದೇವಾಲಯದಲ್ಲಿ ಬೆರಳೆಣಿಕೆಯಷ್ಟು ಭಕ್ತರಿದ್ದರು. ಬಂಡೆ ಮಹಾಕಾಳಿ ದೇವಾಲಯದಲ್ಲಿ ಜನ ಜಾತ್ರೆಯೇ ನೆರೆದಿತ್ತು. ನೂರಾರು ಜನರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

click me!